ಯಾದಗಿರಿಯ ಗುರುಮಠಕಲ್‌ನಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಹಸೀಲ್ದಾರ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ ಎಂದು ಆರೆಸ್ಸೆಸ್ ಮುಖಂಡರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮತ್ತೆ ಅರ್ಜಿ ಸಲ್ಲಿಸಿ ಮುಂದಿನ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
ಯಾದಗಿರಿ (ಅ.25): ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಕೋರಿ ಮನವಿ ಮಾಡಿದ್ವಿ. ಆದರೆ ಗುರುಮಠಕಲ್ ತಹಸೀಲ್ದಾರ್ ಶಾಂತಗೌಡ ಬಿರಾದಾರ್ ಉದ್ದೇಶಪೂರ್ವಕವಾಗಿ ನಮ್ಮನ್ನು ಕಾಯಿಸಿದರು. ಈಗ ತಹಸೀಲ್ದದಾರ ವಿಳಂಬದಿಂದ ಪಥಸಂಚಲನ ಅರ್ಜಿ ತಿರಸ್ಕೃತವಾಗಿದೆ ಎಂದು ಆರೆಸ್ಸೆಸ್ ಮುಖಂಡ ಬಸಪ್ಪ ಸಂಜನೋಳ್ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ನಡೆಗೆ ಆರೆಸ್ಸೆಸ್ ಮುಖಂಡ ಸಂಜನೋಳ್ ಕಿಡಿ
ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ವಿಚಾರವಾಗಿ ಇಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ ಮುಖಂಡ ಸಂಜನೋಳ್ ಅವರು, ನಾವು 20 ನೇ ತಾರೀಕಿನಂದೇ ಪಥಸಂಚಲನಕ್ಕೆ ತಹಸೀಲ್ದಾರ್ ಅವರಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೆವು. ಅರ್ಜಿ ಸ್ವೀಕರಿಸಿ ಮಾಹಿತಿ ನೀಡ್ತಿನಿ ಅಂತ ಹೇಳಿದ್ರು. ಆದರೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ 23 ನೇ ತಾರೀಖು ತಹಸೀಲ್ದಾರ್ ಆಫೀಸ್ ಗೆ ಹೋದ್ವಿ. ಅಲ್ಲಿ ನಮ್ಮನ್ನು ಬಹಳ ಸಮಯ ಕಾಯಿಸಿದ್ರು ಬಳಿಕ ಪಥಸಂಚಲನಕ್ಕೆ ಅನುಮತಿ ಕೊಡಲು ಅಧಿಕಾರ ನಮಗಿಲ್ಲ, ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗಿ ಅನುಮತಿ ಕೇಳಿ ಅಂದ್ರು.
ಡಿಸಿಯವರಿಗೆ ಅರ್ಜಿ ಯಾಕೆ ಶಿಫಾರಸು ಮಾಡಲಿಲ್ಲ?
ಅರ್ಜಿ ಸಲ್ಲಿಸಿದಾಗಲೇ ನಮಗೆ ನೀವು ಇದನ್ನೇ ಹೇಳಿದ್ರೆ ನಾವು ಡಿಸಿ ಬಳಿಗೆ ಹೋಗ್ತಿದ್ವಿ. ಇವತ್ತು ಸುಗಮವಾಗಿ ಪಥಸಂಚಲ ಸಾಗುತ್ತಿತ್ತು. ಆದ್ರೆ ತಹಸೀಲ್ದಾರ್ ವ್ಯಾಪ್ತಿಗೆ ಬರೋದಿಲ್ಲ ಅಂದ್ರೆ ಅರ್ಜಿ ಯಾಕೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಿಲ್ಲ? ಅರ್ಜಿ ಸಲ್ಲಿಸುವಾಗಲೇ ನಮಗೆ ಹೇಳಬೇಕಾಗಿತ್ತು. ತಹಸೀಲ್ದಾರ್ ಅವರ ತಪ್ಪಿನಿಂದ ಪಥ ಸಂಚಲನಕ್ಕೆ ಅನುಮತಿ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು, ಮುಂದುವರಿದು, ನಾವು ಸೋಮವಾರ ಮತ್ತೆ ಡಿಸಿ ಅವರ ಅನುಮತಿಗಾಗಿ ಅರ್ಜಿ ಸಲ್ಲಿಸುತ್ತೇವೆ. ಸಂಘದ ಹಿರಿಯರ ಜೊತೆ ಚರ್ಚಿಸಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು ಎಂದರು.
