ಕಾಂಗ್ರೆಸ್ ಪಕ್ಷವು ಬೇರೆ ಧರ್ಮದವರ ಜನಸಂಖ್ಯಾ ಬೆಳವಣಿಗೆಯನ್ನು ಒಪ್ಪಿಕೊಂಡರೂ, ಹಿಂದೂಗಳಿಗೆ ಮಕ್ಕಳನ್ನು ಹೊಂದುವ ಬಗ್ಗೆ ಸಲಹೆ ನೀಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಟೀಕಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿ (ಆ.31): ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಹುಟ್ಟಿಸಿದರೂ ಕಾಂಗ್ರೆಸ್‌ಗೆ ನಡೆಯುತ್ತದೆ, ಆದರೆ ಹಿಂದೂಗಳಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ 'ನಾವಿಬ್ಬರು, ನಮಗೆ ಮೂವ್ವರು' ಎಂದು ಕರೆ ನೀಡಿದರೆ ಇವರಿಗೆ ಬ್ಯಾನಿ ಆಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಚಾರ ಇಂದು ಹುಬ್ಬಳ್ಳಿಯಲ್ಲಿ ಸಮರ್ಥಿಸಿಕೊಂಡ ಪ್ರಲ್ಹಾದ್ ಜೋಶಿಯವರು, ಕಾಂಗ್ರೆಸ್‌ನ 'ವೋಟ್ ಬಚಾವ್ ಆಂದೋಲನ'ವನ್ನು 'ನುಸುಳುಕೋರರ ಬಚಾವ್ ಆಂದೋಲನ' ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನದ್ದು ನೀಚ ರಾಜಕಾರಣ: ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರ ತಾಯಿಯ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ. ಇದು ಕಾಂಗ್ರೆಸ್‌ನ ಮಟ್ಟವನ್ನು ಸೂಚಿಸುತ್ತದೆ. ಸೋಲಿನ ಹತಾಶೆಯಿಂದ ಅಮಿತ್ ಷಾ ಅವರ ತಲೆ ಕಡಿಯಬೇಕೆಂದು ಮಾತನಾಡುತ್ತಾರೆ. ಆದರೆ ಜನ ಇವರನ್ನು ಎಂದಿಗೂ ನಂಬುವುದಿಲ್ಲ. ಕಾಂಗ್ರೆಸ್ ಮನಸ್ಥಿತಿ ಏನೆಂಬುದು ಈ ದೇಶದ ಜನರಿಗೆ ಗೊತ್ತಾಗಿದೆ ಎಂದರು. ತೃಣಮೂಲ ಕಾಂಗ್ರೆಸ್‌ನ ಮಹುವಾ ಮೈತ್ರ ಅವರು ಅಮಿತ್ ಷಾ ವಿರುದ್ಧ ಮಾಡಿರುವ ಟೀಕೆ ವಿಚಾರಕ್ಕೆ ತಿರುಗೇಟು ನೀಡಿದರು

ಅಕ್ರಮ ವಲಸಿಗರಿಂದ ದೇಶಕ್ಕೆ ಕಂಟಕ: ಹುಬ್ಬಳ್ಳಿಯಲ್ಲಿ ಅಕ್ರಮ ನುಸುಳುಕೋರರ ದೊಡ್ಡ ಸಂಖ್ಯೆಯ ಆಗಮನವಾಗಿದ್ದು, ಇದರಿಂದ ಸ್ಥಳೀಯರ ಹಕ್ಕುಗಳನ್ನು ಕಸಿಯುವ ಕೆಲಸ ನಡೆದಿದೆ ಎಂದು ಜೋಶಿ ಗಂಭೀರ ಆರೋಪ ಮಾಡಿದರು. ದೇಶದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಯುದ್ಧ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಅಕ್ರಮ ವಲಸಿಗರಿಗೆ ಮತದಾನದ ಹಕ್ಕು ಕೊಟ್ಟು 'ವೋಟ್ ಬಚಾವ್' ಹೋರಾಟ ಮಾಡುತ್ತಿದೆ" ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ ಚೀನಾ ಭೇಟಿ: ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಸ್ವದೇಶಿ ಮಂತ್ರವನ್ನು ಮುಂದಿಟ್ಟುಕೊಂಡು ವಿದೇಶಿ ವ್ಯವಹಾರಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಮೋದಿ ಹೊಂದಿದ್ದಾರೆ ಎಂದು ಜೋಶಿ ತಿಳಿಸಿದರು.

ಮಾನ-ಮರ್ಯಾದೆ ಇದ್ದರೆ ಅನ್ನಭಾಗ್ಯ ಜಾಹೀರಾತು ತೆಗೆಯಿರಿ:

ಮಾನ-ಮರ್ಯಾದೆ ಇದ್ದರೆ ಅನ್ನಭಾಗ್ಯ ಜಾಹೀರಾತು ತೆಗೆಯಿರಿ. ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ಎಳೆದಿದೆ. ನೋಂದಣಿ ಶುಲ್ಕ ಹೆಚ್ಚಳ, ಗ್ಯಾರಂಟಿ ಯೋಜನೆಗಳ ವಿಳಂಭ, ರಾತ್ರೋರಾತ್ರಿ ಶುಲ್ಕ ಹೆಚ್ಚಳ, ಭ್ರಷ್ಟಾಚಾರದ ಆಡಳಿತ – ಇದು ಸಿದ್ದರಾಮಯ್ಯನವರ ಸಮಾಜವಾದಿ ಚಲ್ಲಾಟ ಎಂದು ಟೀಕಿಸಿದರು.

ತಹಶೀಲ್ದಾರ್ ಕಚೇರಿಗಳಿಂದ ಎಲ್ಲಾ ಇಲಾಖೆಗಳವರೆಗೆ ಭ್ರಷ್ಟಾಚಾರ ಇಲ್ಲದೆ ಕೆಲಸವೇ ಆಗುವುದಿಲ್ಲ. ಮೊದಲು ಲೋಕಾಯುಕ್ತಕ್ಕೆ ಭಯವಿತ್ತು, ಈಗ ಅದೂ ಇಲ್ಲಾದಂತಾಗಿದೆ. ಕಾಂಗ್ರೆಸ್ ನಲ್ಲಿ ಜನರ ಮೇಲೆ ಟೋಪಿ ಹಾಕುವ ದುರುಳರಿದ್ದಾರೆ ಎಂದು ಕಿಡಿಕಾರಿದರು.

ಪಿಎಂ ಯೋಜನೆಯಿಂದ ಜನರಿಗೆ ಲಾಭ: ಪ್ರಧಾನಮಂತ್ರಿಯ ಯೋಜನೆಯಡಿ ಜನರಿಗೆ ಅಕ್ಕಿ ಸಿಗುತ್ತಿದೆಯಾದರೂ, ರಾಜ್ಯ ಸರ್ಕಾರದಿಂದ ಸಂದೇಶಗಳೇ ಬರುತ್ತಿಲ್ಲ ಕಾಂಗ್ರೆಸ್ ಸರ್ಕಾರ ಕಳ್ಳತನದಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿದೆ. ಕೇಂದ್ರದಿಂದ ಕೊಟ್ಟ ಅಕ್ಕಿಗೆ ತಮ್ಮ ಜಾಹೀರಾತು ಹಾಕಿಕೊಂಡಿದ್ದಾರೆ. ಇವರಿಗೆ ಮಾನ-ಮರ್ಯಾದೆ ಇದ್ದರೆ ಮೊದಲು ಅನ್ನಭಾಗ್ಯ ಜಾಹೀರಾತು ತೆಗೆಯಲಿ ಎಂದು ತಿವಿದರು. ಕಾಂಗ್ರೆಸ್ ಸರ್ಕಾರ ಜನರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.