ನಟ ದರ್ಶನ್ ಜೈಲು ವರ್ಗಾವಣೆ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ, ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದರ್ಶನ್‌ಗೆ ಬಳ್ಳಾರಿ ಜೈಲಿಗೆ ವರ್ಗಾವಣೆ ಬೇಡವೆಂಬ ಆಸೆ ಈಡೇರಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಹಾಗೂ ಇತರ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ಕುರಿತು 64ನೇ ಸೆಷನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶ ಐ.ಪಿ. ನಾಯ್ಕ್ ಆದೇಶ ಹೊರಡಿಸಿದ್ದು, ದರ್ಶನ್ ಮತ್ತು ಇತರ ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ಬೇರೆ ಜೈಲು ಸ್ಥಳಾಂತರ ಕುರಿತ ಅರ್ಜಿ ವಜಾ ಮಾಡಲಾಗಿದೆ. ಹೀಗಾಗಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಸರ್ಕಾರ ಅರ್ಜಿ ಸಲ್ಲಿಸಿತ್ತು. ಸೆಲೆಬ್ರಿಟಿ ಆಗಿರುವುದರಿಂದ ಮತ್ತು ಈ ಹಿಂದೆ ಐಷಾರಾಮಿ ಸೌಲಭ್ಯ ಪಡೆದಿರುವುದರಿಂದ ಸ್ಥಳಾಂತರ ಮಾಡಲು ಅವಕಾಶ ನೀಡಬೇಕೆಂದು ಸರ್ಕಾರ ಮನವಿ ಮಾಡಿತ್ತು. ಆದರೆ ದರ್ಶನ್ ಗೆ ಬಳ್ಳಾರಿ ಜೈಲಿನ ಜೀವನ ಬೇಡ ಬೆಂಗಳೂರಿನಲ್ಲೇ ಇರಬೇಕೆಂದು ಆಸೆ ಇತ್ತು. ಕೊನೆಗೂ ಡಿ ಗ್ಯಾಂಗ್ ಗೆ ಸಂತಸದ ಸುದ್ದಿ ಸಿಕ್ಕಿದೆ. ಆದರೆ, ಕನಿಷ್ಠ ಸೌಲಭ್ಯ ಒದಗಿಸಬೇಕೆಂಬ ದರ್ಶನ್‌ನ ಬೇಡಿಕೆಯನ್ನು ಕೋರ್ಟ್ ಮಾನ್ಯ ಮಾಡಿದೆ. ಜೈಲಿನ ನಿಯಮಗಳ ಪ್ರಕಾರ ಕನಿಷ್ಠ ಸೌಲಭ್ಯಗಳು ಏನೇನಿದೆ ಅವೆಲ್ಲವನ್ನು ನೀಡಬೇಕೆಂದು ಕೋರ್ಟ್ ಹೇಳಿದೆ.

ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳು

  • ದರ್ಶನ್, ಲಕ್ಷ್ಮಣ್, ನಾಗರಾಜ್, ಜಗದೀಶ್ ಹಾಗೂ ಪ್ರದೂಷ್ ಸೇರಿ ಐವರು ಆರೋಪಿಗಳನ್ನು ಬೇರೆ ಜಿಲ್ಲಾ ಜೈಲುಗಳಿಗೆ ಸ್ಥಳಾಂತರಿಸುವಂತೆ ಸಲ್ಲಿಸಿದ್ದ ಅರ್ಜಿ.
  • ದರ್ಶನ್ ಪರವಾಗಿ ಸಲ್ಲಿಸಲಾದ, ಹಾಸಿಗೆ, ದಿಂಬು ಹಾಗೂ ಇತರ ಕನಿಷ್ಠ ಸೌಲಭ್ಯ ಒದಗಿಸಬೇಕೆಂಬ ಅರ್ಜಿ.
  • ಕೋರ್ಟ್ ತನ್ನ ತೀರ್ಪಿನಲ್ಲಿ, ಮೊದಲ ಅರ್ಜಿಯನ್ನು ವಜಾ ಮಾಡಿದರೆ, ದ್ವಿತೀಯ ಅರ್ಜಿಯನ್ನು ಅಂಗೀಕರಿಸಿ, ಜೈಲು ಮ್ಯಾನುವಲ್ ಪ್ರಕಾರ ಕನಿಷ್ಠ ಸೌಲಭ್ಯ ಒದಗಿಸಲು ಜೈಲು ಆಡಳಿತಕ್ಕೆ ನಿರ್ದೇಶನ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ನ ಪರಿಸ್ಥಿತಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ದರ್ಶನ್‌ರನ್ನು ಮೊದಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಆದರೆ, ಅಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪಗಳು ಬೆಳಕಿಗೆ ಬಂದಿದ್ದವು. ಜೈಲಿನಲ್ಲಿದ್ದಾಗ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿದ್ದರೆಂಬ ಮಾಹಿತಿ ಹೊರಬಂದ ಪರಿಣಾಮ, ಅವರನ್ನು ಬಳ್ಳಾರಿ ಜೈಲುಗೆ ವರ್ಗಾಯಿಸಲಾಯಿತು.

ಇದೀಗ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ, ಜೈಲು ಅಧಿಕಾರಿಗಳು ದರ್ಶನ್‌ಗೆ ಯಾವುದೇ ವಿಶೇಷ ಸೌಲಭ್ಯ ನೀಡದಂತೆ ಸೂಚನೆ ನೀಡಲಾಗಿದೆ.

ಜೈಲಿನಲ್ಲಿನ ಕಷ್ಟ ಜೀವನ

  • ಐಷಾರಾಮಿ ಬದುಕಿಗೆ ಒಲವು ಹೊಂದಿದ್ದ ದರ್ಶನ್, ಈಗ ಜೈಲಿನ ಸಾಮಾನ್ಯ ಕೈದಿಗಳಂತೆ ಬದುಕುತ್ತಿದ್ದಾರೆ.
  • ಜೈಲಿನ ಆಹಾರ ತಿನ್ನಲು ಕಷ್ಟವಾಗುತ್ತಿದ್ದು, ತೂಕದಲ್ಲಿಯೂ ಇಳಿಕೆ ಕಂಡುಬಂದಿದೆ.
  • ಸರಿಯಾದ ನಿದ್ರೆ ಸಿಗದ ಕಾರಣ ದರ್ಶನ್ ಮನಶ್ಶಾಂತಿ ಕಳೆದುಕೊಂಡಿದ್ದಾರೆ.
  • ಬ್ಯಾರಕ್‌ನ ಕೊಠಡಿಯಲ್ಲಿ ಹೆಚ್ಚಿನ ಸಮಯ ಏಕಾಂಗಿಯಾಗಿ ಕಳೆಯುತ್ತಿದ್ದಾರೆ.
  • ವಾರಕ್ಕೆ ಕೇವಲ ಎರಡು ಬಾರಿ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡಲಾಗಿದೆ.

ಕೋರ್ಟ್ ಮುಂದೆ ದರ್ಶನ್ ಮನವಿ

ಜೈಲಿನಲ್ಲಿನ ಸಂಕಷ್ಟದ ಜೀವನದಿಂದ ಬಳಲುತ್ತಿರುವ ದರ್ಶನ್, ಕನಿಷ್ಠ ಸೌಲಭ್ಯ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಹಾಸಿಗೆ, ದಿಂಬು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿರುವುದಾಗಿ ಅವರು ಕೋರ್ಟ್‌ಗೆ ತಿಳಿಸಿದ್ದರು.

ಕೋರ್ಟ್ ಈಗ ಈ ಬೇಡಿಕೆಯನ್ನು ಪರಿಗಣಿಸಿ, ಅಗತ್ಯ ಸೌಲಭ್ಯ ಒದಗಿಸಲು ನಿರ್ದೇಶನ ನೀಡಿರುವುದು ದರ್ಶನ್‌ಗೆ ಸ್ವಲ್ಪ ಮಟ್ಟಿನ ನೆಮ್ಮದಿಯಾಗಿದೆ.