ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯಿಂದ ಹಿಡಿದು ಅನ್ನಭಾಗ್ಯ ಅಕ್ಕಿ ಹಗರಣದವರೆಗೆ ಈ ವಾರದ ಪ್ರಮುಖ ಐದು ಸುದ್ದಿಗಳನ್ನು ಈ ಸಂಗ್ರಹ ಒಳಗೊಂಡಿದೆ. 

1.ಧರ್ಮಸ್ಥಳ ಬುರುಡೆ ಪತ್ತೆ ಸ್ಥಳದ ಮಣ್ಣನ್ನು ಲ್ಯಾಬ್‌ಗೆ ಕಳುಹಿಸಿದ ಎಸ್‌ಐಟಿ: ಚಿನ್ನಯ್ಯ ಕಣ್ಣೀರು!

ಧರ್ಮಸ್ಥಳ ಗ್ರಾಮದ ಬುರುಡೆ ಕೇಸಿನಲ್ಲಿ ಆರೋಪಿ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟ ಸೌಜನ್ಯಳ ಮಾವ ವಿಠಲ ಗೌಡನ ಸ್ಥಳ ಮಹಜರು ನಡೆಸಿದ ಸ್ಥಳದ ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್‌ಐಟಿ ತಂಡ ಕಳುಹಿಸಿದೆ. ಈ ಸ್ಥಳದಲ್ಲಿ ಮತ್ತೆ ಎಲುಬಿನ ಅವಶೇಷ ಪತ್ತೆಯಾಗಿದೆ ಎಂದು ಹೇಳಲಾಗಿದ್ದರೂ ಎಸ್‌ಐಟಿ ಅದನ್ನು ದೃಢಪಡಿಸಿಲ್ಲ. ಬುರುಡೆ ಪ್ರಕರಣ ವೇಳೆ ಯುಟ್ಯೂಬ್‌ನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮಿಥ್ಯಾರೋಪ ಮಾಡಿದ ಕೇರಳದ ಲಾರಿ ಮಾಲೀಕ ಮನಾಫ್‌ಗೆ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ಜಾರಿ ಮಾಡಿದೆ. ಇದೇ ರೀತಿ ಬುರುಡೆ ಗ್ಯಾಂಗ್‌ ಜೊತೆ ಸಂಪರ್ಕದಲ್ಲಿ ಆರೋಪಕ್ಕೆ ಒಳಗಾಗಿರುವ ಕೇರಳ ಸಿಪಿಎಂ ಸಂಸದ ಸಂತೋಷ್‌ ಕುಮಾರ್‌ಗೂ ವಿಚಾರಣೆ ಹಾಜರಾಗಲು ನೋಟಿಸ್‌ ನೀಡಲು ಎಸ್ಐಟಿ ಚಿಂತಿಸಿದೆ. ಭಾನುವಾರ ರಜಾ ದಿನವಾದ್ದರಿಂದ ಎಸ್‌ಐಟಿ ಯಾರನ್ನೂ ವಿಚಾರಣೆ ನಡೆಸಿಲ್ಲ. ಸೋಮವಾರ ಇವರೆಲ್ಲರೂ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

2.ವಿಜಯಪುರದಲ್ಲಿ ಈದ್ ಮಿಲಾದ್ ವೇಳೆ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ?

ವಿಜಯಪುರದಲ್ಲಿ ಈದ್ ಮಿಲಾದ್‌ ಆಚರಣೆಯ ನಿಮಿತ್ತ ಸ್ಥಳೀಯ ಮುಸ್ಲಿಂ ಸಂಘಟನೆಯೊಂದು ಆಯೋಜಿಸಿದ್ದ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಗರದ ವಿವಿಧ ಭಾಗಗಳಿಂದ ಗಾಂಧಿ ಚೌಕ್‌ ಕಡೆಗೆ ಸಾಗಿದ ಈ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದು ಇತ್ತೀಚಿನದಾ ಅಥವಾ ಹಳೆಯ ವಿಡಿಯೋನಾ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

3.ವಿಸರ್ಜನೆ ವೇಳೆ ಗಣೇಶಗೆ ಕಲ್ಲು- ಮದ್ದೂರು ಉದ್ವಿಗ್ನ : ವಿಗ್ರಹದ ಮೇಲೆ ಉಗುಳಿದ ಸಾಗರ ಬಾಲಕರು

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಣಪತಿ ಮೂರ್ತಿ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ತೂರಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಭಾನುವಾರ ನಡೆದಿದೆ. ಇದರ ಬೆನ್ನಲ್ಲೇ, ಧಾರ್ಮಿಕ ಕೇಂದ್ರವೊಂದರ ಮೇಲೆ ಕಲ್ಲು ತೂರಾಟ ನಡೆದಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಎರಡು ಗುಂಪುಗಳು ಪರಸ್ಪರ ಕಲ್ಲೆಸೆದುಕೊಂಡಿವೆ. ಈ ವೇಳೆ ಪೊಲೀಸರು ಸೇರಿ 30 ಜನ ಗಾಯಗೊಂಡಿದ್ದಾರೆ. ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಲಾಗಿದೆ.

4.ಅನ್ನಭಾಗ್ಯದ ಅಕ್ಕಿ ಫಾರಿನ್‌ಗೆ

ಬಿಪಿಎಲ್‌ ಮತ್ತು ಎಪಿಎಲ್‌ ಸಮುದಾಯದ ಜನರಿಗೆ ಪಡಿತರ ವ್ಯವಸ್ಥೆ ಮೂಲಕ ವಿತರಿಸಲೆಂದು ಅನ್ನಭಾಗ್ಯ ಯೋಜನೆಯಡಿ ಸರ್ಕಾರ ವಿತರಿಸುವ ಅಕ್ಕಿಯನ್ನು ಪಾಲಿಶ್‌ ಮಾಡಿ ಸಿಂಗಾಪುರ, ಫ್ರಾನ್ಸ್‌, ದುಬೈ ಮೊದಲಾದ ದೇಶಗಳಿಗೆ ರಫ್ತು ಮಾಡಲು ಸಜ್ಜಾಗಿದ್ದ ಜಾಲವೊಂದನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಧಿಕಾರಿಗಳ ದಾಳಿ ವೇಳೆ ವಿವಿಧ ಬ್ರ್ಯಾಂಡ್‌ನೇಮ್‌ ಹಾಕಿದ್ದ 5000 - 6000 ಟನ್‌ನಷ್ಟು ಅಕ್ಕಿ ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ, ಕೊಪ್ಪಳ ಜಿಲ್ಲೆ ಗಂಗಾವತಿ, ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಇತ್ತೀಚೆಗೆ ಅನ್ನಭಾಗ್ಯದ ಅಕ್ಕಿಯ ಕಳ್ಳಸಾಗಣೆ ಬೆಳಕಿಗೆ ಬಂದ ಬೆನ್ನಲ್ಲೇ ಈ ಬೃಹತ್‌ ಹಗರಣ ಬೆಳಕಿಗೆ ಬಂದಿದೆ.

5.ಹಿಂದೂ ಎಂದು ಬರೆಸಬೇಡಿ, ವೀರಶೈವ ಲಿಂಗಾಯತ ಎಂದು ದಾಖಲಿಸಿ: ಸಚಿವ ಈಶ್ವರ್ ಖಂಡ್ರೆ

ಇದೇ ತಿಂಗಳ 22ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಸಮುದಾಯದವರು ವೀರಶೈವ ಲಿಂಗಾಯತ ಎಂದು ಬರೆಸಬೇಕು. ಹಿಂದೂ ಎಂದು ಬರೆಸಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22 ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಹಿಂದಿನಿಂದಲೂ ಮಹಾಸಭಾವು ವೀರಶೈವ ಲಿಂಗಾಯತ ಧರ್ಮದ ಪ್ರತಿಪಾದನೆ ಮಾಡುತ್ತಾ ಬಂದಿದೆ. ಹೀಗಾಗಿ ಧರ್ಮದ ಕಾಲಂನ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.