ಕೆಲವೊಮ್ಮೆ ಧಾರಾವಾಹಿಯನ್ನು, ಅಲ್ಲಿನ ಪಾತ್ರವನ್ನು ವೈಯಕ್ತಿಕವಾಗಿ ತಗೊಂಡ ಕೆಲವರು ಅಸಭ್ಯ ಭಾಷೆಗಳಲ್ಲಿ ಮಾತನಾಡುತ್ತಾರೆ. ಈಗ ಕರ್ಣ ಧಾರಾವಾಹಿ ನಟಿ ನಮ್ರತಾ ಗೌಡ ವಿರುದ್ಧ ಅನೇಕರು ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಿದ್ದು, ನಟಿ ಈಗ ಎಚ್ಚರಿಕೆ ಕೊಟ್ಟಿದ್ದಾರೆ. 

ಕರ್ಣ ಧಾರಾವಾಹಿ ನಟಿ ನಮ್ರತಾ ಗೌಡ ವಿರುದ್ಧ ಕೆಲವರು ಕೆಟ್ಟ ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಕರ್ಣ ಹಾಗೂ ನಿಧಿ ಪ್ರೀತಿಸುತ್ತಿದ್ದರೆ, ನಿತ್ಯಾ ತೇಜಸ್‌ ಜೊತೆ ಮದುವೆ ಆಗಲು ರೆಡಿಯಾಗಿದ್ದಾರೆ. ಆದರೆ ನಿತ್ಯಾ, ಕರ್ಣನ ಮದುವೆ ಆಗಲಿದೆ ಎಂದು ಪ್ರೋಮೋ ರಿಲೀಸ್‌ ಆಗಿದೆ. ಈ ಧಾರಾವಾಹಿ ಕಥೆಯನ್ನು ಆಧರಿಸಿ, ಪಾತ್ರ ನೋಡಿ ಜನರು ನಮ್ರತಾ ಗೌಡ ಹಾಗೂ ಅವರ ತಾಯಿ ವಿರುದ್ಧ ನೆಗೆಟಿವ್‌ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ನಮ್ರತಾ ಗೌಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಮ್ರತಾ ಗೌಡ ಅವರ ಫ್ಯಾನ್‌ ಪೇಜ್‌ವೊಂದು ನೆಗೆಟಿವ್‌ ಕಾಮಂಟ್‌ ಮಾಡೋರಿಗೆ ಎಚ್ಚರಿಕೆ ಕೊಟ್ಟಿದೆ. ಅದನ್ನೇ ನಮ್ರತಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ನಮ್ರತಾ ಗೌಡ ಕಡೆಯವರು ಹೇಳ್ತಿರೋದೇನು?

“ಕೆಲವರು ಜೀ ಕನ್ನಡ ಪೇಜ್ ಮತ್ತು ಇತರ ಫ್ಯಾನ್ ಪೇಜ್‌ಗಳಲ್ಲಿ ನಮ್ರತಾ ಗೌಡ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿ ನಿರಂತರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ನಮ್ರತಾ ಗೌಡ ಅವರ ತಾಯಿಯ ಬಗ್ಗೆ ಹಾಗೂ ಅವರ ವೈಯಕ್ತಿಕ ಜೀವನದ ಬಗ್ಗೆ ಅಗೌರವಯುತವಾದ ಟೀಕೆಗಳನ್ನು ಮಾಡುತ್ತಿದ್ದಾರೆ. ಈ ವೈಯಕ್ತಿಕ ದಾಳಿಗಳನ್ನು ನಮ್ರತಾ ಗೌಡ ಸ್ವತಃ ಮತ್ತು ಅವರ ಫ್ಯಾನ್ ಪೇಜ್‌ಗಳು ಗಮನಿಸಿವೆ. ಇದು ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ, ಇಂತಹ ಕಾಮೆಂಟ್‌ಗಳು ಮುಂದುವರಿದರೆ, ವ್ಯಕ್ತಿಗಳ ಹೆಸರಿನೊಂದಿಗೆ ಆ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ನಾವು ಪಬ್ಲಿಶ್‌ ಮಾಡ್ತೀವಿ” ಎಂದು ಹೇಳಿದ್ದಾರೆ.

“ನಮ್ರತಾ ಅವರ ವೈಯಕ್ತಿಕ ಜೀವನದ ಬಗ್ಗೆ ಫೋಟೋ ಬಳಸಿ, ನೀವು ಕಾಮೆಂಟ್‌ ಮಾಡ್ತಿರೋದನ್ನು ಈಗಾಗಲೇ ಸಾಕ್ಷಿ ಸಮೇತ ಸಂಗ್ರಹಿಸಿದ್ದೇವೆ. ಈ ಮೂರ್ಖತನವನ್ನು ನೀವು ಇನ್ನೂ ನಿಲ್ಲಿಸದಿದ್ದರೆ, ಈ ವಿಷಯವನ್ನು ಸೈಬರ್ ಕ್ರೈಂ ಅಧಿಕಾರಿಗಳಿಗೆ ವರದಿ ಮಾಡುತ್ತೇವೆ. ಜೊತೆಗೆ ಆ ವ್ಯಕ್ತಿಯ ಫೋಟೋವನ್ನು ಸಹ ಬಹಿರಂಗಪಡಿಸುತ್ತೇವೆ. zebra.384674 ಮತ್ತು @laksh.mipuneethrajkumarsir ಖಾತೆಗಳು ಪದೇ ಪದೇ ಮಿತಿಯನ್ನು ಮೀರಿವೆ. ಈ ಕೃತ್ಯಗಳನ್ನು ತಕ್ಷಣವೇ ನಿಲ್ಲಿಸುವಂತೆ ಇದು ಕೊನೆಯ ಮನವಿ. ನೀವು ಮುಂದುವರಿದರೆ, ನಾವು ನಮ್ಮ ಕಡೆಯಿಂದ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.

ನಮ್ರತಾ ಗೌಡಗೆ ಬೇಸರ

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ನಮ್ರತಾ ಗೌಡ ಭಾಗವಹಿಸಿದ್ದರು. ಆ ವೇಳೆ ನಮ್ರತಾ ಗೌಡ ವಿರುದ್ಧ ಕೆಲವರು ನಿಂದನಾತ್ಮಕ ಮಾತುಗಳನ್ನಾಡಿದ್ದರು. ಆಗಲೂ ನಮ್ರತಾ ಎಚ್ಚರಿಕೆ ಕೊಟ್ಟಿದ್ದರು. ಒಂದಿಷ್ಟು ದಿನಗಳ ಬಳಿಕ ಇದು ತಣ್ಣಗಾಗಿತ್ತು. ಆ ಬಳಿಕ ಈಗ ಕರ್ಣ ಸೀರಿಯಲ್‌ನಲ್ಲಿ ನಿತ್ಯಾ ಪಾತ್ರ ಮಾಡುತ್ತಿದ್ದು, ಈಗ ಮತ್ತೆ ನಿಂದನೆ ಶುರುವಾಗಿದೆ. ಸೀರಿಯಲ್‌ ಸ್ಕ್ರಿಪ್ಟ್‌ಗೂ, ನಮ್ರತಾ ಗೌಡ ಅವರ ವ್ಯಕ್ತಿತ್ವಕ್ಕೆ ಸಂಬಂಧವೇ ಇರೋದಿಲ್ಲ. ಹೀಗಿದ್ದರೂ ಕೆಲವರು ಈ ರೀತಿ ಮಾತನಾಡುತ್ತಿರೋದು ಅವರಿಗೆ ಬೇಸರ ತಂದಿದೆ.