‌ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಜಗನ್‌ ಚಂದ್ರಶೇಖರ್ ಅವರು ಗುಡ್‌ನ್ಯೂಸ್‌ ನೀಡಿದ್ದಾರೆ. ಹೊಸ ಸೀರಿಯಲ್‌ ಮೂಲಕ ಅವರು ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. 

ʻಮಾಂಗಲ್ಯʼ ಎಂಬ ಧಾರಾವಾಹಿಯು ಈ ಹಿಂದೆ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿತ್ತು. ಇದು ಅಂದಿನ ಸೂಪರ್‌ ಹಿಟ್‌ ಸೀರಿಯಲ್.‌ ಈಗ ಧಾರಾವಾಹಿ ಟೈಟಲ್‌ನೊಂದಿಗೆ ಹೊಸ ಧಾರಾವಾಹಿ ಪ್ರಸಾರಕ್ಕೆ ಎಲ್ಲ ಸಿದ್ಧತೆಯೂ ಆಗಿದೆ. ʼಮಂಗಳವಾರ ಮಾಂಗಲ್ಯವಾರʼ ಎಂಬ ಘೋಷವಾಕ್ಯದೊಂದಿಗೆ ಸೆಪ್ಟೆಂಬರ್ 2 ಮಂಗಳವಾರದಿಂದ ಸಂಜೆ 7 ಗಂಟೆಗೆ ಹೊಸ ʼಮಾಂಗಲ್ಯʼ ಸೀರಿಯಲ್ ಆರಂಭವಾಗಲಿದೆ. ಈ ರೀತಿ ಮಂಗಳವಾರ ಪ್ರಸಾರ ಆರಂಭಿಸುತ್ತಿರುವ ಕನ್ನಡದ ಮೊಟ್ಟಮೊದಲ ಧಾರಾವಾಹಿ ʼಮಾಂಗಲ್ಯʼ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಧಾರಾವಾಹಿ ಕಥೆ ಏನು?

ಮನೆ ಮಗನಂತೆ ಎಲ್ಲ ಜವಾಬ್ದಾರಿ ನಿಭಾಯಿಸುವಂಥ ಹುಡುಗಿ ದುರ್ಗಾಪುರದ ಮಯೂರಿ. ಕೃಷಿ ಕೆಲಸ, ಹೈನುಗಾರಿಕೆಯಲ್ಲಿ ಇವಳು ಎತ್ತಿದ ಕೈ. ನಗರದದಲ್ಲಿರುವ ಶ್ರೀಮಂತ ಕುಟುಂಬದ ತೋಟದ ಉಸ್ತುವಾರಿ ಸಹ ಇವಳದೇ. ಆ ಶ್ರೀಮಂತ ಕುಟುಂಬದ ಕುಲಪುತ್ರನೇ ಹೀರೋ ತಾರಕ್. ಹಣ ಇದೆ ಅಹಂಕಾರದಲ್ಲಿ ಮೆರೆಯುತ್ತಿರುವ ಅಮ್ಮನ ವರ್ತನೆಗಳು ತಾರಕ್‌ಗೆಅಲರ್ಜಿ. ಕಾರಣಾಂತರದಿಂದ ಅವನು ಮದ್ಯವ್ಯಸನಿಯಾಗಿದ್ದಾನೆ. ಒಳ್ಳೇ ಮನಸ್ಸಿನ ಕುಡುಕ ಒಂದು ಸಂದರ್ಭದಲ್ಲಿ ತನ್ನ ಅಮ್ಮನ ಅಹಂಕಾರ ಮುರಿಯಲು ಬಡ ಕುಟುಂಬದ ಮಯೂರಿ ಜೊತೆ ಮದುವೆ ಆಗ್ತಾನೆ. ಅಲ್ಲಿಂದ ಮಯೂರಿ ಜೀವನದ ಹೊಸ ಪಯಣ ಶುರುವಾಗುತ್ತದೆ.

ನಟ ಜಗನ್‌ ಚಂದ್ರಶೇಖರ್‌ ಎಂಟ್ರಿ

ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ಭಾಗವಹಿಸಿ, ಗಾಂಧಾರಿ ಧಾರಾವಾಹಿ, ಲಕ್ಷಣ ಧಾರಾವಾಹಿಗಳಲ್ಲಿ ನಟಿಸಿದ್ದ ಜಗನ್‌ ಚಂದ್ರಶೇಖರ್,‌ ಈ ಬಾರಿ ʼಮಾಂಗಲ್ಯʼ ಧಾರಾವಾಹಿಯಲ್ಲಿ ಒಳ್ಳೆಯ ಗುಣ ಇರುವ ಕುಡುಕ ಗಂಡನ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಧಾರಾವಾಹಯ ನಿರ್ಮಾಣ ಹಾಗೂ ಪ್ರಧಾನ ನಿರ್ದೇಶನ ಕೂಡ ಅವರದೇ. “ಉದಯ ಟಿವಿ ಜೊತೆ ನನ್ನ ಮೊದಲನೇ ಧಾರಾವಾಹಿ ಇದು. ಇದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಮೂರು ಪಾತ್ರಗಳನ್ನು ನಿರ್ವಹಿಸುತ್ತಿದ್ದೇನೆ. ಕುಡುಕ ತಾರಕ್ ಪಾತ್ರ ಬಹಳ ಸವಾಲಿನದ್ದಾಗಿದೆ. ಇದಕ್ಕಾಗಿ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಿರ್ದೇಶಕನಾಗಿ ತುಂಬ ದೊಡ್ಡ ಜವಾಬ್ದಾರಿ ಇದೆ. ಮುತುವರ್ಜಿಯಿಂದ ಆ ಕೆಲಸ ಮಾಡುತ್ತಿದ್ದೇನೆ. ನಿರ್ಮಾಪಕನಾಗಿ ಇದೊಂದು ಒಳ್ಳೆಯ ಅನುಭವ. ಉದಯ ಟಿವಿಯ ಪ್ರತಿಷ್ಠಿತ ಶೀರ್ಷಿಕೆ ʼಮಾಂಗಲ್ಯʼ. ಈ ಶೀರ್ಷಿಕೆಯಲ್ಲಿ ಮತ್ತೆ ಧಾರಾವಾಹಿ ಮಾಡುತ್ತಿರುದು ನನ್ನ ಅದೃಷ್ಟ” ಎನ್ನುತ್ತಾರೆ ಜಗನ್.

ʻಮಾಂಗಲ್ಯʼದಲ್ಲಿ ಒಳ್ಳೇ ಕುಡುಕ ಗಂಡನನ್ನು ಸರಿದಾರಿಗೆ ತರುವ ಹೆಂಡತಿಯ ಪಾತ್ರದಲ್ಲಿ ಖ್ಯಾತ ಕಲಾವಿದೆ ಐಶ್ವರ್ಯ ಪಿಸ್ಸೆ ಕಾಣಿಸಿಕೊಳ್ಳುತ್ತಿದ್ದಾರೆ. ಅನುರೂಪ, ಗಿರಿಜಾ ಕಲ್ಯಾಣ, ಸರ್ವಮಂಗಳ ಮಾಂಗಲ್ಯೇ, ಸುಂದರಿ ಮುಂತಾದ ಕನ್ನಡ ಧಾರಾವಾಹಿಗಳಲ್ಲದೆ, ತೆಲುಗು ಧಾರಾವಾಹಿಗಳು ಹಾಗೂ ಸಂತು ಸ್ಟ್ರೇಟ್ ಫಾರ್ವರ್ಡ್, ಶ್ರೀಕಂಠ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. “ಸುಂದರಿ ಧಾರಾವಾಹಿ ನಂತರ ನನ್ನನ್ನು ಈ ಪಾತ್ರಕ್ಕೆ ಉದಯ ಟಿವಿ ಆಯ್ಕೆ ಮಾಡಿಕೊಂಡಿದ್ದು ಖುಷಿಯ ವಿಚಾರ. ಮಯೂರಿ ಅನ್ನೋ ಜವಾಬ್ದಾರಿಯುತ ಮೃದು ಸ್ವಭಾವದ ಹುಡುಗಿಯ ಪಾತ್ರಕ್ಕೆ ನ್ಯಾಯ ಸಲ್ಲಿಸುವ ವಿಶ್ವಾಸ ಹೊಂದಿದ್ದೇನೆ. ವೀಕ್ಷಕರು ದೀರ್ಘಕಾಲ ʼಮಾಂಗಲ್ಯʼವನ್ನು ಮುನ್ನಡೆಸುತ್ತಾರೆ ಎಂಬ ಭರವಸೆ ಇದೆ” ಎನ್ನುತ್ತಾರೆ ಐಶ್ವರ್ಯ ಪಿಸ್ಸೆ.

ಜಾನ್ಸಿ ಕಾವೇರಪ್ಪ, ಬಿ.ಎಂ.ವೆಂಕಟೇಶ್, ಇಂಚರಾ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್, ದಾಮಿನಿ ಮುಂತಾದವರು ನಟಿಸುತ್ತಿದ್ದಾರೆ. ನವೀನ್ ಸೋಮನಹಳ್ಳಿ ಸಂಚಿಕೆ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಛಾಯಾಗ್ರಹಣ ಮಂಜು, ಸಂಕಲನ ಧನು ಅವರದು.

ಉದಯ ಟಿವಿ ಜೊತೆ ʼಮಾಂಗಲ್ಯʼದ ಸಂಬಂಧ ಅವಿನಾಭಾವ. ಕನ್ನಡದ ಅತಿ ದೀರ್ಘ ಜನಪ್ರಿಯ ಧಾರಾವಾಹಿಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊತ್ತಿದ್ದ ʼಮಾಂಗಲ್ಯʼ ಈ ಹಿಂದೆ ಎಂಟು ವರ್ಷ ಕಾಲ ಪ್ರಸಾರವಾಗಿ ಅಳಿಸಲಾಗದಂಥ ಛಾಪು ಮೂಡಿಸಿತ್ತು. ಅದೇ ಹಾದಿಯಲ್ಲಿ ಹೊಸ ʼಮಾಂಗಲ್ಯʼ ವೀಕ್ಷಕರ ಮನ ಗೆಲ್ಲಲಿದೆ ಎಂಬುದು ಉದಯ ಟಿವಿಯ ಆಶಯ.