RSS pathasanchalan route march :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಹಾವೇರಿ, ಕೋಲಾರ, ಬಾಗಲಕೋಟೆ ಮತ್ತು ನೆಲಮಂಗಲದಲ್ಲಿ ಅದ್ಧೂರಿ ಪಥಸಂಚಲನ ನಡೆಯಿತು. ಗಣವೇಷಧಾರಿ ಸ್ವಯಂ ಸೇವಕರು ಶಿಸ್ತುಬದ್ಧವಾಗಿ ಸಾಗಿದ್ದು, ಸಾರ್ವಜನಿಕರು ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಿದರು.
ಬೆಂಗಳೂರು (ಅ.27): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಂಘದ ಶತಮಾನೋತ್ಸವ ಪ್ರಯುಕ್ತ ಹಾವೇರಿ, ಕೋಲಾರ, ಬಾಗಲಕೋಟೆ ಮತ್ತು ನೆಲಮಂಗಲದಲ್ಲಿ ಭಾನುವಾರ ಅದ್ಧೂರಿಯಾಗಿ ಪಥಸಂಚಲನ ಜರುಗಿತು. ದಾರಿಯುದ್ದಕ್ಕೂ ಜನರು ರಸ್ತೆಗೆ ನೀರು ಸಿಂಪಡಿಸಿ ವಿವಿಧ ಬಗೆಯ ರಂಗೋಲಿ ಹಾಕಿ ಗಣವೇಷಧಾರಿಗಳ ಮೇಲೆ ಪುಷ್ಟವೃಷ್ಟಿ ಸುರಿಸುವ ಮೂಲಕ ಪಥಸಂಚಲನಕ್ಕೆ ಸ್ವಾಗತ ಕೋರಿದರು.
ಪಥಸಂಚಲನಲ್ಲಿ ಪಾಲ್ಗೊಂಡಿದ್ದ ಗಣವೇಷಧಾರಿ ಮಕ್ಕಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಕಂದು ಬಣ್ಣದ ಪ್ಯಾಂಟ್, ಬಿಳಿ ಅಂಗಿ, ಕರಿಬಣ್ಣದ ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು ಅತ್ಯಂತ ಶಿಸ್ತುಬದ್ಧ ಸಾಗುತ್ತಿದ್ದ ಸ್ವಯಂ ಸೇವಕರು ಎಲ್ಲರ ಗಮನ ಸೆಳೆದರು.
ಆರೆಸ್ಸೆಸ್ ದೇಶಕ್ಕಾಗಿ ಮಿಡಿಯುವ ಸಂಘ:
ರಾಣಿಬೆನ್ನೂರಲ್ಲಿ ಏರ್ಪಡಿಸಲಾಗಿದ್ದ ಪಥಸಂಚಲನದಲ್ಲಿ ಭಾಗಿಯಾಗಿ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ದಕ್ಷಿಣ ಪ್ರಾಂತದ ವಕ್ತಾರ ಬೆಂಗಳೂರಿನ ಶ್ರೀಧರಸ್ವಾಮಿ ಅವರು, ಆರೆಸ್ಸೆಸ್ ರಾಷ್ಟ್ರಭಕ್ತಿಯ ಮೂಲಕ ದೇಶಕ್ಕಾಗಿ ಮಿಡಿಯುವ ಬೃಹತ್ ಸಂಘಟನೆಯಾಗಿ ಹಲವಾರು ಏಳು ಬೀಳುಗಳ ಮೂಲಕ ಶತಮಾನೋತ್ಸವವನ್ನು ಕಂಡು ಮುನ್ನಡೆಯುತ್ತಿದೆ. ಹೆಡಗೇವಾರರು ದೇಶದ ಹಿತದೃಷ್ಟಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸಂಘ ಕಟ್ಟಿದರು. ಅದರ ಪರಿಣಾಮವಾಗಿ ಆರ್‌ಎಸ್‌ಎಸ್ ಈಗ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದರು.
ಕೋಲಾರದಲ್ಲಿ ಕೇಸರಿಮಯ:
ಕೋಲಾರ ಜಿಲ್ಲೆಯ ಮಾಲೂರು ನಗರದಲ್ಲಿ ಕೇಸರಿ ಬ್ಯಾನರ್ ಬಂಟಿಂಗ್ಸ್ ಅಬ್ಬರ ಜೋರಾಗಿತ್ತು. ಮಾಲೂರು ಹೋಂಡಾ ಕ್ರೀಡಾಂಗಣದಿಂದ ಮಧ್ಯಾಹ್ನ 2.30ಕ್ಕೆ ಪಥಸಂಚಲನ ಆರಂಭವಾಯಿತು. ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.
ಭಾಗಲಕೋಟೆಯಲ್ಲಿ ನೂರಾರು ಗಣವೇಷಧಾರಿಗಳು ಭಾಗಿ
ಬಾಗಲಕೋಟೆ ಜಿಲ್ಲೆಯ ಸೂಳೇಭಾವಿ ಗ್ರಾಮದಲ್ಲಿ ಕೇಸರಿ ತೋರಣಗಳಿಂದ ಸಿಂಗರಿಸಲಾಗಿತ್ತು. ಇಲ್ಲಿನ ಶಾಖಾಂಬರಿ ಭವನದಿಂದ ಆರಂಭವಾದ ಪಥಸಂಚಲನ ಮಾರ್ಕೆಟ್, ಸರ್ಕಾರಿ ಆಸ್ಪತ್ರೆ ರಸ್ತೆ ಸೇರಿದಂತೆ ವಿವಿಧೆಡೆ ಸಾಗಿತು. ನೂರಾರು ಗಣವೇಷಧಾರಿಗಳು ಭಾಗವಹಿಸಿದ್ದರು. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನೂರಾರು ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು.
