ಮಾಲಿವುಡ್​ನ ಖ್ಯಾತ ನಟ ಮತ್ತು ಟಿವಿ ನಿರೂಪಕ ರಾಜೇಶ್ ಕೇಶವ್ ನೇರ ಕಾರ್ಯಕ್ರಮವೊಂದರಲ್ಲಿ ಹೃದಯಾಘಾತಕ್ಕೆ ಒಳಗಾಗಿ ವೇದಿಕೆಯ ಮೇಲೆ ಹಠಾತ್ತನೆ ಬಿದ್ದಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 

ಮಾಲಿವುಡ್​ನ ಖ್ಯಾತ ನಟ ಮತ್ತು ಟಿವಿ ನಿರೂಪಕ ರಾಜೇಶ್ ಕೇಶವ್ ನೇರ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಹಠಾತ್ತನೆ ಬಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಆಗಸ್ಟ್ 24 ರ ಭಾನುವಾರ ರಾತ್ರಿ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೃದಯಾಘಾತದಿಂದ ಇವರು ಕುಸಿದು ಬಿದ್ದಿರುವುದಾಗಿ ವರದಿಯಾಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟ ವೇದಿಕೆಯಲ್ಲಿ ಮೂರ್ಛೆ ಹೋದರು. ಇದಾದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಥಿತಿ ಹದಗೆಟ್ಟ ನಂತರ ಅವರನ್ನು ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಯಿತು. ಅಭಿಮಾನಿಗಳು ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.

47 ವರ್ಷದ ರಾಜೇಶ್ ಕೇಶವ್ ಅವರು ಜಯಸೂರ್ಯ, ಅನೂಪ್ ಮೆನನ್, ಮತ್ತು ಮೇಘನಾ ರಾಜ್ ಅವರ ಬ್ಯೂಟಿಫುಲ್, ಜಯಸೂರ್ಯ, ಅನೂಪ್ ಮೆನನ್, ಹನಿ ರೋಸ್, ಟ್ರಿವಂಡ್ರಮ್ ಲಾಡ್ಜ್, ಹೋಟೆಲ್ ಕ್ಯಾಲಿಫೋರ್ನಿಯಾ, ನೀ-201 ಪುರತ್ಥ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಆರೋಗ್ಯದ ಮಾಹಿತಿ...

ರಾಜೇಶ್ ಕೇಶವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ವೈದ್ಯರು ತಕ್ಷಣ ಆಂಜಿಯೋಪ್ಲ್ಯಾಸ್ಟಿ ನಡೆಸಿದರು ಮತ್ತು ಈಗ ಅವರನ್ನು ಐಸಿಯುನಲ್ಲಿ ವೆಂಟಿಲೇಟರ್‌‌ನಲ್ಲಿ ಇರಿಸಲಾಗಿದೆ. ವೈದ್ಯರ ಪ್ರಕಾರ, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ.ಮುಂದಿನ 72 ಗಂಟೆಗಳ ನಂತರವೇ ಅವರ ಚೇತರಿಕೆಯ ಬಗ್ಗೆ ಸ್ಪಷ್ಟವಾಗಿ ಹೇಳಬಹುದು. ಮಾತೃಭೂಮಿ ವರದಿಯ ಪ್ರಕಾರ, ರಾಜೇಶ್ ಕೇಶವ್ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಪ್ರತಾಪ್ ಜಯಲಕ್ಷ್ಮಿ ಕೂಡ ರಾಜೇಶ್ ಕೇಶವ್ ಅವರ ಆರೋಗ್ಯದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ವೆಂಟಿಲೇಟರ್ ಸಹಾಯದಿಂದ ನಟನನ್ನು ಜೀವಂತವಾಗಿರಿಸಿದಾಗಿನಿಂದ, ಅವರು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ನಿರ್ಮಾಪಕ ಪ್ರತಾಪ್​ ಹೇಳಿದ್ದಾರೆ. ಅವರು ನಡುವೆ ಸ್ವಲ್ಪ ಚಲನೆ ಮಾಡುತ್ತಿದ್ದಾರೆ. ಇದರಿಂದಾಗಿ, ಈ ಸ್ಥಿತಿಯಿಂದಾಗಿ ಅವರ ಮೆದುಳಿಗೆ ಸ್ವಲ್ಪ ಹಾನಿಯಾಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ ಎಂದು ತಿಳಿಸಿದ್ದಾರೆ. "ಅವರು ಮತ್ತೆ ಬದುಕಲು ನಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳು ಹೆಚ್ಚು ಅಗತ್ಯವಿದೆ ಎಂದು ನಾವು ಈಗ ಅರಿತುಕೊಂಡಿದ್ದೇವೆ. ತಮ್ಮ ಅಭಿನಯದಿಂದ ವೇದಿಕೆಯನ್ನು ಬೆಳಗಿಸುತ್ತಿದ್ದವರು ಈಗ ಪ್ರಜ್ಞಾಹೀನರಾಗಿ, ಯಂತ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ಇದು ಹೃದಯ ವಿದ್ರಾವಕ. ಆದರೆ ನಾವೆಲ್ಲರೂ ಒಟ್ಟಾಗಿ ಅವರಿಗಾಗಿ ಪ್ರಾರ್ಥಿಸಿದರೆ, ಅವರು ಖಂಡಿತವಾಗಿಯೂ ಹಿಂತಿರುಗುತ್ತಾರೆ ಎಂದು ಬರೆದುಕೊಂಡಿದ್ದಾರೆ.