ಬಿಗ್ ಬಾಸ್ ಸೀಸನ್ 12ಕ್ಕೆ ನನಗೆ ಆಹ್ವಾನ ನೀಡದಿದ್ದರೆ ಬಿಗ್ ಬಾಸ್ ಮನೆಗೆ ಬಾಂಬ್ ಇಡುವುದಾಗಿ ರೀಲ್ಸ್ ಮೂಲಕ ಬೆದರಿಕೆ ಹಾಕಿದ್ದ ಯುವಕನನ್ನು ಕುಂಬಳಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, ತನ್ನ ಉದ್ದೇಶವನ್ನೂ ಹಾಗೂ ಬಾಂಬ್ ಇಡುವ ಬೆದರಿಕೆ ವಿಡಿಯೋ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಬೆಂಗಳೂರು (ಸೆ.25): ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 12' ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸದಿದ್ದರೆ 'ಬಿಗ್ ಬಾಸ್ ಮನೆಗೆ' ಬಾಂಬ್ ಇಡುವುದಾಗಿ ಬೆದರಿಕೆ ಹಾಕಿ ರೀಲ್ಸ್ ಮಾಡಿದ್ದ ಯುವಕ ಇದೀಗ ಕುಂಬಳಗೋಡು ಪೊಲೀಸರ ಅತಿಥಿಯಾಗಿದ್ದಾನೆ.

ಬಿಗ್ ಬಾಸ್ ಮನೆಗೆ ಹೋಗುವ ಆಸೆಯಲ್ಲಿ ಕೆಲವು ಯುವಕರು ಸಾಮಾಜಿಕ ಜಾಲತಾಣದಲ್ಲಿ ಮಾಡುವ ಹುಚ್ಚಾಟಗಳು ಎಷ್ಟರ ಮಟ್ಟಿಗೆ ಕಾನೂನು ಉಲ್ಲಂಘನೆಯಾಗಬಹುದು ಎಂಬುದಕ್ಕೆ ಈ ಘಟನೆ ಒಂದು ತಾಜಾ ಉದಾಹರಣೆ. 'ಬಿಗ್ ಬಾಸ್ ಸೀಸನ್ 12' ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸದಿದ್ದರೆ ಬಿಗ್ ಬಾಸ್ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿ ರೀಲ್ಸ್ ಮಾಡಿದ್ದ ಯುವಕನೊಬ್ಬನನ್ನು ಕುಂಬಳಗೋಡು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ವೈರಲ್ ರೀಲ್ಸ್ ಮೂಲಕ ಹುಚ್ಚಾಟ:

'Mummy-Ashok16' ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ಯುವಕ ರೀಲ್ಸ್ ಅನ್ನು ಪೋಸ್ಟ್ ಮಾಡಿದ್ದನು. ಈ ವೀಡಿಯೋದಲ್ಲಿ, ಬಿಗ್ ಬಾಸ್ ಕಾರ್ಯಕ್ರಮಕ್ಕೆ ತನ್ನನ್ನು ಕರೆಸದಿದ್ದರೆ, ಆ ಕಾರ್ಯಕ್ರಮ ನಡೆಯುವ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆಯ ಮಾತುಗಳನ್ನು ಹೇಳಿದ್ದನು. ಸಮಾಜದಲ್ಲಿ ಆತಂಕ ಸೃಷ್ಟಿಸುವಂತಹ ಈ ವೀಡಿಯೋ ಶೀಘ್ರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು.

ಇಂತಹ ರೀಲ್ಸ್‌ಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗಲಿದ್ದು, ಅದನ್ನು ಕಾಪಾಡಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದಲೂ ಮನವಿಗಳು ಕೇಳಿಬಂದಿದ್ದವು. ಕೂಡಲೇ ಕುಂಬಳಗೋಡು ಪೊಲೀಸರು ಈ ವೀಡಿಯೋವನ್ನು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಲು ಎನ್.ಸಿ.ಆರ್ (Non-Cognizable Report) ದಾಖಲಿಸಿಕೊಂಡರು.

View post on Instagram

ಪೊಲೀಸರ ಅತಿಥಿಯಾದ ಯುವಕ:

ವೀಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ವೀಡಿಯೋ ಮಾಡಿದ ಯುವಕ ಅಶೋಕ್‌ನನ್ನು ಪತ್ತೆಹಚ್ಚಿ ಕುಂಬಳಗೋಡು ಪೊಲೀಸ್ ಠಾಣೆಗೆ ಕರೆಸಿದರು. ವಿಚಾರಣೆ ವೇಳೆ ಯುವಕ, ತಾನು ಯಾವುದೇ ಕೆಟ್ಟ ಉದ್ದೇಶದಿಂದ ಈ ರೀತಿ ಮಾಡಿಲ್ಲ. ಬದಲಿಗೆ, ಬಿಗ್ ಬಾಸ್ ಮನೆಗೆ ಹೋಗುವ ಸಲುವಾಗಿ, ವೈರಲ್ ಆಗುವ ಉದ್ದೇಶದಿಂದ ಮಾತ್ರ ಈ ರೀತಿಯ ರೀಲ್ಸ್ ಮಾಡಿದ್ದಾಗಿ ಹೇಳಿದ್ದಾನೆ. ಯುವಕನ ಹೇಳಿಕೆ ಆಲಿಸಿದ ನಂತರ ಪೊಲೀಸರು, 'ನೀನು ಮಾಡಿದ ರೀಲ್ಸ್ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಿದೆ ಮತ್ತು ಇಂತಹ ಕೃತ್ಯಗಳು ಗಂಭೀರ ಕಾನೂನು ಸಮಸ್ಯೆಗಳನ್ನು ತರಬಹುದು' ಎಂದು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈ ಘಟನೆಯು ಯುವಜನರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚಾಟ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಬೇಕಾಬಿಟ್ಟಿಯಾಗಿ ಸಮಾಜ ವಿರೋಧಿಯಂತಹ ರೀಲ್ಸ್‌ಗಳನ್ನು ಮಾಡಿದರೆ, ಪೊಲೀಸರು ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಈ ಪ್ರಕರಣ ಸ್ಪಷ್ಟಪಡಿಸಿದೆ. ವೈರಲ್ ಆಗುವ ಆಸೆಯಲ್ಲಿ ಕಾನೂನಿನ ಗಡಿ ಮೀರಿದರೆ, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ವೈರಲ್ ವಿಡಿಯೋ ಡಿಲೀಟ್: 

ಇನ್ನು ಪೊಲೀಸರು ರೀಲ್ಸ್ ಮಾಡಿದ ಯುವಕನ ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆ. ಆದರೆ, ನಾನು ಬಿಗ್ ಬಾಸ್ ಮನೆಗೆ ಹೋಗ್ತೇನೆ, ಬಿಗ್ ಬಾಸ್ ಮನೆಯೊಳಗೆ ನನ್ನನ್ನು ಕರೆಸಿಕೊಳ್ಳುತ್ತಾರೆ ಎಂದು ಹುಚ್ಚನಂತೆ ವರ್ತನೆ ಮಾಡುವ ವಿಡಿಯೋಗಳು ಹಲವು ಹರಿದಾಡುತ್ತಿವೆ. ಇನ್ನು ರಸ್ತೆಯುದ್ದಕ್ಕೂ ಕಿಲೋಮೀಟರ್‌ಗಟ್ಟಲೆ ಬಿಗ್ ಬಾಸ್ ಮನೆಗೆ ಸ್ಕಿಪ್ಪಿಂಗ್ ಮಾಡುತ್ತಾ ಹೋಗಿರುವ ವಿಡಿಯೋ, ಹಲವು ಕಂಟೆಸ್ಟೆಂಟ್‌ಗಳು ನನಗೆ ಬಿಗ್ ಬಾಸ್ ಮನೆಗೆ ಹೋಗುವ ಚಾನ್ಸ್ ಸಿಗುತ್ತದೆ ಎಂದು ಹೇಳಿದ್ದಾರೆಂದು ಯುವಕ ಹೇಳಿಕೊಂಡಿದ್ದಾನೆ. ಅವರೊಂದಿಗಿರುವ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾನೆ.