ನಡುರಸ್ತೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿ ಬೂಟ್ ಕಾಲಿನಲ್ಲಿ ಒದ್ದು ವಿಕೃತಿ ಮೆರೆದ ಅಮಾನುಷ ಘಟನೆ ನಗರದ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಈ ವೇಳೆ ಮಹಿಳೆಯು ನೋವಿನಿಂದ ಅಂಗಲಾಚಿದ್ರು, ಪಾಪಿ ಮಾಲೀಕ ಬಿಡದೇ ಥಳಿಸಿದ್ದಾನೆ.

ಬೆಂಗಳೂರು (ಸೆ.25): ನಡುರಸ್ತೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿ ಬೂಟ್ ಕಾಲಿನಲ್ಲಿ ಒದ್ದು ವಿಕೃತಿ ಮೆರೆದ ಅಮಾನುಷ ಘಟನೆ ನಗರದ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಬಟ್ಟೆ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿಯು ಮಹಿಳೆಯು ಅಂಗಡಿಯಲ್ಲಿ ಸೀರೆ ಕದ್ದಿದ್ರು ಅನ್ನೋ ಆರೋಪದಲ್ಲಿ ಥಳಿಸಿದ್ದಾರೆ. ರಸ್ತೆಯಲ್ಲೇ ಮಹಿಳೆಯನ್ನ ಎಳೆದಾಡಿದಲ್ಲದೇ ಖಾಸಗಿ ಅಂಗಾಂಗಕ್ಕೆ ಬೂಟ್ ಕಾಲಿನಿಂದ ಮಾಲೀಕ ಒದ್ದಿದ್ದಾನೆ.

ಈ ವೇಳೆ ಮಹಿಳೆಯು ನೋವಿನಿಂದ ಅಂಗಲಾಚಿದ್ರು, ಪಾಪಿ ಮಾಲೀಕ ಬಿಡದೇ ಥಳಿಸಿದ್ದಾನೆ. ಸದ್ಯ ಮಹಿಳೆಗೆ ಥಳಿಸಿದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಮಹಿಳೆ ರಕ್ಷಣೆಗೆ ನಿಲ್ಲಬೇಕಾಗಿದ್ದ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಪೂರ್ವಪರ ಪರಿಶೀಲಿಸದೆ ಮಹಿಳೆಯ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಹಿಳೆ ದೂರು ಕೊಡಲು ಮುಂದಾದ್ರೂ ಪೊಲೀಸರು ಕೇರ್ ಮಾಡದೇ ಕಳ್ಳತನ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ.

ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪಾಪಿಗಳ ಮೇಲೆ ಕೆ.ಆರ್.ಮಾರ್ಕೇಟ್ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದೇ, ಪ್ರಕರಣದ ತನಿಖೆಯನ್ನು ಸಹ ಸರಿಯಾಗಿ ಮಾಡಲಿಲ್ಲ. ಸದ್ಯ ಮಹಿಳೆಯ ಪರವಾಗಿ ಕನ್ನಡಪರ ಹೋರಾಟಗಾರರು ನಿಂತಿದ್ದು, ಬಟ್ಟೆ ಅಂಗಡಿ ಮಾಲೀಕ ಬಾಬುಲಾಲ್ ವಿರುದ್ಧ ಕ್ರಮಕ್ಕೆ ಪಟ್ಟುಹಿಡಿದು, ಮಹಿಳೆಯ ಮಾನಕ್ಕೆ ಧಕ್ಕೆ ತಂದವನ ಬಂಧನಕ್ಕೆ ಆಗ್ರಹಿಸಿದ್ದಾರೆ.

ಪೊಲೀಸರ ಮೇಲೆ ಕಿಡಿ

ಮಹಿಳೆ ಕಳ್ಳತನ ಮಾಡಿದ್ರೆ ಕಾನೂನಾತ್ಮಕ ಕ್ರಮವಾಗಲಿ, ಅದನ್ನು ಬಿಟ್ಟು ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸೋದು ಎಷ್ಟು ಸರಿ..? ಎಂದು ಘಟನೆಯನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದಲ್ಲದೇ ಮಾಲೀಕರ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ ಮೇಲೆ ಕಿಡಿಕಾರಿದ್ದಾರೆ. ಇನ್ನು ತರಾತುರಿಯಲ್ಲಿ ಮಹಿಳೆಯನ್ನ ಜೈಲಿಗಟ್ಟಿರೋ ಪೊಲೀಸರು, ಈಗ ತರಾತುರಿಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಲು ತಯಾರಿ ನಡೆಸಿದ್ದಾರೆ.