ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇಸ್ಪೀಟ್ ಆಟದ ಕಥೆಯನ್ನು ಹೇಳಿದರು. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಸ್ಪೀಟ್ ಆಟದಿಂದ ತಪ್ಪಿಸಿಕೊಂಡರೆ, ಪರಮೇಶ್ವರ್ ಸಿಕ್ಕಿಬಿದ್ದರು ಎಂದರು.
ಬೆಂಗಳೂರು (ಆ.21): ಸಾಮಾನ್ಯವಾಗಿ ಹಬ್ಬದಲ್ಲಿ ಇಸ್ಪೀಟ್ ಆಡೋದನ್ನು ನೋಡುವುದಕ್ಕೆ ಹೋಗಿದ್ದ ಪರಮೇಶ್ವರ್ ಪೊಲೀಸರು ಬಂದಾಗ ಸಿಕ್ಕಿ ಬೀಳುತ್ತಾರೆ. ಆದರೆ, ಇಸ್ಪೀಟ್ ಆಟವಾಡುತ್ತಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಓಡಿ ಹೋಗುತ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆ ವಿವರಣೆ ವೇಳೆ ಈ ಇಸ್ಪೀಟ್ ಕಥೆಯನ್ನು ಕಟ್ಟಿ, ವಿಧಾನಸಭೆಯಲ್ಲಿ ಹೇಳಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನ ಸಾವನ್ನಪ್ಪಿದ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ವಿಪಕ್ಚ ನಾಯಕ ಆರ್.ಅಶೋಕ್ ಹೀಗೆ ಮಾತನಾಡಿದರು. ನಮ್ಮೂರಲ್ಲಿ ಯುಗಾದಿ ಹಬ್ಬಕ್ಕೆ ಇಸ್ಪೀಟ್ ಆಡುತ್ತಾರೆ. ಸಾಮಾನ್ಯವಾಗಿ ಇಸ್ಪೀಟ್ ಆಡುವಾಗ ಹೋಗಿ ನೋಡುತ್ತೀವಿ. ಹಾಗೇ ಪರಮೇಶ್ವರ್ ಇಸ್ಪೀಟ್ ಆಡ್ತಾ ಇದ್ದಿದ್ದನ್ನು ನೋಡುತ್ತಿದ್ದರು. ಅಲ್ಲಿಗೆ ಪೊಲೀಸರು ಬರುತ್ತಾರೆ, ಇಸ್ಪೀಟ್ ಆಡ್ತಿರೋದು ಓಡಿ ಹೋಗುತ್ತಾರೆ. ಆದರೆ ಅಲ್ಲಿ ಸಿಕ್ಕಿ ಹಾಕಿಕೊಳ್ಳೋದು ಪರಮೇಶ್ವರ್. ಹಾಗೇ ಇದರಲ್ಲಿ ತಪ್ಪಿಸಿಕೊಂಡವರು ಡಿ.ಕೆ. ಶಿವಕುಮಾರ್ ಮತ್ತೆ ಸಿದ್ದರಾಮಯ್ಯ. ತಗಲಾಕೊಂಡವರು ಪರಮೇಶ್ವರ್ ಎಂದು ಕಥೆಯನ್ನು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನಾನು ಕೆಸಿಎ ಮೆಂಬರ್, ಅಲ್ಲಿ ಇರೋರೆಲ್ಲ ನಮ್ ಫ್ರೆಂಡ್ಸ್. ನಾನು ಬೆಂಗಳೂರಿನ ಮಿನಿಸ್ಟರ್. ನಾನು ಬಾವುಟನೂ ಹಿಡ್ಕೊಂಡು ಓಡಾಡಿದ್ದೇನೆ, ಆರ್‌ಸಿಬಿ ಗೆದ್ದುಕೊಂಡು ಬಂದ ಆರ್‌ಸಿಬಿ ಕಪ್‌ಗೂ ಮುತ್ತು ಕೊಟ್ಟಿದ್ದೇನೆ. ಏನೋ ತಪ್ಪು ಆಗಿದೆ, ನಾನು ಒಬ್ಬ ಕ್ರಿಕೆಟ್ ಅಭಿಮಾನಿ. ಪೊಲೀಸರನ್ನು ನಾನು ಬ್ಲೇಮ್ ಮಾಡೋಕೆ ಹೋಗಲ್ಲ. ಈಗಾಗಲೇ ಸರ್ಕಾರ ಕೂಡಲೇ ಕ್ರಮವಹಿಸಿದೆ. ನೀವು ಏನು ಟ್ವಿಟ್ ಮಾಡಿದ್ದೀರಲ್ಲ ನಾನು ಹೇಳಲಾ..? ಕುಂಭಮೇಳದಲ್ಲಿ ಕಾಲ್ತುಳಿತ ಆಗಿಲ್ಲವಾ.? ಎಂದು ಕಥೆ ಕಟ್ಟಿದ ವಿಪಕ್ಷ ನಾಯಕ ಆರ. ಅಶೋಕ್‌ಗೆ ತಿರುಗೇಟು ನೀಡಿದರು.
ಕಾಲ್ತುಳಿತದಲ್ಲಿ ಸರ್ಕಾರ ಏನೇನ್ ಮಾಡಬೇಕೋ ಎಲ್ಲಾ ಮಾಡಿದೆ:
ಕಾಲ್ತುಳಿತ ದುರಂತದ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಅಹಿತಕರ ಘಟನೆ ಆಗಬಾರದಿತ್ತು, ಆಗಿ ಹೋಗಿದೆ. ಆರ್ ಸಿ ಬಿ , ಕೆಎಸ್‌ಸಿಎ ಅವರ ಜೊತೆಯಲ್ಲಿ ನಾವೂ ಪಾತ್ರದಾರಿಗಳು. ನಮ್ಮ ಅಧಿಕಾರಿಗಳದ್ದು ತಪ್ಪಿದೆ. ನಾವು 5 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನೂ ಸಹ ಅವರ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮ ಆಗಿದೆ. ಒಟ್ಟು 11 ಜನ ಸಾವನ್ನಪ್ಪಿದ್ದು, ಸಂತ್ರಸ್ತ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ. ಕೂಡಾ ಕೊಟ್ಟಿದ್ದೇವೆ. ಗಾಯಾಳುಗಳಿಗೆ ಸಹ ಪರಿಹಾರ ಕೊಟ್ಟಿದ್ದೇವೆ. ಗುಪ್ತಚರ ಇಲಾಖೆ ವೈಫಲ್ಯ ಅನ್ನೋ ಕಾರಣಕ್ಕಾಗಿ, ಗುಪ್ತಚರ ಇಲಾಖೆ ಮುಖ್ಯಸ್ಥ ರನ್ನು ಬೇರೆ ಕಡೆ ವರ್ಗಾವಣೆ ಮಾಡಿದ್ದೇವೆ. ಸರ್ಕಾರ ತೆಗೆದುಕೊಳ್ಳಬಹುದಾದ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.
ಕಾಲ್ತುಳಿತದಲ್ಲಿ ಮೃತಪಟ್ಟ ಆ 11 ಮಂದಿ ಮತ್ತೆ ಬರೋದಿಲ್ಲ. ನ್ಯಾಯಾಂಗ ತನಿಖೆ ಆದರೂ ಅವರು ಬರೋದಿಲ್ಲ. ಆದರೆ ಮುಂದೆ ಆ ರೀತಿ ಆಗಬಾರದು. ಅದಕ್ಕಾಗಿ ನಾವು ಜನಸಂದಣಿ ನಿಯಂತ್ರಣ ಬಿಲ್ ತಂದಿದ್ದೇವೆ. ಪೊಲಿಟಿಕಲ್ ಮೀಟಿಂಗ್, ಧಾರ್ಮಿಕ ಕಾರ್ಯಕ್ರಮದಲ್ಲಿ ಆಗಬಹುದು. ಅದು ಆಗಬಾರದು ಎಂದು ಈ ಬಿಲ್ ತಂದಿದ್ದೇವೆ. ಈ ಬಿಲ್ ಅನ್ನು ಇವಾಗ ಸದನ ಸಮಿತಿ ಗೆ ಕೊಟ್ಟಿದ್ದೇವೆ. ಸದನ ಸಮಿತಿಯಲ್ಲಿ ಚರ್ಚಿಸಿ ಅದನ್ನು ಈ ಸದನಕ್ಕೆ ಮತ್ತೆ ತರೋಣ. ಜನ ಸಂದಣಿ ಇದ್ದಾಗ ಏನೆಲ್ಲ ಮುಂಜಾಗ್ರತಾ ಕ್ರಮ ವಹಿಸಿರಬೇಕೆಂದು ಮಾಡಿದ್ದೇವೆ ಎಂದು ಸದನಕ್ಕೆ ಪರಮೇಶ್ವರ್ ಮಾಹಿತಿ ನೀಡಿದರು.
ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಪಾಸಿಟಿ ಕಡಿಮೆ ಇದೆ. ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂ ದೊಡ್ಡದು ಚೆನ್ನಾಗಿದೆ. ಅದಕ್ಕಾಗಿ ಇಲ್ಲಿ ಹೊಸ ಸ್ಟೇಡಿಯಂ ಕಟ್ಟಬೇಕೆಂದು ತೀರ್ಮಾನ ಮಾಡಿದ್ದೇವೆ. ತುಮಕೂರಿನ ಬಳಿ 43 ಎಕರೆಯಲ್ಲಿ ಕ್ರೀಡಾಂಗಣಕ್ಕೆ ತೀರ್ಮಾನ ಮಾಡಿದ್ದೇವೆ. ಅಲ್ಲಿ ಸಿಎಂ, ಡಿಸಿಎಂ ಭೂಮಿ ಪೂಜೆ ಯನ್ನು ಮಾಡಿದ್ದೇವೆ. ದೇವನಹಳ್ಳಿಯಲ್ಲಿ ಸ್ಪೋರ್ಟ್ಸ್ ಕ್ಲಬ್ ಮಾಡಲು ತೀರ್ಮಾನಿಸಿದ್ದೇವೆ. ಸ್ಪೋರ್ಟ್ಸ್ ಆಕ್ಟಿವಿಟಿಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬಾರದು ಎಂದು ಅವರಿಗೆ ಬಿಟ್ಟಿದ್ದೇವೆ. ಈ ಘಟನೆ ಆದಮೇಲೆ ಸರ್ಕಾರ ಮಧ್ಯ ಪ್ರವೇಶ ಮಾಡಿ, ಕೆಲ ನಿಯಮಗಳನ್ನು ಮಾಡಲು ಹೊರಟಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
