ನಟಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಪ್ರಕರಣದಲ್ಲಿ, ಗಾಯಾಳು ಅನಿತಾ ಅವರು ಘಟನೆಯನ್ನು ವಿವರಿಸಿದ್ದಾರೆ. ಅಪಘಾತದ ನಂತರ ದಿವ್ಯಾ ಸ್ಥಳದಿಂದ ಪರಾರಿಯಾಗಿದ್ದು, ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಕಾನೂನಿನ ಬಗ್ಗೆ ಉಡಾಫೆಯ ಪೋಸ್ಟ್ ಮಾಡಿದ್ದಾರೆ.

ನಟಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿ ಆಗುತ್ತಿದೆ. ಇದರ ನಡುವೆಯೇ ಪೊಲೀಸರಿಗೂ ಸಿಕ್ಕಿಬೀಳದ ನಟಿ ದಿವ್ಯಾ ಸುರೇಶ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲ ರಿಯಾಕ್ಷನ್ ನೀಡಿದ್ದಾರೆ. ಅಲ್ಲಿಯೂ ಕೂಡ ತಾನು ಆಕ್ಸಿಡೆಂಟ್ ಮಾಡಿ ಇನ್ನೊಬ್ಬರ ನೋವಿಗೆ ಕಾರಣವಾಗಿದ್ದೇನೆ ಎಂಬ ಗಿಲ್ಟ್ ಇಲ್ಲದೇ ಉಡಾಫೆಯಿಂದ ಮಾತನಾಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ಅದರಲ್ಲಿ, ಕಾನೂನಿನ ಮುಂದೆ ಯಾರೂ ದೊಡ್ಡೋರಲ್ಲಾ, ಯಾರೂ ಚಿಕ್ಕೋರಲ್ಲ. ನಾವೆಲ್ಲರೂ ಸಮಾನರೇ. ತಪ್ಪು ಯಾರೇ ಮಾಡಿರಲಿ, ಹೇಗೇ ಮಾಡಿರಲಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ.. ಹೇಳ್ಬೇಕು ಅನ್ನಿಸ್ತು ಹೇಳ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮಂಡಿ ಚಿಪ್ಪು ಒಡೆದು ಹೋಗಿದೆ: 

ಗಾಯಾಳು ಮಂಡಿ ಚಿಪ್ಪು ಒಡೆದು ಹೋಗಿದ್ದರೂ ತಿರುಗಿ ನೋಡದೇ ಓಡಿಹೋದ ದಿವ್ಯಾ ಸುರೇಶ್ ಅವರಿಂದ ಗಾಯಗೊಂಡ ಅನಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಸಪ್ ಬಂದಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯಾಳು, ಸದ್ಯಕ್ಕೆ ನನ್ನ ಕಾಲು ತುಂಬಾ ನೋವು ಇದೆ. ಮೊಣಕಾಲಿಗೆ ತುಂಬಾ ಪೆಟ್ಟಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು ಕಾಲನ್ನು ಊರುವ ಹಾಗಿಲ್ಲ-ಕೆಳಗೆ ಬಿಡುವಂತಿಲ್ಲ ಎಂದು ಹೇಳಿದ್ದಾರೆ.

ನಾವು ಬೈಕಲ್ಲಿ ಹೋಗುವಾಗ ನಾಯಿಗಳು ಅಟ್ಟಾಡಿಸಿಕೊಂಡು ಬಂದಾಗ ನಾವು ಸ್ವಲ್ಪ ಬಲಕ್ಕೆ ತೆಗೆದುಕೊಂಡಾಗ ಜೋರಾಗಿ ಕಾರಿನಲ್ಲಿ ಹೋಗುತ್ತಿದ್ದ ದಿವ್ಯಾ ಸುರೇಶ್ ಅವರು ನಮಗೆ ಗುದ್ದಿದರು. ಅವರು ಸೀದಾ ಬಂದು ಕಾಲಿನ ಮೊಳಕಾಲಿಗೆ ಗುದ್ದಿದ್ದಾರೆ. ಅಲ್ಲಿಯೇ ನನಗ ಮಂಡಿ ಚಿಪ್ಪು ಓಪನ್ ಆಗಿದೆ. ಅಲ್ಲಿ ನಾವು ಗಾಯಗೊಂಡು ಕೂಗುತ್ತಿದ್ದರೂ, ಕಾರನ್ನು ನಿಲ್ಲಿಸದೇ ಮಾನವೀಯತೆಗೂ ಬಂದು ನೋಡದೇ ಪರಾರಿ ಆಗಿದ್ದರು.

ನಾವು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರೇ ಕಾರಿನ ಮಾಲೀಕರ ಮಾಹಿತಿ ನೀಡಿ, ಇದು ನಟಿ ದಿವ್ಯಾ ಸುರೇಶ್ ಅವರ ಕಾರು ಎಂದು ಮಾಹಿತಿ ನೀಡಿದ್ದರು. ಈವರೆಗೂ ಅವರು ನಮ್ಮನ್ನು ಬಂದು ಮಾತನಾಡಿಸಿಲ್ಲ ಎಂದು ಗಾಯಾಳು ಹೇಳಿದ್ದಾರೆ.

ಘಟನೆಯ ಹಿನ್ನೆಲೆಯ ವಿವರ ಇಲ್ಲಿದೆ: 

ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ನಟಿ ದಿವ್ಯಾ ಸುರೇಶ್ ಅವರು ಅ.4ರಂದು ಕಾರಿನಲ್ಲಿ ಹೋಗುವಾಗ ಎಂ.ಎಂ. ರಸ್ತೆಯಿಂದ ಬಂದು ಕಿರಣ್, ಅನುಷಾ ಮತ್ತು ಅನಿತಾ ಅವರು ಆಸ್ಪತ್ರೆಗೆ ಹೋಗಿ ಬರುತ್ತಿದ್ದ ಬೈಕ್‌ಗೆ ಗುದ್ದುತ್ತಾರೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 3 ದಿನವಾದ ನಂತರ ಕಿರಣ್ ಅವರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ಕೊಡುತ್ತಾರೆ. ಪೊಲೀಸರು ಪರಿಶೀಲನೆ ಮಾಡಿದಾದ ನಟಿಯ ಕಾರು ಎಂಬುದು ಗೊತ್ತಾಗಿ ಕಾರನ್ನು ಜಪ್ತಿ ಮಾಡಿರುತ್ತಾರೆ. ಈ ಬೆಳವಣಿಗೆ ನಂತರ ದಿವ್ಯಾ ಸುರೇಶ್ ಅವರು ರಾತ್ರೋ ರಾತ್ರಿ ಬಂದು ಕಾರನ್ನು ಪಡೆದುಕೊಂಡು ಹೋಗಿದ್ದಾರೆ. ಆದರೆ, ಈವರೆಗೂ ದಿವ್ಯಾ ಸುರೇಶ್ ಅವರು ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಗಾಯಾಳು ಅನಿತಾ ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: