ದಸರಾ ಉದ್ಘಾಟಕರಿಗೆ ಚಾಮುಂಡೇಶ್ವರಿ ದೇವಿಯ ಇತಿಹಾಸ, ಉತ್ಸವ, ಆರಾಧನೆ, ಸಂಪ್ರದಾಯ ತಿಳಿಸಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮೈಸೂರು (ಸೆ.5): ದಸರಾ ಉದ್ಘಾಟಕರಿಗೆ ಮೊದಲು ತಾಯಿ ಚಾಮುಂಡೇಶ್ವರಿ ದೇವಿ ಇತಿಹಾಸ, ಉತ್ಸವ, ಆರಾಧನೆ, ಸಂಪ್ರದಾಯವನ್ನು ತಿಳಿಸಿ. ಅವರು ನಮ್ಮ ಸಂಪ್ರದಾಯ ಅರಿತು ತಮ್ಮ ಕಾರ್ಯ ಮಾಡಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಂಬಿಕೆ, ಭಕ್ತಿಗೆ, ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ. ಇಂತಹ ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆಗೆ ಆಹ್ವಾನಿತರು ಅರ್ಹರೋ ಅಥವಾ ಇಲ್ಲವೋ ಎಂಬ ಚರ್ಚೆ ಮಾಡಲ್ಲ. ನಮ್ಮ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಉದ್ಘಾಟಕರು ನಡೆದುಕೊಳ್ಳಲಿ. ರಾಜ್ಯ ಸರ್ಕಾರ ಯಾರನ್ನು ತೃಪ್ತಿಪಡಿಸಲು ಉದ್ಘಾಟಕರನ್ನು ಆಯ್ಕೆ ಮಾಡಿಕೊಂಡಿದ್ದೆಯೋ ಗೊತ್ತಿಲ್ಲ. ಬಾನು ಮುಷ್ತಾಕ್ ಅವರಿಗೆ ಸರ್ಕಾರ ಚಾಮುಂಡಿ ಬೆಟ್ಟದ ಶಿಷ್ಟಾಚಾರ, ಸಂಪ್ರದಾಯದ ಬಗ್ಗೆ ತಿಳಿಸಲಿ ಎಂದರು.
ಧಾರ್ಮಿಕ ಕೆಲಸದ ವಿಚಾರದಲ್ಲಿ ಸರ್ಕಾರ ‘ಟೇಕ್ ಈಟ್ ಫಾರ್ ಗ್ರ್ಯಾಂಟೆಡ್’ ಅಂದುಕೊಳ್ಳಬಾರದು.
ಮುಂದೆ ದೇವರ ಇಚ್ಛೆಯಂತೆ
ತುಮಕೂರಿನಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ. ಹೀಗಾಗಿ ಅಲ್ಲಿ ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಅಂದಿದ್ದೇನೆ. ಇನ್ನೂ ಬೇರೆ ಕಡೆ ಹೋಗೋಣ ಅಂತಾ. ಎಲ್ಲಿ ಅಂತಾ ನಿರ್ಧಾರ ಆಗಿಲ್ಲ. ದೇವರ ಆಶೀರ್ವಾದ, ಇಚ್ಛೆ ಏನಿದೆಯೋ ಗೊತ್ತಿಲ್ಲ ಎಂದರು.
