ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉದ್ಯೋಗ ಸೃಷ್ಟಿಯ ಕಾರಣ ನೀಡಿ ಇನ್ನೋವೇಟಿವ್ ಫಿಲಂ ಸಿಟಿಗೆ ನೀಡಿದ್ದ ನೋಟಿಸ್ ಹಿಂಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಪತ್ನಿಯ ಟಿವಿ ವೀಕ್ಷಣೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ನಮ್ಮ ಮನೇಲಿ ನಾನು ಹೋದ ತಕ್ಷಣ ನನ್ನ ಹೆಂಡ್ತಿ ನ್ಯೂಸ್ ನೋಡಲ್ಲ. ಕಲರ್ಸ್, ಬಿಗ್ ಬಾಸ್ ಬರೀ ಇದನ್ನೇ ನೋಡ್ತಾರೆ. ಎಲ್ಲ ಮಹಿಳೆಯರು ಮನೆರಂಜನೆಯನ್ನು ನೋಡಲು ಬಯಸುತ್ತಾರೆ. ಅಲ್ಲಿ ಆಕ್ಟ್ ಮಾಡೋರು ನಾಲ್ಕು ಜನರಿದ್ದರೆ, ಅದಕ್ಕೆ ತಾಂತ್ರಿಕ, ಕ್ಯಾಮೆರಾ ಸೇರಿ 300 ಜನ ಕೆಲಸ ಮಾಡುತ್ತಾರೆ. ಟಿವಿ ನೋಡ್ತಾರಲ್ಲ ಅದರ ಹಿಂದೆ ನೂರಾರು ಜನ ಕೆಲಸ ಮಾಡುತ್ತಿರುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯಲ್ಲಿ ನಡೆದ ನ್ಯೂಸ್ ಅವರ್ ಸ್ಪೆಷಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತಗಾರರು ಯಾವಾಗಲೂ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆಯೇ ಆಲೋಚನೆ ಮಾಡುತ್ತೇವೆ. ಬಿಡಿದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯ ಜಾಲಿವುಡ್ ಸ್ಟೂಡಿಯೋದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ನೋಟೀಸ್ ಕೊಟ್ಟಿದ್ದಾರೆ. ಆದರೆ, ಬೆಂಗಳೂರು ದಕ್ಷಿಣ ಜಿಲ್ಲೆ ಜಿಲ್ಲಾಧಿಕಾರಿ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸೇರಿಕೊಂಡು ಜಾಲಿವುಡ್ ಸ್ಟೂಡಿಯೋಸ್‌ಗೆ ನೋಟಿಸ್ ಕೊಟ್ಟಿರುವುದೇ ನನಗೆ ಗೊತ್ತಿರಲಿಲ್ಲ ಎಂದು ಹೇಳಿದರು.
ನಾನೇ ಕಾಲ್ ಮಾಡಿ ಓಪನ್ ಮಾಡಲು ಹೇಳಿದೆ:
ಯಾವಾಗಲೂ ದುಡ್ಡು, ಬ್ಲಡ್ (Money and Blood) ಎರಡೂ ಸರ್ಕ್ಯೂಲೇಟ್ ಆಗುತ್ತಿರಬೇಕು. ಹೀಗಾಗಿ, ನಾನು ಪರಿಸರ ಮಾಲಿನ್ಯ ನಿಯಂತ್ರಣ ನಿಗಮ ಮಂಡಳಿ ಅಧ್ಯಕ್ಷನಿಗೆ ಫೋನ್ ಮಾಡಿ ಜಾಲಿವುಡ್ ಸ್ಟುಡಿಯೋಸ್ ಓಪನ್ ಮಾಡಲು. ಅವನು ಅದೂ, ಇದೂ ಅಂತಾ ಹೇಳ್ತಿದ್ದನು. ಅದೆಲ್ಲವನ್ನೂ ಏನೂ ಹೇಳಬೇಡ, ಓಪನ್ ಮಾಡು ಎಂದು ಹೇಳಿದೆ. ನಂತರ ಅದನ್ನು ಓಪನ್ ಮಾಡಲು ಅನುಮತಿ ಕೊಡಿಸಲಾಯಿತು. ಇನ್ನು ನಮ್ಮ ರಾಜ್ಯದಲ್ಲಿ ಟೋಯೋಟೋ, ಬಯೋಕಾನ್ ದೊಡ್ಡ ಸಂಸ್ಥೆಗಳಾಗಿದ್ದರೂ, ಸಣ್ಣ-ಪುಟ್ಟ ಪರಿಸರ ಮಾಲಿನ್ಯ ಮಾಡುತ್ತವೆ ಎಂದು ಮುಚ್ಚಲು ಆಗುತ್ತದೆಯಾ?
ನಮ್ಮಲ್ಲೇ ಲೋಕಲ್‌ನ ಸಾಕಷ್ಟು ಜನರು ಬಯೋಕಾನ್ ಅವರು ಕೊಳಚೆ ನೀರು ಬಿಡ್ತಾರೆ, ಅದೂ-ಇದೂ ಕಂಪ್ಲೇಂಟ್ ಮಾಡಿ ಮುಚ್ಚಿಹಾಕುವಂತೆ ದೂರು ಕೊಟ್ಟಿದ್ದಾರೆ. ಆದರೆ, ಅದನ್ನು ಮುಚ್ಚಲು ಆಗುವುದಿಲ್ಲ ಎಂದು, ನಾನೇ ದೂರು ಕೊಟ್ಟವರಿಗೆ ಬೈಯುತ್ತೇನೆ. ದೊಡ್ಡ ದೊಡ್ಡ ಕಂಪನಿಯವರು ನಮಗೆ ಉದ್ಯೋಗ ಕೊಡ್ತಾರೆ, ರಾಜ್ಯಕ್ಕೆ ಕೋಟ್ಯಾಂತರ ರೂ. ಟ್ಯಾಕ್ಸ್ ಕಟ್ಟುತ್ತಿದ್ದಾರೆ, ನಮ್ಮ ದೇಶಕ್ಕೆ ಹಾಗೂ ರಾಜ್ಯಕ್ಕೆ ಅವರಿಂದ ಹೆಮ್ಮೆಯಿದೆ. ಅವರನ್ನು ನಿಲ್ಲಿಸುವುದಕ್ಕೆ, ಅವರ ಕಂಪನಿ ಸ್ಥಗಿತ ಮಾಡಲು ಆಗುತ್ತದೆಯಾ? ಎಂದು ಪ್ರಶ್ನೆ ಮಾಡಿ ಪರಿಸ್ಥಿತಿ ಅರ್ಥೈಸುತ್ತೇನೆ ಎಂದರು.
ನನ್ನ ಹೆಂಡತಿ ಬಿಗ್ ಬಾಸ್ ನೋಡ್ತಾರೆ:
ನನ್ನ ಹೆಂಡತಿ ಮನೆಯಲ್ಲಿ ನ್ಯೂಸ್ ನೋಡುವುದಿಲ್ಲ. ಅದೇನೋ ಕಲರ್ಸ್‌ನಲ್ಲಿ ಬಿಗ್ ಬಾಸ್ ನೋಡಿಕೊಂಡು ಕೂತಿರುತ್ತಾರೆ. ಮಹಿಳೆಯರು ಎಲ್ಲರೂ ಅವರದ್ದೇ ಆದ ಅಭಿರುಚಿಯಂತೆ ಚಾನೆಲ್ ನೋಡುತ್ತಾರೆ. ಇನ್ನು ಜಾಲಿವುಡ್ ಸ್ಟೂಡಿಯೋ ಮೂಲಕ ನೂರಾರು ಜನರು ಕೆಲಸ ಮಾಡುತ್ತಿದ್ದು, ಅವರ ಕೆಲಸ ಕಿತ್ತುಕೊಳ್ಳಲಾಗುವುದಿಲ್ಲ. ನೀವು ನ್ಯೂಸ್ ನೋಡ್ತೀರಾ? ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಕೇಳಿದ್ದಕ್ಕೆ ಅದಕ್ಕೆಲ್ಲಾ ನನಗೆ ಸಮಯವೇ ಇಲ್ಲ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ. ಇದೆಲ್ಲವೂ ಬರೀ ಭ್ರಾಂತಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೂ ಇಲ್ಲಿ, ನಿರ್ಧಾರ ಆಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಹೇಳಿದಂತೆಯೇ ನಡೆಯುತ್ತದೆ. ನಮ್ಮಿಬ್ಬರನ್ನುಯ ಕೂರಿಸಿ ಹೈಕಮಾಂಡ್ ಹೇಳಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ, ನೀವು ಉಪ ಮುಖ್ಯಮಂತ್ರಿ ಎಂದು ಹೇಳಿದರು. ದೆಹಲಿಯವರು ನನಗೆ ನೀನು ಈ ಕೆಲಸದಲ್ಲಿರು, ನೀನು ಈ ಕೆಲಸ ಮಾಡು ಎಂದು ಹೇಳಿದ್ದಾರೆ. ಅದರಂತೆ ನಾನು ಪಾಲಿಸಿಕೊಂಡು ಹೋಗುತ್ತಿದ್ದೇನೆ ಎಂದು ಮಾಹಿತಿ ನೀಡಿದರು.
ಬಿಗ್ ಬಾಸ್ ಸ್ಟೂಡಿಯೋ ಘಟನೆಯ ಹಿನ್ನೆಲೆ
ಕನ್ನಡ ಬಿಗ್ ಬಾಸ್ ಸೀಸನ್ 12ರ ರಿಯಾಲಿಟಿ ಶೋ ಮನೆಯನ್ನು ಜಾಲಿವುಡ್ ಸ್ಟೂಡಿಯೋಸ್‌ದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸ್ಟೂಡಿಯೋದಲ್ಲಿ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿಯಮ ಉಲ್ಲಂಘನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟೀಸ್ ನೀಡಿದರೂ ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರಿಂದ ಜಿಲ್ಲಾಡಳಿತ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಿ ಬೀಗ ಹಾಕಲಾಗಿತ್ತು. ಆದರೆ, ಈ ಬಗ್ಗೆ ಸ್ವತಃ ಮುತುವರ್ಜಿವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ 24 ಗಂಟೆಗಳಲ್ಲಿ ಜಾಲಿವುಡ್ ಸ್ಟೂಡಿಯೋಸ್ ಅನ್ನು ಪುನಾರಂಭಿಸಲು ಅನುಮತಿ ಕೊಡಿಸಿ, 15 ದಿನದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚನೆ ನೀಡಿದ್ದರು.
