SL Bhyrappa passed away ಕನ್ನಡದ ಮೇರು ಸಾಹಿತಿ ಎಸ್‌ಎಲ್ ಭೈರಪ್ಪ (94) ಇಹಲೋಕ ತ್ಯಜಿಸಿದ್ದಾರೆ. ಈ ಲೇಖನವು ಅವರ ಸಾಹಿತ್ಯಿಕ ಸಾಧನೆಗಳ ಜೊತೆಗೆ, ಬಡತನ, ಪ್ಲೇಗ್, ಮತ್ತು ಕುಟುಂಬದ ದುರಂತಗಳಿಂದ ಕೂಡಿದ್ದ ಅವರ ಬಾಲ್ಯದ ನೋವಿನ ಕಥೆಯನ್ನು ಮತ್ತು ಅವರು ಎದುರಿಸಿದ ಕಠಿಣ ಸವಾಲುಗಳನ್ನು ವಿವರಿಸುತ್ತದೆ.
ಈ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಕಾದಂಬರಿಗಳ ಲೇಖಕ ಯಾರು ಅಂತಾ ಕೇಳಿದರೆ, ಸ್ವಲ್ಪವೂ ಯೋಚನೆ ಮಾಡದೇ ಬರೋ ಏಕೈಕ ಹೆಸರು ಎಸ್‌ಎಲ್ ಭೈರಪ್ಪ. ಕನ್ನಡದ ಮೇರು ಸಾಹಿತಿ ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಭಾರತ ಕಂಡ ಪ್ರಸಿದ್ಧ ಕಾದಂಬರಿಕಾರ, ತತ್ವಜ್ಞಾನಿ ಹಾಗೂ ಚಿತ್ರಕಥೆಗಾರ ಇನ್ನು ನೆನಪು ಮಾತ್ರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಎಸ್‌ಎಲ್ ಭೈರಪ್ಪ ಅವರ ಕಾದಂಬರಿಗಳು, ಹಿಂದಿ, ಮರಾಠಿ ಸೇರಿದಂತೆ ಭಾರತದ ಬಹುತೇಕ ಭಾಷೆಗಳಿಗೆ ಭಾಷಾಂತರ ಕಂಡಿವೆ. ಭೈರಪ್ಪ ಅವರ ಕೃತಿಗಳು ನವೋದಯ, ನವ್ಯ, ಬಂದಾಯ ಅಥವಾ ದಲಿತದಂತಹ ಸಮಕಾಲೀನ ಕನ್ನಡ ಸಾಹಿತ್ಯದ ಯಾವುದೇ ನಿರ್ದಿಷ್ಟ ಪ್ರಕಾರಕ್ಕೆ ಹೊಂದಿಕೆಯಾಗುವುದಿಲ್ಲ, ಏಕೆಂದರೆ ಅವರು ಬರೆಯುವ ವಿಷಯಗಳ ವ್ಯಾಪ್ತಿಯು ಇದಕ್ಕೆ ಕಾರಣ.
ಶಾಲಾ ದಾಖಲೆಗಳ ಪ್ರಕಾರ ಭೈರಪ್ಪ ಹುಟ್ಟಿದ್ದು 1931 ಆಗಸ್ಟ್ 20 ರಂದು. ಕಿತ್ತುತಿನ್ನುವ ಬಡತನ, ಪ್ಲೇಗ್‌ನ ಪರಿಸರದ ನಡುವೆಯೂ ಎಲ್ಲಾ ಸವಾಲುಗಳನ್ನು ದಾಟಿ ಯಶಸ್ವಿ ಲೇಖಕರಾಗಿ ಜನಮನ್ನಣೆ ಗಳಿಸಿದ್ದರು. ಶಾಲೆ ಓದುವ ಸಮಯದಲ್ಲಿ ಭೈರಪ್ಪ ಅವರ ತಾಯಿ, ಭೈರಪ್ಪ ಅವರನ್ನು ಸೋದರ ಮಾವನ ಮನೆಯಲ್ಲಿ ಬಿಟ್ಟಿದ್ದರು. ಸ್ಥಳೀಯ ದೇವಾಲಯದಲ್ಲಿ ಸೋದರ ಮಾವ ಅರ್ಚಕರಾಗಿದ್ದರು. ಸ್ವತಃ ಭೈರಪ್ಪ ಅವರೇ ಹೇಳಿಕೊಂಡಿದ್ದ ಹಾಗೆ ಸೋದರ ಮಾವನ ಮನೆಯಲ್ಲಿದ್ದ ದಿನಗಳು ಅತ್ಯಂತ ಕಠಿಣವಾಗಿದ್ದವು. ಸೋದರಮಾವನ ಕ್ಷುಲ್ಲಕತನ, ಆತನ ರಾಸಲೀಲೆ, ತಮ್ಮ ಅಸಹಾಯಕತೆ, ಪ್ಲೇಗ್ ಭೀಕರತೆಯ ಬಗ್ಗೆ ತಮ್ಮ ಆತ್ಮಕಥೆ ಭಿತ್ತಿಯಲ್ಲಿ ಬರೆದುಕೊಂಡಿದ್ದಾರೆ.
ಸೋದರಮಾವನ ಮನೆಯಲ್ಲಿನ ಕಷ್ಟ
ಭೈರಪ್ಪನವರಿಗೆ 11 ವರ್ಷ ಆಗಿದ್ದಾಗ ಅವರ ತಾಯಿ ತೀರಿ ಹೋಗಿದ್ದರು. ನಂತರ ಅವರು ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡಿದ್ದರು. 'ಆ ಕಾಲದಲ್ಲಿ ಆಗಾಗ ಪ್ಲೇಗ್ ಬರುತ್ತಿತ್ತು. ಅದೇ ಪ್ಲೇಗ್‌ನಲ್ಲಿ ನನ್ನ ತಾಯಿ ತೀರಿ ಹೋದರು. ಅಲ್ಲ ಯಾವುದೇ ಜವಾಬ್ದಾರಿ ಇಲ್ಲದ ವ್ಯಕ್ತಿ. ಈ ಹಂತದಲ್ಲಿ ತಾಯಿ ಕೂಡ ಜೀವ ಬಿಟ್ಟರು. ನನ್ನ ಗತಿ ಏನಾಗಬೇಕು? ನನಗೆ ತಾಯಿ ಸತ್ತ ದುಃಖ ಇತ್ತು. ಆದರೆ, ನನ್ನ ಸೋದರ ಮಾವನಿಗೆ ಕಿಂಚಿತ್ತೂ ಕನಿಕರವಿರಲಿಲ್ಲ. ನನಗೆ ಆತ ಸತ್ತಿದ್ರೆ ಒಳ್ಳೆಯದಾಗ್ತಿತ್ತು ಅನಿಸೋದು' ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದರು.
ತಮ್ಮ 13ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಭೈರಪ್ಪ ಅವರು ಹೆಂಡದ ಲಾರಿಗಳನ್ನು ತಡೆದು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾಷಣಗಳನ್ನು ಮಾಡಿ, ಕಾಲೇಜು ಕಲಿಯುತ್ತಿದ್ದರು. ಫೀಸ್ ಕಟ್ಟೋದಕ್ಕೆ ಹಣವಿಲ್ಲದೆ ಇದ್ದಾಗ ಟೆಂಟ್‌ನಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡಿ ವಿದ್ಯಾಭ್ಯಾಸ ಮುಂದುವರಿಸಿದ್ದರು.
ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಹೋಗಿದ್ದ ಎಸ್‌ಎಲ್ ಭೈರಪ್ಪ
ಇದೇ ಸಂದರ್ಭದಲ್ಲಿಯೇ ಅವರ ತಮ್ಮ ಪ್ಲೇಗ್‌ನಿಂದ ಸಾವು ಕಂಡಿದ್ದರು. ಆಗ ಅಂತ್ಯಸಂಸ್ಕಾರ ಮಾಡಲು ಯಾರೂ ಕೂಡ ನೆರವಾಗಿರಲಿಲ್ಲ. ಆಗ ಭೈರಪ್ಪ ಅವರೇ ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದರು.
'ಆಗ ತಾನೆ ಟೆಂಟ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದೆ. ಆಗ ಅಲ್ಲಿಗೆ ಬಂದ ವ್ಯಕ್ತಿ ಭೈರಪ್ಪ ಅಂದ್ರೆ ನೀನೇ ಏನೋ, ನಿನ್ನ ತಮ್ಮ ತೀರೀಹೋದ್ನಂತೆ ಎಂದರು. ಆತ ಸತ್ತು ಬಿದ್ದಿದ್ದಾನೆ. ನಮ್ಮ ಜಾತಿಯವರು ಕೂಡ ಯಾರೂ ಬರಲಿಲ್ಲ. 'ಸ್ಮಶಾನಕ್ಕೆ ಹೊತ್ತುಕೊಂಡು ಹೋಗಬೇಕು. ತಿಥಿ ಮಾಡಬೇಕು..' ನಮಗೆ ಯಾಕೆ ಬೇಕು ಇದು ಅಂತಾ ಹೇಳ್ತಿದ್ದರು. ನನ್ನ ಅಪ್ಪ ಸಾಲ ತೆಗೆದುಕೊಂಡ್ರೆ ಯಾರಿಗೂ ವಾಪಾಸ್ ಕೊಡ್ತಾ ಇರ್ಲಿಲ್ಲ. ಹಾಗಾಗಿ ಹೆಣ ಹೆತ್ತುಕೊಂಡು ಹೋಗಲು ಯಾರೂ ಬರಲಿಲ್ಲ. ಅವ 6 ವರ್ಷದ ಮಗು. ನನಗೆ 16 ವರ್ಷ. ಅವನ ಹೆಣವನ್ನು ಹೆಗಲ ಮೇಲೆ ಹಾಕ್ಕೊಂಡು ಸ್ಮಶಾನಕ್ಕೆ ಹೋಗಿದ್ದೆ. ಅದರೊಂದಿಗೆ ಮಡಿಕೆಯನ್ನು ಕೈಯಲ್ಲಿ ಹಿಡಿದಿದ್ದೆ. ಸ್ಮಶಾನದಲ್ಲಿ ನಾನೇ ಅವನ ಮೃತದೇಹಕ್ಕೆ ಬೆಂಕಿ ಇಟ್ಟೆ. ಸಾಮಾನ್ಯವಾಗಿ ಶವ ಸಂಸ್ಕಾರ ಮಾಡೋವಾಗ ಬುಡುಡೆ ಒಡಿಯೋತನಕ ಇರಬೇಕು. ಅಲ್ಲಿಯವರೆಗೂ ಜೀವ ಇರುತ್ತೆ ಅಂತಾರೆ. ನನ್ನ ಜೊತೆಗಿದ್ದ ವ್ಯಕ್ತಿ ಅದನ್ನ ಹೇಳಿಕೊಟ್ಟ.ನಾನು ಅದನ್ನು ಮಾಡಿ ಅಲ್ಲಿಂದ ಬಂದಿದ್ದೆ. ಆದರೆ, ಮನಗೆ ಬಂದರೆ ತಿನ್ನೋಕೆ ಏನೂ ಇಲ್ಲ' ಎಂದು ಎಸ್‌ಎಲ್ ಭೈರಪ್ಪ ಅವರು ಹೇಳಿದ್ದರು.
