ಜಿಲ್ಲೆಯ ಸಿಂಧನೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ತುಂಗಭದ್ರೆಗೆ ಅಂಬಾ ಆರತಿ ಮುಖಾಂತರ ಕಾರ್ಯಕ್ರಮಗಳು ಶುರುವಾಗಿದ್ದು, ಸಿಂಧನೂರು ದಸರಾ ಬಂಗಾಳಿ ಕ್ಯಾಂಪ್ ನಲ್ಲಿ ನಡೆಯಿತು. ಉತ್ಸವವು ಕನ್ನಡ ಭಾಷೆ-ಬಂಗಾಲಿ ಭಾಷೆಗೆ ಸೇತುವೆಯಾದ ಸಂದೇಶ ಸಾರಿತು.
ರಾಯಚೂರು (ಸೆ.25): ಜಿಲ್ಲೆಯ ಸಿಂಧನೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ತುಂಗಭದ್ರೆಗೆ ಅಂಬಾ ಆರತಿ ಮುಖಾಂತರ ಕಾರ್ಯಕ್ರಮಗಳು ಶುರುವಾಗಿದ್ದು, ಸಿಂಧನೂರು ದಸರಾ ಬಂಗಾಳಿ ಕ್ಯಾಂಪ್ ನಲ್ಲಿ ನಡೆಯಿತು. 1971ರಲ್ಲಿ ರಾಯಚೂರು ಜಿಲ್ಲೆಗೆ ವಲಸೆ ಬಂದು ಸಿಂಧನೂರ ತಾಲೂಕಿನ ಜವಳಗೇರಾ ಹತ್ತಿರದಲ್ಲಿ ವಾಸ ಮಾಡುತ್ತಿರುವ ಬಂಗಾಳಿ ಸಮುದಾಯದ ಜನರ ಕ್ಯಾಂಪನಲ್ಲಿ ಸಂಜೆ ಅದ್ದೂರಿಯಾಗಿ ನಡೆದ ಗ್ರಾಮೀಣ ದಸರಾ ಉತ್ಸವವು ಕನ್ನಡ ಭಾಷೆ-ಬಂಗಾಲಿ ಭಾಷೆಗೆ ಸೇತುವೆಯಾದ ಸಂದೇಶ ಸಾರಿತು.
ಆರ್. ಎಚ್. ಕ್ಯಾಂಪ್ 1ರಲ್ಲಿ ಇಳಿ ಹೊತ್ತಿಗೆ ಆರಂಭಗೊಂಡ ಗ್ರಾಮೀಣ ದಸರಾ ಕಾರ್ಯಕ್ರಮಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿದ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ, ನಿರಾಶ್ರಿತ ಜನರ ಧಾರ್ಮಿಕ ಶ್ರದ್ಧೆ, ಶಿಸ್ತನ್ನು ನಾನು ಇದೆ ಮೊದಲಬಾರಿಗೆ ನೋಡಿ ಸಂತಷಗೊಂಡಿದ್ದೇನೆ. ದುರ್ಗಾಮಾತೆಗೆ ಬೆಂಗಾಲಿ ಜನರಿಂದ ನಡೆದ ಪೂಜಾ ಕಾರ್ಯಕ್ರಮ, ಮೆರವಣಿಗೆ ನಮಗೆ ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಂತಸವಾಯಿತು ಎಂದು ತಿಳಿಸಿದರು. ಈ ದಸರಾ ಉತ್ಸವದ ರೂವಾರಿಯಾದ ಸಿಂಧನೂರ ಶಾಸಕರಿಗೆ ತಾವು ಅಭಿನಂದನೆ ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಅಂಕಿ-ಸಂಖ್ಯೆಗಳನ್ನು ಗಮನಿಸಿದಾಗ ಸಿಂಧನೂರ ತಾಲೂಕು ಸಹ ಉತ್ತಮವಾಗಿ ಪ್ರಗತಿ ಹೊಂದುತ್ತಿರುವ ತಾಲೂಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ ಅವರು ಮಾತನಾಡಿ, ಬೇರೆ ಪ್ರದೇಶದ, ಬೇರೆ ಭಾಷಿಕ ಜನರು ನಮ್ಮ ರಾಯಚೂರ ಜಿಲ್ಲೆಗೆ ಆಶ್ರಯಕ್ಕೆ ಬಂದು ಕ್ಯಾಂಪನಲ್ಲಿ ಶಿಸ್ತಿನಿಂದ ಇದ್ದು, ನಮ್ಮೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿರುವುದು ವಿಶೇಷವಾಗಿದೆ. ಹಲವಾರು ಸಂಸ್ಕೃತಿಯ, ಭಾಷೆಯ ಜನರು ಈ ರೀತಿ ಒಗ್ಗೂಡಿ ಬಾಳುತ್ತಿರುವುದೇ ನಮ್ಮ ದೇಶದ ವಿಶೇಷತೆಯಾಗಿದೆ ಎಂದು ತಿಳಿಸಿದರು. ಇಂತಹ ಸೌಹಾರ್ದ ಸಂದೇಶವನ್ನು ನಮ್ಮ ಸಿಂಧನೂರ ದಸರಾ ಉತ್ಸವ ಒಳಗೊಂಡಿರುವುದು ಶ್ಲಾಘನೀಯ ಸಂಗತಿ ಎಂದರು.
ಪ್ರೀತಿ, ವಿಶ್ವಾಸಕ್ಕೆ ಹೆಸರಾದ ಹಬ್ಬ
ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಮಾತನಾಡಿ, 16ನೇ ಶತಮಾನದಲ್ಲಿಯೇ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಕಾಲದಲ್ಲಿ ದಸರಾ ಹಬ್ಬ ಆರಂಭವಾಯಿತು. ಆ ಬಳಿಕ ಮೈಸೂರ ಅರಸರು 400 ವರ್ಷಗಳಿಂದ ದಸರಾ ಹಬ್ಬ ಮುಂದುವರೆಸಿದರು. ನಮ್ಮ ಭಾಗದಲ್ಲಿ ಈಗಲೂ ಬನ್ನಿ ಮುಡಿದು ದಸರಾ ಹಬ್ಬ ಆಚರಿಸಲಾಗುತ್ತಿದೆ. ಪ್ರೀತಿ ವಿಶ್ವಾಸಕ್ಕೆ ಹೆಸರಾದ ಹಬ್ಬವಿದು ಎಂದರು. ಬಾಂಗ್ಲಾದೇಶದಲ್ಲಿ ಸಹ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಬೆಂಗಾಲಿ ನಿರಾಶ್ರಿತರ ಕ್ಯಾಂಪನಲ್ಲಿ 40 ವರ್ಷಗಳಿಂದ ನವರಾತ್ರಿಯ ಕಾರ್ಯಕ್ರಮಗಳನ್ನು ತಾವು ನೋಡುತ್ತ ಬಂದಿರುವುದಾಗಿ ಶಾಸಕರು ತಿಳಿಸಿದರು. ಬೆಂಗಾಲಿ ಸಮುದಾಯದ ಜನರನ್ನು ನೋಡಿ ಕಲಿಯಬೇಕು ಎನ್ನುವ ಹಾಗೆ ಈ ಕ್ಯಾಂಪನ ಜನತೆ ನವರಾತ್ರಿ ಹಬ್ಬ ಆಚರಿಸುತ್ತಾರೆ ಎಂದು ಕ್ಯಾಂಪನ ಜನರ ಧಾರ್ಮಿಕ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ದಸರಾ, ಎಲ್ಲರನ್ನೂ ಒಳಗೊಳ್ಳುವ ಹಬ್ಬವಾಗಿದ್ದು, ನಿರಾಶ್ರಿತರ ಕ್ಯಾಂಪನಲ್ಲಿ ದಸರಾ ಆಯೋಜನೆ ಮಾಡಿರುವುದು ತಮಗೆ ಸಂತಷ ತಂದಿದೆ ಎಂದು ಶಾಸಕರು ತಿಳಿಸಿದರು. ಸಮಾರಂಭದಲ್ಲಿ ತಾಲೂಕು ಪಂಚಾಯತ್ ಇಓ ಚಂದ್ರಶೇಖರ, ವಿಶೇಷ ಭೂಸ್ವಾಧೀನಾಧಿಕಾರಿ ಶ್ರುತಿ, ಪೊಲೀಸ್ ಉಪಾಧೀಕ್ಷಕರಾದ ಕೆ ಎಚ್ ತಳವಾರ, ದಸರಾ ಉತ್ಸವದ ಪ್ರಧಾನ ಕಾರ್ಯದರ್ಶಿ ಎಸ್ ದೇವೇಂದ್ರಗೌಡ, ವಿವಿಧ ಗ್ರಾಮ ಪಂಚಾಯತಗಳ ಅಧ್ಯಕ್ಷರಾದ ಆರ್.ಎಚ್. 1ರ ರೆಹಮತ್ ಪಾಶಾ, ಮಾಡಸಿರವಾರದ ನಾಗಪ್ಪ, ಒಳಬಳ್ಳಾರಿಯ ಮೂಖಾಂಬಿಕಾ, ಬಾದರ್ಲಿಯ ದಿಲೀಪ್, ಅಲಬನೂರದ ಕೃಷ್ಣಮ್ಮ, ಜವಳಗೇರಾದ ನಾಗಲಿಂಗಪ್ಪ ಹಾಗೂ ಮುಖಂಡರಾದ ಪಂಪನಗೌಡ ಬಾದರ್ಲಿ, ಶ್ರೀದೇವಿ ಶ್ರೀನಿವಾಸ ಹಾಗೂ ಆರು ಗ್ರಾಮ ಪಂಚಾಯತಗಳ ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ತಹಸೀಲ್ದಾರ ಅರುಣಕುಮಾರ ಹೆಚ್ ದೇಸಾಯಿ ಸ್ವಾಗತಿಸಿದರು. ಪದ್ಮಾ ಹಾಗೂ ತಂಡದವರು ಪ್ರಾರ್ಥಿಸಿದರು. ಧನ್ಯಾ ನಿರೂಪಿಸಿದರು.
