ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಅವರ ಗ್ಯಾಂಗ್‌ನ ಇತರ ಸದಸ್ಯರನ್ನು ವಿವಿಧ ಜೈಲುಗಳಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಜೈಲು ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್ ಸೇರಿದಂತೆ ಅವರ ಗ್ಯಾಂಗ್‌ನ ಇತರ ಆರೋಪಿಗಳನ್ನು ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು 57ನೇ ಸೆಷನ್ಸ್ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಯಾರ್ಯಾರು ಎಲ್ಲಿಗೆ ಶಿಫ್ಟ್?

ಅರ್ಜಿಯಲ್ಲಿ, ಪ್ರಮುಖ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಕೇಳಲಾಗಿದೆ. ಅದೇ ರೀತಿ, ಜಗದೀಶ್ ಮತ್ತು ಲಕ್ಷ್ಮಣ್‌ರನ್ನು ಶಿವಮೊಗ್ಗ ಜೈಲಿಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ. ನಾಗರಾಜ್‌ರನ್ನು ಗುಲ್ಬರ್ಗ ಜೈಲಿಗೆ ಹಾಗೂ ಪ್ರದೋಷ್‌ರನ್ನು ಬೆಳಗಾವಿ ಜೈಲಿಗೆ ವರ್ಗಾವಣೆ ಮಾಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ಪವಿತ್ರಾಗೌಡ ಮತ್ತು ಅನುಕುಮಾರ್ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲೇ ಇರಿಸಲು ತೀರ್ಮಾನಿಸಲಾಗಿದೆ. ಅಂದರೆ, ಎಲ್ಲ ಆರೋಪಿಗಳನ್ನು ಪ್ರತ್ಯೇಕ ಜೈಲುಗಳಲ್ಲಿ ಇರಿಸುವ ಮೂಲಕ ಭದ್ರತೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ಜೈಲು ಭದ್ರತೆ ದೃಷ್ಟಿಯಿಂದ ಅರ್ಜಿ

ಅರ್ಜಿಯಲ್ಲಿ, ಜೈಲು ಭದ್ರತೆ, ಆರೋಪಿಗಳ ನಡುವಿನ ಯಾವುದೇ ಸಂಪರ್ಕ ತಪ್ಪಿಸುವುದು ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಕ್ರಮ ಕೈಗೊಳ್ಳುವುದು ಮುಖ್ಯ ಉದ್ದೇಶವಾಗಿದೆ. ಜಾಮೀನು ಪಡೆಯುವ ಸಂದರ್ಭದಲ್ಲಿ ಆರೋಪಿಗಳು ಯಾವ ಜೈಲಿನಲ್ಲಿ ಇದ್ದರೋ, ಅವರನ್ನು ಅಲ್ಲಿ ಶಿಫ್ಟ್ ಮಾಡುವಂತೆ ವಿಶೇಷ ಮನವಿ ಸಲ್ಲಿಸಲಾಗಿದೆ.

ಅರ್ಜಿಯ ವಿಚಾರಣೆ

ಈ ಕುರಿತು ಸಲ್ಲಿಸಲಾದ ಅರ್ಜಿ ಇಂದು ಮಧ್ಯಾಹ್ನ 3 ಗಂಟೆಗೆ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಕೋರ್ಟ್ ತನ್ನ ತೀರ್ಮಾನವನ್ನು ಪ್ರಕಟಿಸಿದ ಬಳಿಕ ಆರೋಪಿಗಳ ಜೈಲು ವರ್ಗಾವಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ತಿರುವು ಪಡೆದುಕೊಂಡಿರುವ ತನಿಖೆಯ ನಡುವೆ ಈ ಅರ್ಜಿ ಸಲ್ಲಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಗೆ ಈ ಬಾರಿ ಜೈಲು ಅಧಿಕಾರಿಗಳು ಯಾವುದೇ ಸಡಿಲಿಕೆ ತೋರದೇ, ಕಟ್ಟುನಿಟ್ಟಿನ ನಿಯಮಾವಳಿಗಳ ನಡುವೆ ಭದ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಜೈಲಿನಲ್ಲಿನ ದಿನವನ್ನು ಕಳೆಯಲು ದರ್ಶನ್ ಪುಸ್ತಕಗಳ ಮೊರೆ ಹೋಗಿದ್ದಾರೆ. ನಿನ್ನೆ ಅವರು ಜೈಲು ಅಧಿಕಾರಿಗಳ ಬಳಿ ಮನವಿ ಸಲ್ಲಿಸಿ, ಗ್ರಂಥಾಲಯದಿಂದ ಕೆಲವು ಪುಸ್ತಕಗಳನ್ನು ಪಡೆದುಕೊಂಡಿದ್ದಾರೆ. ಇಂದು ಜೈಲು ಮೇನುವಿನಂತೆ ಬೆಳಗಿನ ಉಪಹಾರದಲ್ಲಿ ಉಪ್ಪಿಟ್ಟು ಸೇವಿಸಿದ್ದಾರೆ. ದಿನದ ಹೆಚ್ಚಿನ ಸಮಯವನ್ನು ಸೆಲ್‌ನಲ್ಲಿ ಪುಸ್ತಕ ಓದುತ್ತಾ, ಸ್ವಲ್ಪ ಸಮಯವನ್ನು ಸಹಖೈದಿಗಳೊಂದಿಗೆ ಕಳೆಯುತ್ತಿದ್ದಾರೆ.

ಪವಿತ್ರಾ ಸಹಖೈದಿಗಳೊಂದಿಗೆ ಸಮಯ

ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪವಿತ್ರಾ ಕೂಡ ಜೈಲಿನಲ್ಲೇ ಇದ್ದು, ಸಹಖೈದಿಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮಹಿಳಾ ಖೈದಿಗಳ ವಿಭಾಗದಲ್ಲಿ ಅವರು ನಿಯಮಾನುಸಾರ ದಿನಚರಿಯನ್ನು ಅನುಸರಿಸುತ್ತಿದ್ದಾರೆ.

ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧಾರ ಹೊರ ಬರುವ ಸಾಧ್ಯತೆ ಇದೆ. ಈ ಮೊದಲು ಇದೇ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದ ಪ್ರಕರಣ ನೆನಪಾದ ಹಿನ್ನೆಲೆಯಲ್ಲಿ, ಈ ಬಾರಿ ಯಾವುದೇ ದೋಷವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ವಿಶೇಷ ಸಾರ್ವಜನಿಕ ಅಭಿಯೋಜಕರು (SPP) ಈಗಾಗಲೇ ಕೇಸ್ ಫೈಲ್ ಅನ್ನು ಜೈಲು ಅಧಿಕಾರಿಗಳಿಂದ ತರಿಸಿಕೊಂಡಿದ್ದು, ಬಳ್ಳಾರಿ ಶಿಫ್ಟ್ ಬಗ್ಗೆ ನಿರ್ಧಾರವಾದ ನಂತರ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗುತ್ತದೆ

ಬ್ಯಾರಕ್‌ನಲ್ಲಿನ ಭದ್ರತೆ

ಈ ಬಾರಿ ದರ್ಶನ್ ಮತ್ತು ಅವರ ಗ್ಯಾಂಗ್‌ನ್ನು ನೂತನ ಮಹಿಳಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 1ರಲ್ಲಿ ಇರಿಸಲಾಗಿದೆ. ಈ ಕೊಠಡಿಗೆ 500 ಮಂದಿ ಖೈದಿಗಳನ್ನು ಇರಿಸುವ ಸಾಮರ್ಥ್ಯವಿದ್ದರೂ, ಇನ್ನೂ ಉದ್ಘಾಟನೆ ಆಗಿಲ್ಲ. ಕೊರೋನಾ ಸಮಯದಲ್ಲಿ ಕ್ವಾರಂಟೈನ್ ಜೈಲಾಗಿಯೂ ಬಳಸಲಾಗಿದ್ದ ಈ ಸೆಲ್ ಈಗ ದರ್ಶನ್ ಗ್ಯಾಂಗ್‌ಗಾಗಿ ವಿಶೇಷ ಭದ್ರತಾ ಕ್ರಮಗಳೊಂದಿಗೆ ಬಳಸಲಾಗುತ್ತಿದೆ.

ದರ್ಶನ್ ಇರುವ ಬ್ಯಾರಕ್‌ನಲ್ಲಿ ದಿನದ 24 ಗಂಟೆಗಳ ಕಾಲ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಒಬ್ಬ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್, ಇಬ್ಬರು ಜೈಲರ್, ಇಬ್ಬರು ಅಸಿಸ್ಟೆಂಟ್ ಜೈಲರ್, ಇಬ್ಬರು ಹೆಡ್ ವಾರ್ಡರ್ ಹಾಗೂ ಇಬ್ಬರು ವಾರ್ಡರ್‌ರನ್ನು ನಿಯೋಜಿಸಲಾಗಿದೆ. ಯಾರಿಗೂ ದರ್ಶನ್‌ರನ್ನು ಭೇಟಿಯಾಗಲು ಅವಕಾಶವಿಲ್ಲ. ಜೈಲು ಸಿಬ್ಬಂದಿಗೂ ಅವರೊಂದಿಗೆ ಅನವಶ್ಯಕವಾಗಿ ಮಾತನಾಡುವಂತಿಲ್ಲ.

ಬಾಡಿ ಹಾರ್ನ್ ಕ್ಯಾಮೆರಾ ವ್ಯವಸ್ಥೆ

ಸಿಬ್ಬಂದಿಯ ಪ್ರತಿಯೊಂದು ಚಟುವಟಿಕೆ ಮತ್ತು ಬ್ಯಾರಕ್‌ನ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಬಾಡಿ ಹಾರ್ನ್ ಕ್ಯಾಮೆರಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಮೂಲಕ ಹಿರಿಯ ಅಧಿಕಾರಿಗಳು ಸದಾ ಗಮನವಿಟ್ಟು ನಿಗಾ ಇಟ್ಟುಕೊಂಡಿದ್ದಾರೆ. ಹಿಂದಿನ ಬಾರಿ ದರ್ಶನ್‌ಗೆ ಜೈಲಿನೊಳಗೆ ರಾಜಾತಿಥ್ಯದಂತೆಯೇ ಸೌಲಭ್ಯ ಸಿಕ್ಕಿದ್ದ ಆರೋಪ ಕೇಳಿಬಂದಿದ್ದರೂ, ಈ ಬಾರಿ ಸಂಪೂರ್ಣ ಬದಲಾವಣೆ ಕಂಡುಬಂದಿದೆ. ದರ್ಶನ್ ಸೆಲ್‌ನಲ್ಲಿ ಖಾಲಿಯಾಗಿ ಕುಳಿತುಕೊಳ್ಳುವುದಿಲ್ಲದಿದ್ದರೆ, ಪುಸ್ತಕ ಓದುವಷ್ಟೇ ಅವಕಾಶ. ಜೈಲು ಸಿಬ್ಬಂದಿಯ ಎಚ್ಚರಿಕೆಯಿಂದಾಗಿ ಈ ಬಾರಿ ಯಾವುದೇ ಸಡಿಲತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದು, ದರ್ಶನ್ ಹಾಗೂ ಅವರ ಗ್ಯಾಂಗ್ ಮೇಲಿನ ಕಣ್ಗಾವಲು ಇನ್ನಷ್ಟು ಬಿಗಿಸಲಾಗಿದೆ.