ಕೈ ಕಾರ್ಯಕರ್ತರ ವಿರುದ್ಧದ ಕೇಸ್ ವಾಪಸ್, 13 ರಾಜ್ಯಗಳಲ್ಲಿ ಇಂದು ಭಾರೀ ಮಳೆ ಎಚ್ಚರಿಕೆ, ಬುರುಡೆ ಪ್ರಕರಣದ ತನಿಖೆ ಎನ್‌ಐಎ ವಹಿಸಲು ಅಮಿತ್‌ ಶಾಗೆ ಸ್ವಾಮೀಜಿ ನಿಯೋಗ ಮನವಿ, ಸ್ಥಳೀಯ ಚುನಾವಣೆಗೆ ಇವಿಎಂ ಬದಲಾಗಿ ಬ್ಯಾಲೆಟ್‌ಗೆ ಸಂಪುಟ ಚಿಂತನೆ ಹಲವು ಸುದ್ದಿಗಳ ಸಂಕ್ಷಿಪ್ತ ವರದಿ ಇಲ್ಲಿದೆ.

1.ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿ 60 ಕೇಸ್‌ಗಳು ವಾಪಸ್‌

ವಿವಿಧ ಸಂದರ್ಭಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ರಾಜ್ಯದ ಬೇರೆಬೇರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 15ಕ್ಕೂ ಹೆಚ್ಚಿನ ಪ್ರಕರಣಗಳು, ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್‌ ಠಾಣೆ ಮೇಲೆಯೇ ಕಲ್ಲು ತೂರಿ ದಾಂಧಲೆ ಎಬ್ಬಿಸಿದ್ದ ಪ್ರಕರಣ ಸೇರಿ 60 ಪ್ರಕರಣಗಳನ್ನು ಹಿಂಪಡೆಯಲು ಗುರುವಾರದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

2. ಬುರುಡೆ ಪ್ರಕರಣದ ತನಿಖೆ ಎನ್‌ಐಎ ವಹಿಸಲು ಅಮಿತ್‌ ಶಾಗೆ ಸ್ವಾಮೀಜಿ ನಿಯೋಗ ಮನವಿ

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಹಿಸಲು ಕರ್ನಾಟಕದ ಸ್ವಾಮೀಜಿಗಳ ನಿಯೋಗ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿಯಾಗಿ ಮನವಿಯನ್ನು ಸಲ್ಲಿಸಿದೆ.ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗದಲ್ಲಿ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸೇರಿದಂತೆ ವಿವಿಧ ಪೀಠಗಳ ಎಂಟು ಮಂದಿ ಸ್ವಾಮೀಜಿಗಳು ಇದ್ದರು. ಗೃಹ ಸಚಿವ ಅಮಿತ್ ಶಾ ದೆಹಲಿ ಕಚೇರಿಯಲ್ಲಿ ಬುಧವಾರ ರಾತ್ರಿ ಭೇಟಿ ಮಾಡಿ ಎನ್‌ಐಎಗೆ ವಹಿಸಲು ಮನವಿ ಮಾಡಿದ್ದಾರೆ. ಅಲ್ಲದೆ ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವರ ಜೊತೆಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

3.13 ರಾಜ್ಯಗಳಲ್ಲಿ ಇಂದು ಭಾರೀ ಮಳೆ ಎಚ್ಚರಿಕೆ

ಉತ್ತರ ಭಾರತದ ಕೆಲ ರಾಜ್ಯಗಳು ಮಳೆಯಿಂದ ನಲುಗಿರುವ ನಡುವೆಯೇ, ಶುಕ್ರವಾರ ದೇಶದ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ, ಗೋವಾ, ಮಹಾರಾಷ್ಟ್ರ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರಾ, ಉತ್ತರಾಖಂಡ, ಉತ್ತರಪ್ರದೇಶಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಇಲಾಖೆ ಹೇಳಿದೆ.

4. ಸ್ಥಳೀಯ ಚುನಾವಣೆಗೆ ಇವಿಎಂ ಬದಲಾಗಿ ಬ್ಯಾಲೆಟ್‌ : ಸಂಪುಟ

ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಿನ ದಿನಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ಬದಲು ಹಿಂದೆ ಇದ್ದಂತೆ ಬ್ಯಾಲೆಟ್‌ ಪೇಪರ್‌ ಮೂಲಕ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು, ಈ ಸಂಬಂಧ ಅಗತ್ಯ ಕಾನೂನು ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

5. ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾದ ಬೆನ್ನಲ್ಲೇ ಸಬ್ಸಿಡಿ ದರದಲ್ಲಿ ಮಾರಾಟ : ಸರ್ಕಾರ

ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾದ ಬೆನ್ನಲ್ಲೇ ದೇಶದ ಹಲವು ಪ್ರಮುಖ ನಗರಗಳಲ್ಲಿ ಕೆಜಿಗೆ 24 ರು.ನಂಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಗುರುವಾರದಿಂದಲೇ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಆರಂಭವಾಗಿದೆ.ದಿಲ್ಲಿಯಲ್ಲಿ ಸಬ್ಸಿಡಿ ಈರುಳ್ಳಿ ಮಾರಾಟಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ, ‘ ಬಫರ್‌ ಸ್ಟಾಕ್‌ನಿಂದ ಸುಮಾರು 25 ಟನ್‌ ಈರುಳ್ಳಿಯನ್ನು ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ನಾಫೆಡ್‌. ಎನ್‌ಸಿಸಿಎಫ್‌ ಮತ್ತು ಕೇಂದ್ರೀಯ ಭಂಡಾರದ ಮೂಲಕ ಮಾರಲಾಗುತ್ತದೆ.

6. ಕರ್ನಾಟಕದ 8 ಸಚಿವರ ಬಳಿ ₹100 ಕೋಟಿಗಿಂತ ಹೆಚ್ಚು ಆಸ್ತಿ

ಕ್ರಿಮಿನಲ್‌ ಕೇಸಿನಲ್ಲಿ ಬಂಧಿತ ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಿಗಳ ವಜಾಕ್ಕೆ ಅವಕಾಶ ಕೊಡುವ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವ ಹೊತ್ತಿನಲ್ಲೇ, ದೇಶದ ವಿವಿಧ ರಾಜ್ಯಗಳ ಸಚಿವರ ಮೇಲಿರುವ ಕ್ರಿಮಿನಲ್‌ ಪ್ರಕರಣ ಮತ್ತು ಅವರ ಸಂಪತ್ತಿನ ಕುರಿತ ವರದಿಯೊಂದನ್ನು ಚುನಾವಣಾ ಕಣ್ಗಾವಲು ಸಂಸ್ಥೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌(ಎಡಿಆರ್‌) ಬಿಡುಗಡೆ ಮಾಡಿದೆ. ವರದಿ ಅನ್ವಯ, ದೇಶದ ಬಿಲಿಯನೇರ್‌ (100 ಕೋಟಿ ರು. ಆಸ್ತಿ ಹೊಂದಿದ) ಸಚಿವರ ಪಟ್ಟಿಯಲ್ಲಿ 8 ಜನರೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಜೊತೆಗೆ ಅತಿ ಹೆಚ್ಚು ಕ್ರಿಮಿನಲ್‌ ಕೇಸು ಹೊಂದಿರುವ ಸಚಿವರ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.