ಮಂಡ್ಯ ಜಿಲ್ಲೆಯ ಮದ್ದೂರು ಗಣಪತಿ ಗಲಾಟೆ ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಕಡೆಯಿಂದಲೇ ಆಗಿದ್ದು, ಗಲಭೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಹಿಂದೂಗಳ ಮೇಲೆ ಎಫ್‌ಐಆರ್ ಹಾಕಿಲ್ಲ ಯಾರನ್ನೂ ಬಂಧನ ಮಾಡಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಚಿಕ್ಕಮಗಳೂರು (ಸೆ.11): ಮಂಡ್ಯ ಜಿಲ್ಲೆಯ ಮದ್ದೂರು ಗಣಪತಿ ಗಲಾಟೆ ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಕಡೆಯಿಂದಲೇ ಆಗಿದ್ದು, ಗಲಭೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಹಿಂದೂಗಳ ಮೇಲೆ ಎಫ್‌ಐಆರ್ ಹಾಕಿಲ್ಲ ಯಾರನ್ನೂ ಬಂಧನ ಮಾಡಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಂಧಿತರಲ್ಲಿ ಇಬ್ಬರು ಚನ್ನಪಟ್ಟಣದವರು, ಉಳಿದವರೆಲ್ಲ ಮದ್ದೂರು ಪಟ್ಟಣದವರು. ಪ್ರಕರಣದಲ್ಲಿ ಸ್ವಲ್ಪ ಮಟ್ಟಿಗೆ ಕಾನೂನು ಸುವ್ಯವಸ್ಥೆಯಲ್ಲಿ ವೈಫಲ್ಯವಾಗಿರುವ ಅನುಮಾನವಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿಯುವವರೆಗೂ ಏನೂ ಹೇಳುವುದಿಲ್ಲ. ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಅವರಿಗೆ ಶಾಂತಿ ಬೇಕಿಲ್ಲ. ಅದಕ್ಕೆ ಶಾಂತಿ ಸಭೆಗೆ ಬಂದಿಲ್ಲ ಎಂದರು. ನನ್ನ ಮಾಹಿತಿ ಪ್ರಕಾರ ಮದ್ದೂರಲ್ಲಿ ಇನ್ನೂ ನಾಲ್ಕೈದು ಸಾಮೂಹಿಕ ಗಣಪತಿ ಇವೆ. ಆದರೆ, ನಂಬರ್ ಜಾಸ್ತಿ ಮಾಡಲು ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರಿನಿಂದ ಗಣೇಶ ಮೂರ್ತಿ ಖರೀದಿ ಮಾಡಿ ತಂದಿದ್ದಾರೆ ಎಂದು ಹೇಳಿದರು.
ಕೇಂದ್ರದಿಂದ 3.50 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಂದಿಲ್ಲ: ಕೇಂದ್ರ ಸರ್ಕಾರದಿಂದ ಇದುವರೆಗೆ 3.50 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬರಬೇಕಾಗಿತ್ತು. ಆದರೆ, ಈವರೆಗೆ ಬಂದಿಲ್ಲ. ಆದರೂ ಕೂಡ ರಾಜ್ಯದಲ್ಲಿ ರಸಗೊಬ್ಬರ ಕೊರತೆಯ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಕೆಪೆಕ್ ಆಶ್ರಯದಲ್ಲಿ ನಡೆದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಪಿಎಂಎಫ್‌ಎಂಇ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಜುಲೈ ಅಂತ್ಯದ ವರೆಗೆ 1.27 ಲಕ್ಷ ಮೆಟ್ರಿಕ್ ಟನ್, ಆಗಸ್ಟ್ ಅಂತ್ಯಕ್ಕೆ 90,000 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 3.50 ಲಕ್ಷ ಮೆಟ್ರಿಕ್ ಟನ್ ಕೇಂದ್ರ ಸರ್ಕಾರದಿಂದ ಬಂದಿಲ್ಲ. ರಸಗೊಬ್ಬರ ರಾಜ್ಯ ಸರ್ಕಾರ ಉತ್ಪಾದನೆ ಮಾಡುವುದಿಲ್ಲ, ಆಮದು ಮಾಡಿಕೊಳ್ಳುವುದಿಲ್ಲ, ಬೆಲೆ ನಿಗದಿ ಮಾಡುವುದಿಲ್ಲ, ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರದ್ದು, ನಾವು ಎಲ್ಲೆಲ್ಲಿ ಅವಶ್ಯಕತೆ ಇದೆ ಅಲ್ಲಿಗೆ ವಿತರಣೆ ಮಾಡುವುದು ನಮ್ಮ ಕೆಲಸ. ಹೋಲ್‌ಸೇಲ್, ರೀಟೈಲ್‌ನವರು ಕಂಪನಿಗಳಿಗೆ ಹಣ ಕೊಟ್ಟು ಖರೀದಿ ಮಾಡಿರುತ್ತಾರೆ ಎಂದರು.
ಗೊಬ್ಬರದ ಕೊರತೆ ಎಲ್ಲಾ ಕಡೆಯಲ್ಲೂ ಸಮಸ್ಯೆ ಇದೆ. ನಮ್ಮ ರಾಜ್ಯದಲ್ಲಿ ಅವಶ್ಯಕತೆ ಇರುವಷ್ಟು ರಸಗೊಬ್ಬರ ಸರಬರಾಜು ಮಾಡುತ್ತಿದ್ದೇವೆ. ನಿರೀಕ್ಷಿತ ಮಟ್ಟದಲ್ಲಿ ಸರಬರಾಜು ಆಗುತ್ತಿಲ್ಲ. ಆದರೂ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಯಾರೂ ಕೂಡ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.
