ಮೈಸೂರು ದಸರಾ ಮಹೋತ್ಸವವನ್ನು ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರಿಗೆ ಸಂವಿಧಾನದ ಪ್ರಸ್ತಾವನೆಯ ಬಗ್ಗೆ ಪ್ರಶ್ನಿಸಿದ ನ್ಯಾಯಪೀಠ, ಸರ್ಕಾರದ ನಿರ್ಧಾರ ಎತ್ತಿಹಿಡಿದು, ವಿವಾದಕ್ಕೆ ಅಂತ್ಯ ಹಾಡಿದೆ.

ನವದೆಹಲಿ (ಸೆ.19): ವಿವಾದಕ್ಕೆ ಕಾರಣವಾಗಿದ್ದ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ.

ಅರ್ಜಿ ವಿಚಾರಣೆ, ನ್ಯಾಯಪೀಠದ ಅಭಿಪ್ರಾಯ:

ಬೆಂಗಳೂರಿನ ಹಾಲನಾಯಕನಹಳ್ಳಿಯ ನಿವಾಸಿ ಎಚ್.ಎಸ್. ಗೌರವ್ ಎಂಬುವವರು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ. ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದ ಆಲಿಸಿದ ಪೀಠ, 'ನಮ್ಮ ದೇಶದ ಸಂವಿಧಾನದ ಪ್ರಸ್ತಾವನೆ ಏನು?' ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಲು ಅರ್ಜಿದಾರರು 3 ನಿಮಿಷ ಸಮಯ ಕೋರಿದರು.

ರಾಜಕೀಯ ಪ್ರೇರಿತ ಆರೋಪ:

ದೂರುದಾರರು, ದಸರಾ ಉದ್ಘಾಟನೆಯಂತಹ ಧಾರ್ಮಿಕ ಸಮಾರಂಭವನ್ನು ಅನ್ಯ ಧರ್ಮದ ವ್ಯಕ್ತಿ ಉದ್ಘಾಟಿಸುವುದು ಸೂಕ್ತವಲ್ಲ ಎಂದು ವಾದಿಸಿದರು. ಇದೊಂದು ರಾಜಕೀಯ ಉದ್ದೇಶದಿಂದ ಮಾಡಿದ ಕ್ರಮ ಎಂದು ಅರ್ಜಿದಾರರು ಆರೋಪಿಸಿದರು. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು. ಉಭಯ ವಾದ ಆಲಿಸಿದ ನಂತರ, ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತು. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್, ಸರ್ಕಾರದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದೆ. ಸಾಹಿತಿ ಬಾನು ಮುಷ್ತಾಕ್ ಅವರು ಈಗಾಗಲೇ ದಸರಾ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಈ ವಿವಾದ ಈಗ ಕಾನೂನಾತ್ಮಕವಾಗಿ ಅಂತ್ಯಗೊಂಡಂತಾಗಿದೆ.