ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರದಲ್ಲಿ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಟೀಕಿಸಿದ ಅವರು, ಹಿಂದೂ ದೇವಾಲಯಗಳನ್ನು ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕೋಲಾರ (ಆ.28): ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನದ ಬಳಿ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಇದೆ ಸಿದ್ಧಾಂತ ಮುಸ್ಲಿಂ ಕಡೆಯವರಿಂದ ಮಾಡ್ತೀರಾ ? ಮುಸ್ಲಿಮರ ಕಾರ್ಯಕ್ರಮವನ್ನು ಹಿಂದೂಗಳಿಂದ ಉದ್ಘಾಟನೆ ಮಾಡಿಸಿದ್ರೆ ಇವರನ್ನ ಸರಿ ಸಮಾನರು ಅಂತಾ ಒಪ್ಪಬಹುದು. ಈ ಕಾಂಗ್ರೆಸ್‌ನವರು ವೋಟು ಬ್ಯಾಂಕ್ ಗಾಗಿ ಹಿಂದಿನಿಂದ ಮಾಡಿಕೊಂಡು ಬಂದಿರುವುದು ಇಂಥದ್ದೇ ನಾಟಕ. ಮುಸ್ಲಿಂರ ಧಾರ್ಮಿಕ ಕಾರ್ಯಕ್ರಮಗಳನ್ನು ಹಿಂದೂಗಳಿಂದ ಉದ್ಘಾಟಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಶಬರಿ, ಧರ್ಮಸ್ಥಳ, ತಿರುಪತಿ ಆಯ್ತು, ಈಗ ಚಾಮುಂಡಿ ಬೆಟ್ಟ:
ಕರ್ನಾಟಕವನ್ನು ಕಾಂಗ್ರೆಸ್‌ನವರು ಮಾರಾಟಕ್ಕಿಟ್ಟಿದ್ದಾರೆ. ಇದನ್ನು ಉಳಿಸುವ ಕೆಲಸ ಹಿಂದೂಗಳು ಮಾಡಬೇಕಿದೆ ಎಂದು ಸಮೃದ್ಧಿ ಮಂಜುನಾಥ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಬಗ್ಗೆ ಈಗಾಗಲೇ ಮಾತನಾಡಲು ಶುರುವಾಗಿದೆ. ಶಬರಿಮಲೆ, ಧರ್ಮಸ್ಥಳ, ತಿರುಪತಿ ಆಯಿತು, ಈಗ ಚಾಮುಂಡಿ ಬೆಟ್ಟದ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದೆ ಯಾವ ದೇವಸ್ಥಾನದ ಬಗ್ಗೆ ಮಾತನಾಡುತ್ತಾರೆ, ಕಾದು ನೋಡೋಣ ಎಂದು ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ತೀವ್ರವಾಗಿ ಖಂಡಿಸಿದರು. ಇದೇ ವೇಳೆ ಮುಜುರಾಯಿ ಇಲಾಖೆಯಿಂದ ನನಗೆ ಶೂನ್ಯ ಅನುದಾನ ಸಿಕ್ಕಿದೆ ಎಂದು ಆರೋಪಿಸಿದರು.
ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಬಿಜೆಪಿ ಮತ್ತು ಕೆಲವು ಹಿಂದೂ ಸಂಘಟನೆಗಳು ಈಗಾಗಲೇ ವಿರೋಧಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ನಾಯಕರು, ಬಾನು ಮುಷ್ತಾಕ್ ಅವರ ಸಾಹಿತ್ಯಿಕ ಸಾಧನೆ ಮತ್ತು ಜಾತ್ಯತೀತ ಮನೋಭಾವವನ್ನು ಮೆಚ್ಚಿ ಈ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವಿವಾದವು ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಈಗ ಎಲ್ಲರ ಗಮನ ಸೆಳೆದಿದೆ.
