ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ಕುಟುಂಬಸ್ಥರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಜೈಲು ಬಳಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪವಿತ್ರಾ ತಾಯಿ ಎದುರುಬದುರಾದರು.
ಬೆಂಗಳೂರು: ಹೈಕೋರ್ಟ್ ನೀಡಿದ್ದ ಜಾಮೀನು ವಜಾ ಮಾಡಿದ ಕಾರಣದಿಂದ ಮತ್ತೆ ಜೈಲು ಸೇರಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಭೇಟಿಯಾಗಲು ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಇದೇ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ಬಂದ ಅವರ ತಾಯಿ ಕೂಡ ಬಂದಿದ್ದು, ಜೈಲು ಬಳಿ ಎದುರು ಬದುರಾದ ಘಟನೆ ನಡೆಯಿತು. ಜೈಲಿನ ಗೇಟ್ ಬಳಿ ಕಾರಿನಲ್ಲಿ ವಿಜಯಲಕ್ಷ್ಮಿ ಎಂಟ್ರಿ ಆಗುತ್ತಿದ್ದಾಗ, ಪವಿತ್ರಾ ಗೌಡ ತಾಯಿ ಮಗಳನ್ನು ಮಾತನಾಡಿಸಿ ಹೊರಬರುತ್ತಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ (A2) ಆಗಿ ಬಂಧಿತರಾಗಿದ್ದು, ಪವಿತ್ರಾ ಗೌಡ ಎ1 ಆರೋಪಿ ಮತ್ತು ಇತರ 5 ಮಂದಿ ಆರೋಪಿಗಳು ಪ್ರಸ್ತುತ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾ ಖೈದಿಗಳಾಗಿ ಬಂಧನದಲ್ಲಿದ್ದಾರೆ.
ವಿಜಯಲಕ್ಷ್ಮಿ ಕಾರಿನಲ್ಲಿ ಜೈಲಿನ ಪ್ರವೇಶ ದ್ವಾರವರೆಗೆ ಬಂದು, ಅಲ್ಲಿಂದ ನೇರವಾಗಿ ಜೈಲು ಆವರಣಕ್ಕೆ ತೆರಳಿದರು. ಸಂಜೆ 4:30 ಸುಮಾರಿಗೆ ಆಗಮಿಸಿದ್ದ ವಿಜಯಲಕ್ಷ್ಮಿ ಸಾಮಾನ್ಯ ಎಂಟ್ರಿ ಪಡೆದು 5 ಗಂಟೆ ಸುಮಾರಿಗೆ ತೆರಳಿದರು. ಸಾಮಾನ್ಯ ಎಂಟ್ರಿ ಹಿನ್ನೆಲೆ ಅರ್ಧ ತಾಸು ಮಾತ್ರ ಮಾತನಾಡಲು ಅವಕಾಶ ಸಿಕ್ಕಿತು. ಹಣ್ಣು ನೀಡಿ ಕುಶಲೋಪರಿ ವಿಚಾರಿಸಿ ವಾಪಸ್ ಆದರು. ಭೇಟಿ ವೇಳೆ ಪತ್ನಿ ಬಳಿ ಮಗನ ಬಗ್ಗೆ ದರ್ಶನ್ ವಿಚಾರಿಸಿದರು ಎಂದು ತಿಳಿದುಬಂದಿದೆ. ಒಳಗೆ ಕಾರು ಬಿಡಲು ಮನವಿ ಮಾಡಿದ್ರೂ ಕೂಡ ಪೊಲೀಸ್ ಠಾಣೆವರೆಗೂ ಸಿಬ್ಬಂದಿಗಳು ಕಾರನ್ನು ಬಿಡಲಿಲ್ಲ. ಜೈಲು ಚೆಕ್ ಪೋಸ್ಟ್ ಬಳಿಯೇ ಜೈಲು ಸಿಬ್ಬಂದಿ ಕಾರು ತಡೆದರು. ಕೊನೆಗೆ ಜೈಲು ಚೆಕ್ ಪೋಸ್ಟ್ ವರೆಗೂ ವಿಜಯಲಕ್ಷ್ಮಿ ನಡೆದೇ ಬಂದರು.
ಭೇಟಿಯ ನಂತರ ಅವರನ್ನು ಬಿಡಲು ಬಂದಿದ್ದ ಪಾರ್ಚೂನರ್ ಕಾರು ಮರಳಿ ಪ್ರಯಾಣ ಬೆಳೆಸಿತು. ದರ್ಶನ್ ಅವರನ್ನು ಭೇಟಿಯಾದ ಬಳಿಕ ವಿಜಯಲಕ್ಷ್ಮಿ ಮಾಧ್ಯಮದ ಮುಂದೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಕಾರಿನಲ್ಲಿ ವಾಪಸಾದರು. ದರ್ಶನ್ ಅವರ ಬಂಧನದಿಂದಾಗಿ ಅಭಿಮಾನಿಗಳಲ್ಲಿ ನಿರಾಶೆ ಮನೆ ಮಾಡಿದ್ದು, ಕುಟುಂಬದ ಸದಸ್ಯರು ಮಾತ್ರ ನಿರ್ದಿಷ್ಟ ಸಮಯಕ್ಕೆ ಭೇಟಿಗೆ ಅವಕಾಶ ಪಡೆಯುತ್ತಿದ್ದಾರೆ.
ವಕೀಲರ ಜತೆ ಬಂದ ಪವಿತ್ರಾ ತಾಯಿ
ಪವಿತ್ರಗೌಡರನ್ನು ಅವರ ತಾಯಿ ಮತ್ತು ವಕೀಲ ನಾರಾಯಣಸ್ವಾಮಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾಗಲು ಶನಿವಾರ ಬೆಳಿಗ್ಗೆ ಆಗಮಿಸಿದರು. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ, ಪವಿತ್ರಗೌಡ ಪ್ರಸ್ತುತ ವಿಚಾರಣಾ ಬಂಧನದಲ್ಲಿದ್ದಾರೆ.
ಪವಿತ್ರಗೌಡರ ತಾಯಿ ತಮ್ಮ ಮಗಳನ್ನು ನೋಡಲು ಬಂದಿದ್ದು, ಅವರೊಂದಿಗೆ ಕುಟುಂಬದ ವಕೀಲ ನಾರಾಯಣಸ್ವಾಮಿ ಸಹ ಹಾಜರಿದ್ದರು. ನಿಗದಿತ ಸಮಯಕ್ಕೆ ಜೈಲು ಆವರಣ ಪ್ರವೇಶಿಸಿದ ತಾಯಿ ಹಾಗೂ ವಕೀಲರು ಪವಿತ್ರಗೌಡರನ್ನು ಭೇಟಿಯಾಗಿ ಮಾತನಾಡಿದರು. ನಂತರ ಮಾಧ್ಯಮದ ಮುಂದೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಹೊರಟರು.
