ಯೂಟ್ಯೂಬರ್ ಮುಕಳೆಪ್ಪ, ಹಿಂದೂ ಯುವತಿ ಗಾಯತ್ರಿಯನ್ನು ಮದುವೆಯಾದ ನಂತರ 'ಲವ್ ಜಿಹಾದ್' ಆರೋಪ ಎದುರಿಸಿದ್ದರು. ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ, ಇದು ಪ್ರೀತಿಯಿಂದಾದ ಮದುವೆಯೇ ಹೊರತು ಮತಾಂತರವಲ್ಲ ಎಂದು ಮುಕಳೆಪ್ಪ ಸ್ಪಷ್ಟಪಡಿಸಿದ್ದಾರೆ. ವಿವಾದ ಬದಿಗೊತ್ತಿ ಸಂತೋಷದಿಂದಿರುವ ಫೋಟೋ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬ್ ವಿಡಿಯೋ ಹಾಗೂ ಕಾಮಿಡಿ ರೀಲ್ಸ್‌ಗಳನ್ನು ಮಾಡುತ್ತಾ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದ್ದ ಮುಕಳೆಪ್ಪ ಅಲಿಯಾಸ್ ಕ್ವಾಜಾ, ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿ ಗಾಯತ್ರಿ ಮದುವೆ ಮಾಡಿಕೊಂಡಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಹಲವು ಹಿಂದೂ ಸಂಘಟನೆಗಳು ಪ್ರತಿಭಟನೆ ಹೋರಾಟ ಮಾಡಿದ್ದು, ಲವ್ ಜಿಹಾದ್ ಮಾಡಿದ್ದನ್ನು ಖಂಡನೆ ಮಾಡಿದ್ದವು. ಇದರ ಬೆನ್ನಲ್ಲಿಯೇ ಎಲ್ಲ ವಿವಾದಗಳನ್ನು ಸುಖಾಂತ್ಯ ಮಾಡಿಕೊಂಡು ಇದೀಗ ಹೆಂಡತಿಯೊಂದಿಗೆ ಖುಷಿಯಾಗಿರುವ ಫೋಟೋ ಹಂಚಿಕೊಂಡಿದ್ದಾರೆ.
ನಮಗೆ ಕಿರಿಕಿರಿ ಮಾಡಬೇಡಿ ಎಂದು ಮನವಿ:
ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ 'ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ನ್ಯೂಸ್ ಮತ್ತು ಸೋಶಿಯಲ್ ಮಿಡಿಯಾದಾಗ ಎಲ್ರೂ ನೋಡಿರ್ತೀರಿ ಮುಕುಳೆಪ್ಪ ಲವ್ ಜಿಹಾದ್ ಮಾಡ್ಯಾನ ಅಂತಾ. ಆದರೆ ನಾನು ಯಾವುದೇ ತರಹದ ಲವ್ ಜಿಹಾದ್ ಮಾಡಿಲ್ಲ. ನಾನು ಇಷ್ಟಪಟ್ಟು ಲವ್ ಮಾಡಿ ಮದುವೆ ಮಾಡಿಕೊಂಡಿದ್ದೇವೆ. ನಾವು ಚೆನ್ನಾಗಿ, ಖುಷಿಯಿಂದ ಬಾಳ್ವೆ ಮಾಡಿಕೊಂಡು ಹೋಗ್ತಿದ್ದೀವಿ. ಯಾರೂ ನಮಗೆ ಕಿರಿಕಿರಿ ಮಾಡೋದಕ್ಕೆ ಹೋಗಬೇಡಿ' ಎಂದು ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ ಮನವಿ ಮಾಡಿಕೊಂಡಿದ್ದಾರೆ.
ಮುಂದುವರೆದು 'ನಾನು ಗಾಯತ್ರಿ ಜಾಲಿಹಾಳ ಅವರನ್ನು ಯಾವುದೇ ತರಹದ ಮತಾಂತರ ಮಾಡಿಲ್ಲ. ನಾನು ಕರ್ನಾಟಕದಲ್ಲಿ ಹುಟ್ಟೇನೆಂದರೆ, ಕರ್ನಾಟಕದ ಅನ್ನ ತಿಂತಿದ್ದೇನೆ. ನಾನು ಒಬ್ಬ ಕನ್ನಡಿಗ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಿದ್ದೇನೆ' ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಕೌಟುಂಬಿಕ ಹಾಸ್ಯ ವೀಡಿಯೊಗಳ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿರುವ ಯೂಟ್ಯೂಬರ್ ಮುಕಳೆಪ್ಪ, ತಾನು ರೀಲ್ಸ್ ಮಾಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದ ಯುವತಿ ಗಾಯತ್ರಿ ಜಾಲಿಹಾಳ್ ಅವರನ್ನು ಕಳೆದ 3 ವರ್ಷಗಳಿಂದ ಪ್ರೀತಿಸಿ ಇತ್ತೀಚೆಗೆ ಮದುವೆ ಮಾಡಿಕೊಂಡಿದ್ದರು. ಮುಂಡಗೋಡದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವುದಾಗಿ ಬಾಡಿಗೆ ಕರಾರು ಪತ್ರವನ್ನು ಹಾಗೂ ಇತರೆ ದಾಖಲೆಗಳನ್ನು ತೋರಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತರ ಯುವತಿ ಗಾಯತ್ರಿ ಹಿಂದೂ ಸಂಸ್ಕೃತಿ ಹಾಗೂ ಪದ್ದತಿಯನ್ನು ಬಿಟ್ಟು ಸಂಪೂರ್ಣವಾಗಿ ಮುಸ್ಲಿಂ ಮಹಿಳೆಯಂತೆ ಕಾಣಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಲವ್ ಜಿಹಾದ್ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿದ್ದವು. ಇದಕ್ಕೆ ಗಾಯತ್ರಿ ಜಾಲಿಹಾಳ್ ಅವರ ತಂದೆ-ತಾಯಿ ಕೂಡ ಯೂಟ್ಯೂಬ್ ರೀಲ್ಸ್, ವಿಡಿಯೋ ಮಾಡಲು ಗಾಯತ್ರಿ ಅಕ್ಕಾ, ಅಂತಾ ಕರ್ಕೊಂಡು ಹೋಗಿ ಮದುವೆ ಮಾಡಿಕೊಂಡಿದ್ದಾನೆ ಎಂದು ಗಂಭೀರ ಆರೋಪ ಮಾಡಿ, ಪೊಲೀದ್ ಠಾಣೆಗೆ ದೂರು ನೀಡಿದ್ದರು.
ಹಿಂದೂ ಸಂಘಟನೆಗಳಾದ ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರಾವಾಡದಲ್ಲಿ ಹಾಗೂ ಮುಂಡಗೋಡದಲ್ಲಿ ಪ್ರತಿಭಟನೆ ಮಾಡಿದ್ದವು. ನಿರಂತರ ಹೋರಾಟದ ಬಳಿಕ ಹಾಜರಾಗಿದ್ದ ಮುಕಳೆಪ್ಪ 'ತಾನು ಯಾರನ್ನೂ ಮತಾಂತರ ಮಾಡಿಲ್ಲ, ಇದು ಪ್ರೀತಿಸಿ ಮಾಡಿಕೊಂಡಿರುವ ಮದುವೆ ಎಂದು ಪತ್ನಿ ಗಾಯತ್ರಿಯೊಂದಿಗೆ ಬಂದು ವೀಡಿಯೊ ಬಿಡುಗಡೆ ಮಾಡಿದ್ದರು.
'ನನ್ನ ಮದುವೆಯನ್ನು ಕೆಲವರು 'ಲವ್ ಜಿಹಾದ್' ಎಂದು ಬಿಂಬಿಸುತ್ತಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು. ನಾವು ಇಬ್ಬರೂ ಪರಸ್ಪರ ಇಷ್ಟಪಟ್ಟು 3 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ನಾವಿಬ್ಬರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ನಾನು ಹುಟ್ಟಿದ ಧರ್ಮದಲ್ಲೇ ಇರುತ್ತೇನೆ, ನನ್ನ ಪತ್ನಿ ಹುಟ್ಟಿದ ಧರ್ಮದಲ್ಲೇ ಇರುತ್ತಾಳೆ. ನಾವು ಯಾರೂ ಮತಾಂತರಗೊಂಡಿಲ್ಲ' ಎಂದು ಸ್ಪಷ್ಟಪಡಿಸಿದ್ದರು.
