ತುಮಕೂರಿನಲ್ಲಿ ಕಾಂಗ್ರೆಸ್‌ ಭವನಕ್ಕೆ ಕಡಿಮೆ ಬೆಲೆಯಲ್ಲಿ ಭೂಮಿ ಮಾರಾಟ ಮಾಡಿರುವ ವಿಚಾರ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಭವನಕ್ಕೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿರುವ ವಿಷಯ ಚರ್ಚೆಗೆ ಗ್ರಾಸವಾಯಿತು. ಈ ಕುರಿತು ವಿರೋಧ ಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಗಮನಸೆಳೆಯುವ ರೀತಿ ಮಾತನಾಡಿದ ಬಿಜೆಪಿ ಶಾಸಕ ಸುರೇಶ್ ಗೌಡ ಅವರು, ಕಾಂಗ್ರೆಸ್ ಭವನಕ್ಕಾಗಿ ತುಮಕೂರು ಜಿಲ್ಲೆಯಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಭೂಮಿ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಎ-ಖಾತಾ ಕೂಡ ಮಾಡದೆ, ಪೋಡಿ ಆಗದೇ ಹೇಗೆ ಖರೀದಿ ಮಾಡಲಾಗಿದೆ. ನಗರಾಭಿವೃದ್ಧಿ ಆಯುಕ್ತರನ್ನು ಕೇಳಿದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳೇ ಈ ಕಾರ್ಯದಲ್ಲಿ ಶಾಮೀಲಾಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಸುರೇಶ್ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, “ಈ ಭೂಮಿಯ ಮಂಜೂರಾತಿ ರಾಜ್ಯ ಸಚಿವ ಸಂಪುಟದ ನಿರ್ಧಾರದ ಮೇರೆಗೆ ನಡೆದಿದೆ. ಜೊತೆಗೆ, ತುಮಕೂರು ಜಿಲ್ಲಾ ನ್ಯಾಯಾಲಯವೂ ಈ ಕುರಿತು ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರವೇ ಭೂಮಿ ಮಂಜೂರು ಮಾಡಲಾಗಿದೆ. ಹೀಗಾಗಿ, ಸರ್ಕಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷದ ಮತ್ತಷ್ಟು ಆಕ್ರೋಶ

ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು, “ಇಲ್ಲಿ ವಿಷಯವೇನು ಅಂದರೆ, ಕಾಂಗ್ರೆಸ್ ಕಛೇರಿಗಾಗಿ ಭೂಮಿ ನೀಡಿರುವುದು ತಕರಾರು ಅಲ್ಲ. ಆದರೆ ಕಾನೂನುಬಾಹಿರವಾಗಿ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ನೀಡಿರುವುದು ಗಂಭೀರ ವಿಷಯ. ಇದು ಅಧಿಕಾರ ದುರುಪಯೋಗವಲ್ಲವೇ?” ಎಂದು ಪ್ರಶ್ನಿಸಿದರು.

ಇದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, “ಸರ್ಕಾರದ ನಿರ್ಧಾರ ಅಂತಿಮ. ನೀವು ಹೇಳಿದಂತೆ ಇದು ಕಾನೂನುಬಾಹಿರವಾಗಿ ಮಾಡಲಾದ ಕೆಲಸವಲ್ಲ. ನಮ್ಮ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಬದಲು, ಹಿಂದಿನ ಬಿಜೆಪಿ ಸರ್ಕಾರ ಏಕೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿಲ್ಲ? ನಮ್ಮ ಸರ್ಕಾರ ತೆಗೆದುಕೊಂಡಿದೆ. ನಿಮಗೂ ಪಕ್ಕದಲ್ಲೇ ಜಾಗ ಇದೆ. ನೀವು ಅರ್ಜಿ ಕೊಡಿ, ಪರಿಶೀಲಿಸಿ ನಿಮಗೂ ಮಂಜೂರು ಮಾಡುತ್ತೇವೆ” ಎಂದು ಪ್ರತಿಯಾಗಿ ಹೇಳಿದರು.

ಸಿಎಂ ಸಿದ್ದರಾಮಯ್ಯ

ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ವಿರೋಧ ಪಕ್ಷದ ಶಾಸಕರಿಗೂ ನಾವು ಅನುದಾನ ನೀಡುತ್ತೇವೆ. ಆದರೆ ಎಷ್ಟು ಕೊಡ್ತೀವಿ ಅಂತಾ ಹೇಳಲ್ಲ” ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು. ಇದಕ್ಕೆ ಶಾಸಕ ಸುರೇಶ್ ಗೌಡ ತಕ್ಷಣ, “ನಿಮ್ಮ ಶಾಸಕರಿಗೆ ಐವತ್ತು ಕೋಟಿ ಕೊಡ್ತಿದ್ದೀರಿ, ನಮಗೂ ಐವತ್ತು ಕೋಟಿ ಕೊಡಿ” ಎಂದು ಪ್ರತಿಕ್ರಿಯಿಸಿದರು.

ಇದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ, “ನೀವು ಹಿಂದಿನ ಚುನಾವಣೆಯಲ್ಲಿ ಗೆದ್ದಿರಲಿಲ್ಲ. ಹೀಗಾಗಿ ನಿಮಗೆ ವಿಷಯ ಗೊತ್ತಿಲ್ಲ. ಕೂತ್ಕೊಳ್ಳಿ” ಎಂದು ಹೇಳಿದರು. ಅವರ ಮಾತಿನಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿ ಅನುದಾನ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿತ್ತೆಂಬ ಸಂದೇಶವನ್ನೂ ನೀಡಿದರು. “ನಾವು ಎಲ್ಲರಿಗೂ ಸಮಾನವಾಗಿ ಅನುದಾನ ನೀಡುತ್ತೇವೆ” ಎಂದು ಸಿಎಂ ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಭವನಕ್ಕಾಗಿ ಭೂಮಿ ಹಂಚಿಕೆ ಮಾಡಿದ ವಿಚಾರ ವಿಧಾನಸಭೆಯಲ್ಲಿ ಕಿಚ್ಚು ಹಚ್ಚಿದ್ದು, ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಸಚಿವರು ಹಾಗೂ ಮುಖ್ಯಮಂತ್ರಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇದರಿಂದ ಕಾಂಗ್ರೆಸ್–ಬಿಜೆಪಿ ಶಾಸಕರ ನಡುವೆ ತೀವ್ರ ವಾಗ್ವಾದ ನಡೆಯಿತು.