ಕಳೆದ ಮೂರು ದಶಕಗಳಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದೇ ಸೂಪರ್‌ಫಾಸ್ಟ್ ರೈಲು ಸಂಪರ್ಕವಿತ್ತು. ಸಂಸದ ತೇಜಸ್ವಿ ಸೂರ್ಯ ಅವರ ನಿರಂತರ ಪ್ರಯತ್ನದ ಫಲವಾಗಿ, ರೈಲ್ವೆ ಸಚಿವಾಲಯವು ಲೇನ್ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಶೀಘ್ರದಲ್ಲೇ ಎರಡೂ ನಗರಗಳ ನಡುವೆ ಹೆಚ್ಚಿನ ರೈಲು ಸೇವೆಗಳು ಆರಂಭವಾಗಲಿವೆ.
ಬೆಂಗಳೂರು (ಸೆ.27): ಕಳೆದ ಮೂರು ದಶಕಗಳಿಂದಲೂ ಕೇವಲ ಒಂದೇ ಒಂದು ಸೂಪರ್‌ಫಾಸ್ಟ್ ರೈಲಿನ ಮೂಲಕ ಸಂಪರ್ಕ ಸಾಧಿಸಿದ್ದ ಬೆಂಗಳೂರು ಮತ್ತು ಮುಂಬೈ ನಗರಗಳ ನಡುವೆ ಶೀಘ್ರದಲ್ಲೇ ಹೆಚ್ಚಿನ ರೈಲು ಸೇವೆಗಳು ಆರಂಭವಾಗುವ ಸಾಧ್ಯತೆ ಇದೆ. ಸಂಸದ ತೇಜಸ್ವಿ ಸೂರ್ಯ ಅವರು ಈ ಕುರಿತು ಟ್ವೀಟ್ ಮಾಡುವ ಮೂಲಕ ಬೆಂಗಳೂರು ಮತ್ತು ಮುಂಬೈ ಜನರ ಬಹುದಿನಗಳ ಬೇಡಿಕೆ ಈಡೇರುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮೂಲಕ ಬೆಂಗಳೂರು ಜನತೆಗೆ ಶುಭ ಸಂದೇಶ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡುತ್ತಾ 'ಬೆಂಗಳೂರು ಮತ್ತು ಮುಂಬೈ ಜನರಿಗೆ ನನ್ನ ಬಳಿ ಒಂದು ಸಂತಸದ ಸುದ್ದಿ ಇದೆ. ಕಳೆದ 30 ವರ್ಷಗಳಿಂದ ಈ ಎರಡೂ ಮಹಾನಗರಗಳನ್ನು ಕೇವಲ 'ಉದ್ಯಾನ ಎಕ್ಸ್‌ಪ್ರೆಸ್' ಎಂಬ ಒಂದೇ ಸೂಪರ್‌ಫಾಸ್ಟ್ ರೈಲು ಸಂಪರ್ಕಿಸುತ್ತಿತ್ತು. ಆದರೆ, ಆ ರೈಲು ಸಹ ಪ್ರಯಾಣದ ಅವಧಿಯನ್ನು ಪೂರ್ಣಗೊಳಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ಹೆಚ್ಚಿನ ಜನರು ಅನಿವಾರ್ಯವಾಗಿ ಬಸ್ ಅಥವಾ ವಿಮಾನಗಳ ಮೂಲಕ ಪ್ರಯಾಣಿಸಬೇಕಾಗಿತ್ತು. ಇದು ಪ್ರಯಾಣವನ್ನು ದುಬಾರಿ ಮತ್ತು ಅಸುರಕ್ಷಿತವಾಗಿಸಿತ್ತು ಎಂದು ವಿವರಿಸಿದ್ದಾರೆ.
ಸಂಸತ್ತಿನಲ್ಲಿ ನಿರಂತರ ಬೇಡಿಕೆ:
ಬೆಂಗಳೂರು ಮತ್ತು ಮುಂಬೈ ಈ ಎರಡೂ ಆರ್ಥಿಕವಾಗಿ ಪ್ರಮುಖ ನಗರಗಳ ನಡುವೆ ಕೇವಲ ಒಂದೇ ಒಂದು ನೇರ ಸೂಪರ್‌ಫಾಸ್ಟ್ ರೈಲು ಇರುವುದು ಆಶ್ಚರ್ಯಕರ ಸಂಗತಿಯಾಗಿತ್ತು. ಈ ಸಮಸ್ಯೆಯ ಕುರಿತು ಕಳೆದ ನಾಲ್ಕು ವರ್ಷಗಳಿಂದಲೂ ತಾನು ಸಂಸತ್ತು, ಪಿಎಸಿ ಸಭೆಗಳು, ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ರೈಲ್ವೆ ಸಚಿವರೊಂದಿಗೆ ಅನೇಕ ಬಾರಿ ಮನವಿ ಮಾಡಿದ್ದಾಗಿ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಈ ನಿರಂತರ ಪ್ರಯತ್ನದ ಫಲವಾಗಿ, ಅತ್ಯಂತ ಕ್ರಿಯಾಶೀಲ ಮತ್ತು ವಿದ್ವಾಂಸರಾದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬೇಡಿಕೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಬೆಂಗಳೂರು ಮತ್ತು ಮುಂಬೈ ರೈಲ್ವೆ ನಿಲ್ದಾಣಗಳೆರಡರಲ್ಲೂ ಲೇನ್ ಸಾಮರ್ಥ್ಯವನ್ನು (Lane Capacity) ಹೆಚ್ಚಿಸುವ ಮೂಲಕ ಹೆಚ್ಚಿನ ಸೂಪರ್‌ಫಾಸ್ಟ್ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಸಮಸ್ಯೆ ಇತ್ಯರ್ಥಪಡಿಸಲು ಬೆಂಬಲ ನೀಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಸಂದ ತೇಜಸ್ವಿ ಸೂರ್ಯ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಲಕ್ಷಾಂತರ ಜನರಿಗೆ ಪ್ರಯಾಣದ ಅನುಕೂಲ:
ಮುಂದಿನ ದಿನಗಳಲ್ಲಿ, ಎರಡೂ ನಗರಗಳ ನಡುವಿನ ರೈಲು ಪ್ರಯಾಣದ ಸಂಖ್ಯೆ ಹೆಚ್ಚಾಗಲಿದ್ದು, ಇದು ಲಕ್ಷಾಂತರ ಜನರಿಗೆ ಪ್ರಯೋಜನಕಾರಿಯಾಗಲಿದೆ. ಈ ಮಹತ್ವದ ಬದಲಾವಣೆಗೆ ಕಾರಣರಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತೇಜಸ್ವಿ ಸೂರ್ಯ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಮಹಾರಾಷ್ಟ್ರದ ರಾಜಧಾನಿ ಮುಂಬೈ ನಡುವಿನ ಉತ್ತಮ ರೈಲು ಸಂಪರ್ಕವು ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲದೆ, ಆರ್ಥಿಕ ಚಟುವಟಿಕೆಗಳು, ವ್ಯಾಪಾರ ಮತ್ತು ವಾಣಿಜ್ಯಕ್ಕೂ ಉತ್ತೇಜನ ನೀಡಲಿದೆ. ಇದು ಈ ಎರಡೂ ಪ್ರಮುಖ ಆರ್ಥಿಕ ನೋಡ್‌ಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ.
