ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ, ಪೊಲೀಸರ ಆಗಮನದ ಮುನ್ಸೂಚನೆ ಪಡೆದ ಸಮೀರ್ ತಲೆಮರೆಸಿಕೊಂಡಿದ್ದಾರೆ. ಸಮೀರ್ ತಮ್ಮ ಚಿಕ್ಕಮ್ಮನ ಮಗನ ಮೊಬೈಲ್ ಬಳಸಿ ಪೊಲೀಸರನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದರು.
ಬೆಂಗಳೂರು ಗ್ರಾಮಾಂತರ: ಆನೇಕಲ್ ತಾಲೂಕಿನ ಹುಲ್ಲಹಳ್ಳಿ ಬಳಿಯ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿ ವಾಸವಾಗಿದ್ದ ಯೂಟ್ಯೂಬರ್ ಸಮೀರ್ ಮನೆ ಮೇಲೆ ಶನಿವಾರ ಬೆಳಿಗ್ಗೆ ಪೊಲೀಸರು ದಾಳಿ ನಡೆಸಿದರು. ಆದರೆ, ಪೊಲೀಸರ ಆಗಮನವನ್ನು ಮುಂಚಿತವಾಗಿಯೇ ಊಹಿಸಿದ್ದ ಸಮೀರ್, ಪೊಲೀಸರು ಬರುವ ಕೆಲವೇ ಕ್ಷಣಗಳ ಮುಂಚೆ ಮನೆ ಬಿಟ್ಟು ಪರಾರಿಯಾಗಿದ್ದ. ತಮ್ಮ ವಿರುದ್ಧ ನಡೆದ ತನಿಖೆ ಮತ್ತು ಪೊಲೀಸ್ ಚಲನವಲನವನ್ನು ಗಮನಿಸಿ, ಸಮೀರ್ ತಮ್ಮ ಸ್ವಂತ ಮೊಬೈಲ್ ಬಳಸುವುದನ್ನು ಬಿಟ್ಟು, ಕಳೆದ ಒಂದು ವಾರದಿಂದ ತಮ್ಮ ಚಿಕ್ಕಮ್ಮನ ಮಗನ ಮೊಬೈಲ್ ಬಳಸುತ್ತಿದ್ದರು. ಇದರಿಂದ ಪೊಲೀಸರ ನಿಗಾವನ್ನು ತಪ್ಪಿಸಲು ಪ್ರಯತ್ನಿಸಿದ್ದರು. ಆದರೆ, ಸಮೀರ್ ಮೊಬೈಲ್ ಫೋನ್‌ನ ಸಿಡಿಆರ್ ಹಾಗೂ ಟವರ್ ಡಂಪ್ ಲೊಕೇಷನ್ ಡೇಟಾ ಆಧರಿಸಿ ಪೊಲೀಸರು ನೆಲೆಸಿದ್ದ ಜಾ ಪತ್ತೆಹಚ್ಚಿದರು. ಈ ಮಾಹಿತಿಯ ಮೇರೆಗೆ ಬನ್ನೇರುಘಟ್ಟ ಠಾಣೆ ಪೊಲೀಸರ ಸಹಕಾರದೊಂದಿಗೆ ಬೆಳ್ತಂಗಡಿ ಪೊಲೀಸರು ಶನಿವಾರ ಬೆಳಿಗ್ಗೆ ಸಮೀರ್ ಮನೆಗೆ ದಾಳಿ ನಡೆಸಿದರು. ಆದರೆ ಪೊಲೀಸರು ಮನೆಗೆ ಪ್ರವೇಶಿಸುವ ಮುಂಚೆಯೇ ಸಮೀರ್ ಪರಾರಿಯಾಗಿದ್ದರಿಂದ ಬಂಧನ ವಿಫಲವಾಯಿತು.
ಪಕ್ಕದ ಮನೆ ವಾಸಿಗಳ ಪ್ರತಿಕ್ರಿಯೆ
ಸಮೀರ್ ಪಕ್ಕದ ಮನೆಯಲ್ಲಿದ್ದ ಆಶಾ ಎಂಬ ಮಹಿಳೆ ಮಾತನಾಡಿ, “ಕಳೆದ ಒಂದು ವರ್ಷದಿಂದ ಸಮೀರ್ ತಮ್ಮ ತಾಯಿ ಆಪ್ರೋಜಾ ಜೊತೆ ಇಲ್ಲಿ ವಾಸಿಸುತ್ತಿದ್ದರು. ಆದರೆ ಅವರು ಹೆಚ್ಚು ಸಮಯ ಮನೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸಮೀರ್ ಯೂಟ್ಯೂಬರ್ ಎಂಬುದು ನಮಗೆ ಇತ್ತೀಚಿನ ಧರ್ಮಸ್ಥಳ ಪ್ರಕರಣ ಬೆಳಕಿಗೆ ಬಂದ ನಂತರವೇ ತಿಳಿಯಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಐದಾರು ಮಂದಿ ಪೊಲೀಸರು ಬಂದಿದ್ದರು. ಮಧ್ಯಾಹ್ನದ ವೇಳೆಗೆ ಅವರು ಹಿಂತಿರುಗಿದರು” ಎಂದು ತಿಳಿಸಿದ್ದಾರೆ. ಸಮೀರ್ ತಾಯಿ ಬಳ್ಳಾರಿ ಮೂಲದವರು. ಇತ್ತೀಚೆಗೆ ಅವರು ಊರಿಗೆ ಹೋಗಿದ್ದರು. ಸಮೀರ್‌ನನ್ನು ನಾವು ತುಂಬಾ ದಿನಗಳಿಂದ ನೋಡಿರಲಿಲ್ಲ” ಎಂದು ಹೇಳಿದ್ದಾರೆ.
ಜಾಮೀನಿಗೆ ಅರ್ಜಿ ಸಲ್ಲಿಸಿದ ಸಮೀರ್
ಧರ್ಮಸ್ಥಳದಲ್ಲಿ ನಡೆದ ಪ್ರಕರಣದ ಹಿನ್ನೆಲೆಯಲ್ಲಿ ಸಮೀರ್ ವಿರುದ್ಧ ಪೊಲೀಸರು ಬಂಧನ ಕ್ರಮ ಕೈಗೊಳ್ಳಬಹುದೆಂಬ ಆತಂಕದಿಂದ, ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಅರ್ಜಿ ಮಂಗಳೂರು ಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಇಂದು ಸಂಜೆ ಜಾಮೀನು ಆದೇಶ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬಂಧನದ ಭೀತಿಯಿಂದ ಮುಂಚಿತ ಎಚ್ಚರಿಕೆ ತೆಗೆದುಕೊಂಡ ಸಮೀರ್, ನ್ಯಾಯಾಲಯದ ಮೂಲಕ ಸೇಫ್ ಆಗಲು ನೊಡುತ್ತಿದ್ದಾರೆ.
