Apoorva K Bhat Death: ಪುತ್ತೂರು ಮೂಲದ ಅಪೂರ್ವ ಕೆ ಭಟ್‌ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪೂರ್ವ ಹೋಗುತ್ತಿದ್ದ ಕಾರ್‌ಗೆ ಬಸ್‌ ಬಂದು ಗುದ್ದಿತ್ತು. ಹೀಗಾಗಿ ಅಪೂರ್ವ ಕೋಮಾ ಸೇರಿಕೊಂಡಿದ್ದರು. ಈ ಘಟನೆ ಬಗ್ಗೆ ಅಪೂರ್ವ ಪತಿ ಆಶೀಶ್‌ ಸರಡ್ಕ ಏನು ಹೇಳಿದ್ದರು? 

ಸೋಶಿಯಲ್‌ ಮೀಡಿಯಾದಲ್ಲಿ ಫೈನಾನ್ಸ್‌ ಬಗ್ಗೆ ಮಾಹಿತಿ ಕೊಟ್ಟು, ಅನೇಕರಿಗೆ ಪರಿಚಿತರಾಗಿದ್ದ ಆಶೀಶ್‌ ಸರಡ್ಕ ಅವರ ಪತ್ನಿ ಅಪೂರ್ವ ಕೆ ಭಟ್‌ ಇನ್ನಿಲ್ಲ. ಕಳೆದ ಮೇ ತಿಂಗಳಿನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಇಂದು ಸಂಜೆ 6 ಗಂಟೆಗೆ ನಿಧನರಾಗಿದ್ದಾರೆ. ಈ ಘಟನೆ ಬಗ್ಗೆ ಆಶೀಶ್‌ ಸರಡ್ಕ ಅವರು ಕಳೆದ ಜೂನ್‌ನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಶೀಶ್‌ ಸರಡ್ಕ ಫೇಸ್‌ಬುಕ್‌ ಪೋಸ್ಟ್‌ ಹೀಗಿದೆ!

ಮೇ 27ಕ್ಕೇ ನನ್ನ ದಿನ ಶುರುವಾಗಿದ್ದು ಬೆಳಗ್ಗೆ 5.30ಗೆ. redbus ಅಲ್ಲಿ ಬಸ್ ಬುಕ್ ಮಾಡಿದ್ರೆ ಇಳಿಯುವ ಒಂದು ಸ್ಟಾಪ್ ಮುಂಚೆ ಅದು ನಿಮಗೊಂದು ಕಾಲ್ ಮಾಡಿ ಎಬ್ಬಿಸುತ್ತೆ... ಅಪೂರ್ವ ಮತ್ತೆ ಮಗಳಿಗೆ ಬಸ್ ಬುಕ್ ಮಾಡಿದಾಗ ನನ್ನ ನಂಬರ್ ತಪ್ಪಿ ಕೊಟ್ಟಿದ್ದೆ.. ಹಾಗಾಗಿ 5.30ಗೆ ಅದು ಕಾಲ್ ಮಾಡಿತ್ತು.. ಎದ್ದ ಕೂಡಲೇ ನೋಡಿದ್ದು ಅಪ್ಪುವಿನ ಮೆಸೇಜ್.. ಮಗಳು ರಾತ್ರಿ ಮಲಗಿದ್ಲಾ ಅಂತಾ ಕೇಳಬೇಕಿತ್ತು.. ಮಳೆಯಿದ್ದ ಕಾರಣ ಮೈಸೂರಿನ ಮೂಲಕ ಹೋಗೋದು ಅಂದಿದ್ದ ಬಸ್ಸಿನವರು ಹೋದ್ದು ಶಿರಾಡಿಯ ಮೇಲೆಯೇ.. ಅದನ್ನು ಅಪೂರ್ವ ರಾತ್ರಿ 3 ಗಂಟೆಗೆ ಹೇಳಿದ್ಲು... ಅದನ್ನು ನೋಡಿ ಸ್ವಲ್ಪ ಮಲಗಿ ಎದ್ದು ಸ್ನಾನ ಮಾಡಿದೆ..

ನಾನೊಬ್ಬನೇ ಇರಬೇಕು 4 ದಿನ ಅಂತಾ ಹಿಂದಿನ ದಿನ 2 ದಿನಕ್ಕೆ ಆಗುವಷ್ಟು ತಿಂಡಿ, ಸಾಂಬಾರು ಎಲ್ಲಾ ಮಾಡಿ ಹೋಗಿದ್ಲು.. ಅವಳು ಮಾಡಿಟ್ಟು ಹೋದ್ದು ನಾನು ತಿನ್ನದೇ ಇದ್ದರೆ ಅವಳಿಗೆ ಭಯಂಕರ ಬೇಜಾರು ಆಗ್ತಿತ್ತು.. ಮುಂಚೆ ಅದರ ಅನುಭವ ಆಗಿತ್ತು. ಹಾಗಾಗಿ ಎಲ್ಲ ಬಿಸಿ ಮಾಡಿದೆ. ಆಫೀಸ್ ಕೆಲಸ ತುಂಬ ಇತ್ತು ಆವತ್ತು.. ಏನೆಲ್ಲಾ ಮಾಡೋದಿದೆ ಅಂತಾ ಆಲೋಚನೆ ಮಾಡಿ ಮೊದಲು ದೇವರ ಪೂಜೆ ಜಪಗಳು ಆಗಲಿ ಅಂತಾ ದೇವರ ಕೋಣೆ ಸ್ವಚ್ಛ ಮಾಡಿ, ಹೂವು ಕುಯ್ದು, ಗರಿಕೆ ಹುಲ್ಲು ಕುಯ್ತಾ ಇದ್ದೆ..

ಒಂದು ಕಾಲ್ ಬಂತು.. ಮಾಡಿದ್ದು ನಿಮಗೆಲ್ಲರಿಗೂ ಗೊತ್ತಿರಬಹುದಾದ Mahesh Kaje ಅಣ್ಣಾ . ಇವರು ಅಪೂರ್ವಳ ಭಾವ . ಆ ದಿನ ಅಪೂರ್ವಳ ಅಜ್ಜನ ತಿಥಿ.. ಅದರ ಬಗ್ಗೆ ಏನಾದ್ರೂ ಕೇಳೋಕೆ ಕಾಲ್ ಮಾಡಿದ್ದು ಅಂತಾ ಯೋಚಿಸಿ 'ಎಂತ ಅಣ್ಣಾ ' ಅಂತಾ ಕೇಳಿದೆ..

ನೀನು ಎಲ್ಲಿದ್ದಿ , ಎಂತ ಕಥೆ ಅಂತಾ ಕೇಳಿದ್ರು.. ನಾನು ಬೆಂಗಳೂರು ಮನೆಯಲ್ಲಿ ಇದ್ದೇನೆ ಅಂದೆ.. ಏನಾಯ್ತು ಅಣ್ಣಾ ಅಂದೆ. ತಮ್ಮಣ್ಣ ಮಾವ ಮತ್ತೆ ಅಪೂರ್ವ ಹೋಗ್ತಾ ಇದ್ದ ಕಾರ್ ಆಕ್ಸಿಡೆಂಟ್ ಆಗಿದೆ. ಮಗಳು ಅಳ್ತಾ ಇದ್ದಾಳೆ.. ಅವಳು ಹುಶಾರಿದ್ದಾಳೆ .. ಅವರಿಬ್ಬರಿಗೆ ಸ್ವಲ್ಪ ಪೆಟ್ಟಾಗಿದೆ.. ಪ್ರಗತಿ ಹಾಸ್ಪಿಟಲ್‌ಗೆ ಕರ್ಕೊಂಡು ಬಂದಿದ್ದಾರೆ.. Tension ಮಾಡಬೇಡ.. ಮಗಳತ್ರ ಒಮ್ಮೆ ಮಾತಾಡಿ ಸಮಾಧಾನ ಮಾಡು ಅಂದ್ರು.. ಮಾತಾಡಿದೆ.. ಮಗಳು ಅತ್ತಳು.. ಅಪ್ಪಾ ಬತ್ತೆ ಮಗಳೇ .. ಕೂಗಡ ಅಂತಾ ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದೆ. ಅಣ್ಣಾ 2 ನಿಮಿಷದಲ್ಲಿ ಕಾಲ್ ಮಾಡ್ತೇನೆ ಅಂದ್ರು.. ನನ್ನ ತಲೆ ಓಡ್ತಾ ಇರಲಿಲ್ಲ . ಅಪ್ಪನಿಗೆ ಕಾಲ್ ಮಾಡಿ ಸುದ್ದಿ ಹೇಳಿದೆ.... ನನ್ನ ಸ್ನೇಹಿತನಿಗೆ ಕಾಲ್ ಮಾಡಿ ನೀನು ಸೀದಾ ಆಸ್ಪತ್ರೆಗೆ ಹೋಗು ಅಂದೆ . ಅವನು ಕೂಡಲೇ ಹೊರಟ. ಇವರಿಬ್ಬರನ್ನು KMC ಮಂಗಳೂರಿಗೆ ಕಳುಹಿಸುವ ವ್ಯವಸ್ಥೆ ಆಗ್ತಿದೆ. ನೀನು ಹೇಗೆ ಬರ್ತೀಯಾ ಅಂದ್ರು.. ನಾನು ಹೇಗಾದ್ರೂ ಬರ್ತೀನಿ ಅಂದೆ. ಮಹೇಶಣ್ಣಾ ಕಾಲ್ ಮಾಡಿದ್ರು ಅಂದಾಗಲೇ ನನಗೆ ಆ ಘಟನೆಯ ಸೀರಿಯಸ್‌ನೆಸ್ ಅರಿವಾಗಿತ್ತು.. ಆದರೂ ಏನೋ ಒಂದು‌ ಭರವಸೆ ಇರುತ್ತಲ್ಲಾ! ಆಕ್ಸಿಡೆಂಟ್ ಅಂದರೆ ಕೈ ಕಾಲಿಗೆ ಪೆಟ್ಟಾಗಿರಬಹುದು.. ಬ್ಲಡ್ ಲಾಸ್ ಇರಬಹುದು ಅಂತೆಲ್ಲ. ಅದೇ ಯೋಚನೆಯಲ್ಲಿದ್ದೆ. ನಾನು ನನ್ನ ಅಕ್ಕನ ಗಂಡ ವಿನಯ್ ಭಾವನಿಗೆ ಕಾಲ್ ಮಾಡಿ ಎಲ್ಲಿದ್ದೀರಿ ಅಂತಾ ಕೇಳಿದೆ.. ಅವರು ಆಫೀಸಿಗೆ ಹೋಗೋಕೆ ಮೆಟ್ರೋ ಸ್ಟೇಶನ್‌ಗೆ ಬಂದಿದ್ರು . ಭಾವ ಅಪೂರ್ವಳಿಗೆ ಆಕ್ಸಿಡೆಂಟ್ ಆಗಿದೆ. ಊರಿಗೆ ಹೋಗಬೇಕು ಬರ್ತೀರಾ ಅಂದೆ.. 30 ನಿಮಿಷದಲ್ಲಿ ಅವರು ಮನೆಗೆ ಹೋಗಿ ಗಾಡಿ ತೊಗೊಂಡು ನನ್ನನ್ನು ಪಿಕ್ ಮಾಡಿ ನಾವು ಹೊರಟಿದ್ವಿ.. ಅಪೂರ್ವಳ ಅಣ್ಣಾ ಗೋವಿಂದ ರಾಜ್ ಅವರು ಕಾಲ್ ಮಾಡಿ ನೀನು ಬಾ.. ನಾವೆಲ್ಲಾ ಇಲ್ಲಿ ಇದ್ದೇವೆ .. ಅಂದ್ರು.. ಏನಾದ್ದು ಅಂತಾ ಕೇಳಿದೆ .. ಬಸ್ ಬಂದು ಕಾರಿಗೆ ಡಿಕ್ಕಿ ಹೊಡೆದದ್ದು ಅಂದ್ರು..

ಅಲ್ಲಿಗೆ ನನಗೆ ತಲೆಬಿಸಿ ಜೋರಾಯ್ತು.. ಮತ್ತೆ ಮಹೇಶ್ ಅಣ್ಣನಿಗೆ ಅಪ್ಪನಿಗೆ ನಿತಿನ್‌ಗೆ ಶ್ರೇಯಸ್ ಅಣ್ಣನಿಗೆ ಕಾಲ್ ಮಾಡಿಕೊಂಡೇ ಇದ್ದೆ.. ದೀಪಿಕಾ ಅಕ್ಕ ಫೋನ್‌ ಮಾಡಿ ಮಗಳು ಸಮಾಧಾನ ಮಾಡಿಕೊಂಡಿದ್ದಾಳೆ, ತಲೆಬಿಸಿ ಬೇಡಾ ಅಂದ್ರೂ.. ಅವರು ಅವರ ಮನೆಯ ಬಾಗಿಲು ಬೀಗ ಹಾಕಿ, ಮಲಗಿದ್ದ ಅವರ ಇಬ್ಬರು ಮಕ್ಕಳನ್ನು ಅಲ್ಲಿಯೇ ಬಿಟ್ಟು ಬಂದಿದ್ರು.. ಮಕ್ಕಳಿಗೆ ಹೇಳಿಯೂ ಬಂದಿರಲಿಲ್ಲ.. ಆದರೆ ಆ ಕ್ಷಣಕ್ಕೆ ಅವರು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ರು! ನನ್ನ ಮಗುವಿಗೆ ಆ ಕ್ಷಣಕ್ಕೆ ತಾಯಿಯ ಸ್ಥಾನದಲ್ಲಿ ನಿಂತು ಅಕ್ಕರೆ ತೋರಿದ್ರು.. ಜೀವನದಲ್ಲಿ ಮರೆಯಲಾರದ/ ಮರೆಯಬಾರದ ಸಹಾಯ ಅದು... ಅಪೂರ್ವ, ಮಾವ, ಮಗಳು ಈ ಮೂರೂ ಜನರನ್ನು ಗೋಲ್ಡನ್ hour ಒಳಗೆ ಆಸ್ಪತ್ರೆ ಮುಟ್ಟಿಸಿದ ಎಲ್ಲರಿಗೂ ನಾನು ಚಿರಋಣಿ.

ಅಲ್ಲೇನು ಮಾಡಲು ಸಾಧ್ಯವೋ ಅದೆಲ್ಲಾ ಮಾಡೋಕೆ ಮಹೇಶಣ್ಣ ಸಹಾಯ ಮಾಡಿದ್ರು... ಒಂದು ಆಂಬುಲೆನ್ಸ್ ಕೂಡಲೇ ಹೊರಟಿತು.. ಅದರಲ್ಲಿ ಅಪೂರ್ವ ಮತ್ತೆ ನಮ್ಮ ಕಡೆಯಿಂದ ನಿತಿನ್ ಹೊರಟ.. ಇಷ್ಟೆಲ್ಲಾ ಆಗುವಾಗ ಅಪೂರ್ವಳಿಗೆ ವೆಂಟಿಲೇಟರ್ ಹಾಕಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ, ಬೇಕಾದ ಫಸ್ಟ್ ಏಡ್ ಎಲ್ಲಾ ಮಾಡಿಯೇ ಕಳುಹಿಸಿದ್ದರು.. That is what gave us this battling chance! ನನಗೆ ಗೊತ್ತಿರುವ ಪ್ರಕಾರ ಈ ವ್ಯವಸ್ಥೆ ಇಲ್ಲದೆ ಇರ್ತಿದ್ದರೆ ಅಪೂರ್ವ would have been brain dead!

ಇನ್ನೊಂದು ಆಂಬುಲೆನ್ಸ್ ಅಲ್ಲಿ ಮಾವನನ್ನು ಕಳುಹಿಸೋದು ಅಂತಾ ಆಯ್ತು.. ಅತ್ತೆ ಬಂದ್ರು.. ನನ್ನ ಅಪ್ಪುವಿನ ಇನ್ನೊಬ್ಬ ಅಣ್ಣ ಬಂದ್ರು.. ಇಂತಹ ಸಮಯದಲ್ಲಿ ನಾವು ಲೀಗಲ್ ಆಗಿಯೂ ಏನೆಲ್ಲಾ ಮಾಡಬೇಕೋ ಅದೆಲ್ಲಾ ಮಾಡಲೇ ಬೇಕು.. ಅದರ ಕುರಿತು ಮಹೇಶಣ್ಣ ಯೋಚನೆ ಶುರು ಮಾಡಿದ್ರು.. ಅಷ್ಟೊತ್ತಿಗೆ ಮಗಳು ಒಮ್ಮೆ ವಾಂತಿ ಮಾಡಿದ್ಲಂತೆ.. ಮೊದಲೇ ಅಷ್ಟು ಭೀಕರ ಆಕ್ಸಿಡೆಂಟ್ .. ಅದರ ಜೊತೆಗೆ ಆಕೆಯ ಹಣೆಯ ಮೇಲೆಲ್ಲ ಗಾಯಗಳು, ಅಲ್ಲಿದ್ದ ಯಾರಿಗೂ ಚಾನ್ಸ್ ತೆಗೆದುಕೊಳ್ಳುವ ಧೈರ್ಯ ಇರಲಿಲ್ಲ.. ಮಗಳನ್ನೂ ಮಾವನ ಜೊತೆ ಆಂಬುಲೆನ್ಸ್ ಅಲ್ಲಿ ಕರೆದುಕೊಂಡು ಹೋಗೋದು ಅಂತಾ ಆಯ್ತು.. ಪಲ್ಲವಿ ಆಗ ಅವಳ ಅಮ್ಮನ ರೀತಿ ಅವಳನ್ನು ಕರೆದುಕೊಂಡು ಹೊರಟಳು.. ಅಲ್ಲಿಂದ ನಾನು ಆಸ್ಪತ್ರೆ ತಲುಪುವ ವರೆಗೆ ಪಲ್ಲವಿ ಮಗಳನ್ನು ಬಿಡಲೇ ಇಲ್ಲ.. ತನ್ನ ಕಾಲಲ್ಲೇ ಮಲಗಿಸಿಕೊಂಡು ಅವಳನ್ನು ಮುದ್ದು ಮಾಡಿ ಅವಳ ಹೆದರಿಕೆ ಸ್ವಲ್ಪ ಕಮ್ಮಿ ಮಾಡಿದಳು.. ನೆನಪಿರಲಿ.. ಪಲ್ಲವಿಗೆ ನನ್ನ ಮಗಳ ವಯಸ್ಸಿನ ಮಗ ಇದ್ದಾನೆ.. ತನ್ನ ಮಗನನ್ನು ಮನೆಯಲ್ಲೇ ಬಿಟ್ಟು ಆಕೆ ಬಂದದ್ದು!

ನಿತಿನ್ ನನಗೆ ಸಂಬಂಧಿಯೇ ಅಲ್ಲ.. ಆದರೆ ಯಾವ ರಕ್ತ ಸಂಬಂಧಿಗೂ ಕಮ್ಮಿ ಅಲ್ಲಾ ಅನ್ನುವ ಹಾಗೆ ಅಪೂರ್ವ ಜೊತೆಗೆ ಆಂಬುಲೆನ್ಸ್ ಅಲ್ಲಿ ಹೋದ ಅವನಿಗೆ ನಾನು ಹೇಗೆ ಥ್ಯಾಂಕ್ಸ್ ಹೇಳೋದು? ಪಂಜಿಗುಡ್ಡೆ ಈಶ್ವರಣ್ಣ ತನ್ನ ಕಾರಿನಲ್ಲಿ ನನ್ನ ಮಗಳನ್ನು ಕರೆದುಕೊಂಡು ಪ್ರಗತಿಗೆ ಬಂದದ್ದು... ಇನ್ಯಾರೋ ಆಟೋದಲ್ಲಿ ಅಪೂರ್ವನನ್ನು ಕರೆದುಕೊಂಡು ಬಂದ್ರಂತೆ .. ಮಾವನನ್ನು ಆಂಬುಲೆನ್ಸ್ ಅಲ್ಲಿ ತಂದಿದ್ದು.. ಕಾರ್ ಓಪನ್ ಮಾಡೋಕೆ ಸಲಿಕೆ ಸಬ್ಬಲ್ ಎಲ್ಲ ಬಳಸಿದ್ರಂತೆ . ಯೋಚನೆ ಮಾಡಿ ಎಷ್ಟು ಭೀಕರ ಆಕ್ಸಿಡೆಂಟ್ ಅದು ಅಂತಾ!

ಇಷ್ಟೆಲ್ಲಾ ಆಗುವಾಗ ಅಪೂರ್ವಳ ಇನ್ನೊಬ್ಬ ಭಾವ ಮಂಗಳೂರಿನ thoracic surgeon Dr. ಚೈತ್ರ ಭಟ್ ಅವರಿಗೆ ನಾನು ಕಾಲ್ ಮಾಡಿ ಮಾತಾಡಿದೆ.. ಮಹೇಶ್ ಅಣ್ಣಾ ಕೂಡಾ ಅವರಿಗೆ ಕಾಲ್ ಮಾಡಿದ್ರು.. ನನಗೆ ಹೇಳದೇ ಇದ್ದ ವಿಷಯಗಳನ್ನು ಅವರಿಗೆ ಹೇಳಿಯಾಗಿತ್ತು.. ಅಪೂರ್ವ, ಮಾವನ ಆಂಬುಲೆನ್ಸ್ ಮಂಗಳೂರಿಗೆ ಬಂದಾಗ ಅವರನ್ನು ಅಡ್ಮಿಟ್ ಮಾಡಿದ್ದು.. ಅದರ ಬಿಲ್ ಕೊಟ್ಟದ್ದು ಎಲ್ಲಾ ನಮ್ಮ ಚೈತ್ರ ಭಟ್ ಅವರ ಜೊತೆ ಅವರ ಪತ್ನಿ Dr . Alka ಭಟ್ ಕೂಡಾ ಇದ್ರು.. ಆಕೆ pulmonologist.. ನಮಗೆ ಆಸ್ಪತ್ರೆಯಲ್ಲಿ ಇವರೇ ದಾರಿದೀಪ!

ಅಪ್ಪಾ ಅಮ್ಮನಿ ವಯಸ್ಸಾಗಿದೆ. ಆದರೂ ಮಗಳಿನಂತಹ ಸೊಸೆಗೆ ಸಮಸ್ಯೆ ಆಗಿದೆ ಅಂತಾ ಅವರೂ ಹೊರಟು ಬಂದ್ರು.. ಬಂದವರು ಮತ್ತೆ ಮನೆಗೆ ಹೋಗಿಲ್ಲ.. ನನಗೆ ,ನನ್ನ ಸಮಸ್ಯೆಗಳಿಗೆ ಯಾವಾಗಲೂ ಇರುವ ನನ್ನ ಚಿಕ್ಕಮ್ಮನ ಮಗ ಗೌರವ್‌ ಸೂರ್ಯ ಅವತ್ತಿಂದ ಇವತ್ತಿನರೆವಿಗೂ ನನ್ನ ಜೊತೆಯಲ್ಲೇ ಇದ್ದಾನೆ.. ಚಿಕ್ಕಮ್ಮನ ಮನೆಯಿಂದ 3 ಹೊತ್ತು ಹೊತ್ತು ಹೊತ್ತಿಗೆ ಊಟ ಬರ್ತಾ ಇದೆ. ಮಗಳು, ನನ್ನಮ್ಮ ಅವರ ಮನೆಯಲ್ಲೇ ಇದ್ದಾರೆ.. ಅಪ್ಪ ತಲೆಕೆಡಿಸಿಕೊಂಡು ಒಮ್ಮೆ ಅಲ್ಲಿ, ಒಮ್ಮೆ ಇಲ್ಲಿ ಇರ್ತಾರೆ.. ಭಾವ ನನ್ನನ್ನು ಕರೆದುಕೊಂಡು ಬಂದವರು ಮನಸಿಲ್ಲದ ಮನಸಲ್ಲಿ ಮೊನ್ನೆ ಹೋದ್ರು.. ವಾಪಸ್ ಬರ್ತೀನಿ ಅಂತಾ ಹೇಳ್ತಾ ಇದ್ದಾರೆ.. ಅಕ್ಕ ಇಲ್ಲಿದ್ದಾಗ ಕಣ್ಣೀರು ಹಾಕಿಕೊಂಡೇ ಇದ್ದಳು. ನನ್ನ ಚಿಕ್ಕಪ್ಪ ನಾವು ಹೇಳ್ತಾ ಇರುವ ಎಲ್ಲಾ ಪೂಜೆಗಳನ್ನು ಪ್ರಾಜ್ಞರ ಮೂಲಕ ಪ್ರತಿದಿನ ಮಾಡಿಸ್ತಾ ಇದ್ದಾನೆ!

ಯಾರನ್ನಾದರೂ ಬಿಟ್ಟಿದ್ದೇನಾ ಗೊತ್ತಿಲ್ಲ.. ಇಷ್ಟು ಬರೆಯುವಾಗ ತುಂಬಾ ಬೇಜಾರು ಕೂಡಾ ಆಯ್ತು . ಆದರೆ ಉಪಕಾರ ಸ್ಮರಣೆ ಮಾಡದೆ ಇದ್ದರೆ ನನಗೆ ಬೆಲೆ ಇಲ್ಲ! ಅಪೂರ್ವ ಹುಷಾರಗಬೇಕು ಅನ್ನುವ ಒಂದೇ ಗುರಿ ಇವರೆಲ್ಲರದ್ದಾಗಿತ್ತು.