ನಟ ದರ್ಶನ್‌ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜೈಲು ವರ್ಗಾವಣೆ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಆರೋಪಿಗಳ ಸುರಕ್ಷತೆ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ವರ್ಗಾವಣೆ ಅಗತ್ಯ ಎಂದು ಎಸ್ಪಿಪಿ ವಾದಿಸಿದರೆ, ಆರೋಪಿಗಳ ಪರ ವಕೀಲರು ವರ್ಗಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಬೆಂಗಳೂರು: ನಟ ದರ್ಶನ್ ಮತ್ತು ಇತರ ಆರೋಪಿಗಳ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜಿಲ್ಲೆಗಳ ಜೈಲುಗಳಿಗೆ ವರ್ಗಾಯಿಸುವ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್‌ ವಿಚಾರಣೆಯು ಇನ್ನಷ್ಟು ಆಳವಾದ ತರ್ಕ ವಾದಗಳನ್ನು ಕೇಳಲು ನಾಳೆ ಸಂಜೆ 4 ಗಂಟೆಗೆ ಮುಂದೂಡಿದೆ.

ಎಸ್ಪಿಪಿ ಪ್ರಸನ್ನಕುಮಾರ್ ವಾದ

ರಾಜ್ಯ ಪರ ವಕೀಲ (SPP) ಪ್ರಸನ್ನಕುಮಾರ್ ಅವರು, ಆರೋಪಿಗಳ ಸುರಕ್ಷತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ವರ್ಗಾವಣೆ ಅಗತ್ಯವಿದೆ ಎಂದು ವಾದ ಮಂಡಿಸಿದರು. ಕಾರಾಗೃಹ ನಿಯಮಗಳ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಅಥವಾ ಆಡಳಿತಾತ್ಮಕ ಕಾರಣಕ್ಕೆ ಇನ್ಸ್‌ಪೆಕ್ಟರ್ ಜನರಲ್ ವರ್ಗಾವಣೆ ಮಾಡಲು ಅಧಿಕಾರ ಹೊಂದಿದ್ದಾರೆ ಎಂದು ಅವರು ನೆನಪಿಸಿದರು. ಆರೋಪಿಗಳು ವಕೀಲರು ಮತ್ತು ಕುಟುಂಬದವರ ಜೊತೆ ಚರ್ಚೆ ಮಾಡಲು ಅಡ್ಡಿ ಉಂಟಾಗುತ್ತದೆ ಎಂಬ ಆರೋಪವನ್ನು ತಳ್ಳಿ ಹಾಕುತ್ತಾ, ವೀಡಿಯೋ ಕಾನ್ಫರೆನ್ಸ್ ಮೂಲಕ ಭೇಟಿಯ ಅವಕಾಶ ಎಲ್ಲ ಜೈಲುಗಳಲ್ಲಿ ಲಭ್ಯವಿದೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ, “ಯಾರೇ ಆಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಸೆಲೆಬ್ರಿಟಿ ಸ್ಥಾನಮಾನ ಹೊಂದಿರುವ ಆರೋಪಿಗೆ ರಾಜಾತಿಥ್ಯ ನೀಡಿದರೆ ಜೈಲು ಅಧಿಕಾರಿಗಳನ್ನೇ ಅಮಾನತು ಮಾಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು. ಜೊತೆಗೆ, ದರ್ಶನ್ ಸೇರಿದಂತೆ ಕೆಲವು ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಕಾರಣವನ್ನು ವಾದದಲ್ಲಿ ಪ್ರಸ್ತಾಪಿಸಿದರು.

ದರ್ಶನ್ ಪರ ವಕೀಲರ ವಾದ ವಕೀಲರೊಂದಿಗೆ ನಿಯಮಿತ ಚರ್ಚೆ ಅಗತ್ಯ. ಅದನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ಸಾಧ್ಯವಿಲ್ಲ. ಜೊತೆಗೆ, ಕುಟುಂಬದವರು ಬೆಂಗಳೂರಿನಲ್ಲೇ ಇರುವ ಕಾರಣ, ಆರೋಪಿಗಳನ್ನು ಬಳ್ಳಾರಿ ಮುಂತಾದ ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವುದು ನ್ಯಾಯಸಮ್ಮತವಲ್ಲ ಎಂದು ವಾದಿಸಿದರು. ಬಳ್ಳಾರಿ ಜೈಲು ಬೆಂಗಳೂರು ನಗರದಿಂದ 310 ಕಿ.ಮೀ ದೂರದಲ್ಲಿದೆ. ಪ್ರತಿದಿನ ವಿಚಾರಣೆಗೆ ಹಾಜರಾಗಲು ಇದು ಸಾಧ್ಯವಲ್ಲ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ, ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂಲಭೂತ ಸೌಲಭ್ಯ ಕುರಿತ ವಾದ

ದರ್ಶನ್ ಪರ ವಕೀಲರು ಸಲ್ಲಿಸಿದ ಇನ್ನೊಂದು ಅರ್ಜಿಯಲ್ಲಿ ಹಾಸಿಗೆ, ದಿಂಬು, ಬಟ್ಟೆ, ಆಹಾರ, ಶೂ, ಕಾಂಡಿಮೆಂಟ್ಸ್ ಮುಂತಾದ ಕನಿಷ್ಠ ಸೌಲಭ್ಯಗಳನ್ನು ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಯಿತು. ಜೈಲು ಅಧಿಕಾರಿಗಳು ಕಾನೂನಿನ ಪ್ರಕಾರ ನೀಡಬೇಕಾದ ಸೌಲಭ್ಯ ನೀಡುತ್ತಿಲ್ಲ. ಜೈಲು ಮ್ಯಾನುಯಲ್ ಪ್ರಕಾರ ಸ್ವಂತ ಖರ್ಚಿನಲ್ಲಿ ಬೆಡ್‌ಶೀಟ್, ಸ್ವೆಟ್ಟರ್ ಮುಂತಾದವುಗಳನ್ನು ಪಡೆಯಲು ಅವಕಾಶ ಇರಬೇಕು ಎಂದು ವಾದ ಮಂಡಿಸಲಾಯಿತು. ಸುಪ್ರೀಂ ಕೋರ್ಟ್ ಸೆಲೆಬ್ರಿಟಿ ಸ್ಥಾನಮಾನ ನೀಡಬಾರದು ಎಂದು ಹೇಳಿದೆ. ಆದರೆ ಕನಿಷ್ಠ ಸೌಲಭ್ಯ ನಿರಾಕರಿಸಬೇಕೆಂದು ಎಲ್ಲಿಯೂ ಹೇಳಿಲ್ಲ ಎಂದು ವಕೀಲರು ಆಕ್ಷೇಪಿಸಿದರು.

ಇತರ ಆರೋಪಿಗಳ ಪರ ವಾದ

ಎ6 ಜಗದೀಶ್ ಪರ ವಕೀಲರು, ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದರು. ಎ14 ಪ್ರದೂಷ್ ಪರ ವಕೀಲರು, “ಹಿಂದೆ ಬೆಳಗಾವಿಯ ಅಂದೇರಿ ಸೆಲ್‌ನಲ್ಲಿ ಪ್ರದೂಷ್‌ನ್ನು ಇಟ್ಟಿದ್ದರು. ನಂತರ ಹೈಕೋರ್ಟ್ ಅದನ್ನು ಪ್ರಶ್ನಿಸಿ, ಮತ್ತೆ ಬೆಂಗಳೂರಿನ ಜೈಲಿಗೆ ತರಲು ಆದೇಶಿಸಿತ್ತು. ಹೀಗಾಗಿ ಪುನಃ ಶಿಫ್ಟ್ ಮಾಡುವುದು ಸರಿಯಲ್ಲ ಎಂದು ವಾದಿಸಿದರು. ಎಸ್ಪಿಪಿ, ಕೊಲೆ ಪ್ರಕರಣದ ಆರೋಪಿ ಸ್ವಂತ ಖರ್ಚಿನಲ್ಲಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ನಾಳಿನ ವಿಚಾರಣೆಯಲ್ಲಿ ದರ್ಶನ್ ಜೈಲು ಸ್ಥಳಾಂತರ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.