9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯಾದ ಘಟನೆ ಎಲ್ಲವನ್ನು ತಲೆ ಕೆಳಗೆ ಮಾಡಿಸಿದೆ. ವಿದ್ಯಾರ್ಥಿನಿ ತಮ್ಮ ಶಾಲೆ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಯಾದಗಿರಿ.
ಯಾದಗಿರಿ (ಆ.28): ಜಿಲ್ಲೆಯ ಶಹಾಪುರ ನಗರದ ವಸತಿ ಶಾಲೆಯೊಂದರಲ್ಲಿ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ನಡೆದು ಹೋಗಿದೆ. ಓದಿ ಬರೆಯುವ ಕೈಯಲ್ಲಿ ಮಗುವನ್ನು ಎತ್ತಿರುವ ಘಟನೆ ನಡೆದಿದೆ. ಇದು ರಾಜ್ಯದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಆಟ ಆಡುವ ವಯಸ್ಸಿನಲ್ಲಿ ತಾಯಿಯಾದ ವಿದ್ಯಾರ್ಥಿನಿ: ವಸತಿ ಶಾಲೆ ಅಂದ್ರೆ ಸಾಕಷ್ಟು ವ್ಯವಸ್ಥೆ ಇರುತ್ತದೆ, ನಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ ಅಂತ ಪೋಷಕರಜ ದೂರದ ಊರುಗಳಿಂದ ಶಾಲೆಗೆ ಕಳುಹಿಸಿರುತ್ತಾರೆ. ವಸತಿ ನಿಲಯಲ್ಲಿ ಅದರಲ್ಲೂ ಬಾಲಕಿಯರನ್ನು ಬಹಳಷ್ಟು ಜಾಗರೂಕತೆಯಿಂದ ನೋಡಿಕೊಳ್ತಾರೆ ಅಂತ ಪೋಷಕರು ಅಂದು ಕೊಂಡಿದ್ದಾರೆ. ಆದರೆ 17 ವರ್ಷದ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯಾದ ಘಟನೆ ಎಲ್ಲವನ್ನು ತಲೆ ಕೆಳಗೆ ಮಾಡಿಸಿದೆ. ವಿದ್ಯಾರ್ಥಿನಿ ತಮ್ಮ ಶಾಲೆ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಹೊಟ್ಟೆ ನೋವು ತಾಳಲಾರದೆ ಚಿರಾಡುತ್ತಿದ್ದಳು. ಆಗ ಬಾಲಕಿಯ ಸಹಪಾಠಿಗಳು ಶೌಚಾಲಯಕ್ಕೆ ಕರೆದೊಯ್ದರು. ಶೌಚಾಲಯದಲ್ಲೇ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಾಲಕಿಯ ತಂದೆ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಮಗಳ ಈ ವಿಚಾರದಿಂದ ಆಘಾತಗೊಂಡ ಬಾಲಕಿಯ ತಾಯಿ, ಲಿಂಗಸುಗೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಐವರ ವಿರುದ್ಧ ಕೇಸ್ ದಾಖಲು, ನಾಲ್ವರು ಅಮಾನತು: ಈ ಘಟನೆಯ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆಯಡೀ ಪ್ರಕರಣ ದಾಖಲಾಗಿದ್ದು, ಶಾಲೆಯ ನಾಲ್ವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಬಾಲಕಿಯ ಸಹೋದರ ಶರಣಬಸಪ್ಪ ವಿರುದ್ಧ ಕೇಸ್ ದಾಖಲಾಗಿದೆ. ವಸತಿ ಶಾಲೆಯ ಪ್ರಾಂಶುಪಾಲೆ ಬಸಮ್ಮ, ವಾರ್ಡನ್ ಗೀತಾ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸ್ಟಾಫ್ ನರ್ಸ್ ಕಾವೇರಮ್ಮ ಹಾಗೂ ಬಾಲಕಿಯ ಸಹೋದರ ಶರಣಬಸಪ್ಪ ಸೇರಿ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್, ವಿಜ್ಞಾನ ಶಿಕ್ಷಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸ್ಟಾಫ್ ನರ್ಸ್ ಹೊರಗುತ್ತಿಗೆ ಸಿಬ್ಬಂದಿಯಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ನಾಗರಿಕ ಸಮಾಜವೆ ತಲೆತಗ್ಗಿಸುವ ಘಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ: ವ್ಯವಸ್ಥೆಯ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ಯಾಕಂದರೆ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಸಾಕಷ್ಟು ಚರ್ಚೆ ಮಾಡುವಂತಾಗಿದೆ. ಕಲಿಯುವ ವಯಸ್ಸಲ್ಲಿ ಕೈಯಲ್ಲಿ ಮಗುವನ್ನು ಎತ್ತಾಡುವಂತೆ ಮಾಡಿದ್ದಾಗ, ವಸತಿ ಶಾಲೆಯ ಪ್ರಾಂಶುಪಾಲೆ, ವಾರ್ಡನ್, ಸ್ಟಾಪ್ ನರ್ಸ್ ಏನು ಮಾಡ್ತಿದ್ರು, ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ ತೋರದೇ ನಿರ್ಲಕ್ಷ್ಯ ಯಾಕೆ ವಹಿಸಿದ್ರು ಎಂಬುದು ಪ್ರಶ್ನೆಯಾಗಿದೆ. ಹಾಗಾದ್ರೆ ಈ ಅಧಿಕಾರಿಗಳು ಕೇವಲ ಸಂಬಳ ಪಡೆದು ಕೂತ್ರೆ ವಿದ್ಯಾರ್ಥಿನಿಯರ ಬಗ್ಗೆ ಕೇರ್ ಮಾಡುವವರು ಯಾರು.? ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಜೈಲಿಗಟ್ಟಬೇಕಾಗಿದೆ.
