ಗಡೀಪಾರಾದ ತಿಮರೋಡಿ ರಾಯಚೂರಿಗೆ ಬೇಡ, ಕಾಡಿಗೆ ಕಳುಹಿಸಿ ಎಂದು ಪ್ರತಿಭಟನೆ ಶುರುವಾಗಿದೆ. ಧರ್ಮಸ್ಥಳ ವಿರುದ್ದ ಬುರುಡೆ ಷಡ್ಯಂತ್ರ ರೂಪಿಸಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ಹಲವೆಡೆಗಳಿಂದ ಪ್ರತಿಭಟನೆ ಬಿಸಿ ಹೆಚ್ಚಾಗತೊಡಗಿದೆ. 

ರಾಯಚೂರು (ಸೆ.23) ಧರ್ಮಸ್ಥಳ ವಿರುದ್ದ ಬುರುಡೆ ಆರೋಪ ಮಾಡಿದ ಬುರುಡೆ ಗ್ಯಾಂಗ್ ದಿಕ್ಕಾಪಾಲಾಗಿ ಓಡುತ್ತಿದೆ. ಈ ಪೈಕಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡೀಪಾರು ಮಾಡಲು ಆದೇಶ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡುವ ಪ್ರಯತ್ನದ ಹಿನ್ನಲೆಯಲ್ಲಿ ತಿಮರೋಡಿಯನ್ನು ರಾಯಚೂರಿನ ಮಾನ್ವಿಗೆ ಗಡೀಪಾರು ಆದೇಶ ಮಾಡಲಾಗಿದೆ. ಆದರೆ ಈ ಆದೇಶ ಹೊರಬೀಳುತ್ತಿದ್ದಂತೆ ರಾಯಚೂರಿನಲ್ಲಿ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ. ಮಹೇಶ್ ಶೆಟ್ಟಿಯನ್ನು ಗಡೀಪಾರು ಮಾಡಿ ನಮ್ಮ ಜಿಲ್ಲೆಗೆ ಹಾಕಬೇಡಿ ಎಂದು ಪ್ರತಿಭಟನೆ ಮಾಡಲು ಕೆಲ ಸಂಘಟನೆಗಳು, ಸಮಾನ ಮನಸ್ಕರು ಮುಂದಾಗಿದ್ದಾರೆ.

ನಮ್ಮ ಜಿಲ್ಲೆಗೆ ಬೇಡ, ಯಾವುದಾದರೂ ಕಾಡಿಗೆ ಕಳುಹಿಸಿ

ಮಹೇಶ್ ಶೆಟ್ಟಿ ತಿಮರೋಡಿ ಒಂದು ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಹಲವು ಪ್ರಕರಣಗಳು ದಾಖಲಾಗಿದೆ. ಇಗೀಗ ಈ ಆರೋಪ ಹೊತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ನಮ್ಮ ಜಿಲ್ಲೆಗೆ ಹಾಕಬೇಡಿ. ಯಾವುದಾದರು ಕಾಡಿಗೆ ಗಡೀಪಾರು ಮಾಡಿ ಎಂದು ರಾಯಚೂರಿನ ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ ಆರಂಭಿಸಿದೆ.

ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ

ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ದಲಿತ ಸೇನೆ, ಸಮಾನ ಮನಸ್ಕರ ವೇದಿಕೆ ಸಜ್ಜಾಗಿದೆ. ನಾಳೆ (ಸೆ.24) ಬೆಳಗ್ಗೆ 10 ಗಂಟೆ ಪ್ರತಿಭಟನೆ ಆರಂಭಗೊಳ್ಳಲಿದೆ. ತಿಮರೋಡಿ ರಾಯಚೂರು ಜಿಲ್ಲೆಗೆ ಬೇಡ, ಯಾವುದಾದರೂ ಕಾಡಿಗೆ ಗಡೀಪಾರು ಮಾಡಿ ಎಂದು ಪ್ರತಿಭಟನೆ ನಡೆಯಲಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕಲಾಗಿದೆ.

ಧರ್ಮಸ್ಥಳ ವಿರುದ್ದ ಬುರುಡೆ ಕತೆ ಹೆಣೆದು ಷಡ್ಯಂತ್ರ ಸೃಷ್ಟಿಸಿದ ಗಂಭೀರ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಬಂಧನ ಭೀತಿಯಲ್ಲಿದೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದೆ. ಉಜಿರೆ ಬೆನಕ ಆಸ್ಪತ್ರೆಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ವರದಿಗಾರ, ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ, ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ಮಂದಿ ಸೇರಿಸಿ ಗಲಾಟೆ, ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿರುವುದು ಸೇರಿದಂತೆ ಐದು ಪ್ರಕರಣಗಳು ದಾಖಲಾಗಿದೆ.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್‌ನಲ್ಲಿದ್ದ ಚಿನ್ನಯ್ಯ ಅರೆಸ್ಟ್ ಆಗಿ ಹೈರಾಣಾಗಿದ್ದಾನೆ. ಕೋರ್ಟ್‌ನಲ್ಲಿ 164 ಹೇಳಿಕೆ ದಾಖಲು ಮಾಡಲಾಗಿದ್ದು, ಗಳಗಳನೇ ಅತ್ತು ಷಡ್ಯಂತ್ರ ಬಾಯ್ಬಿಟ್ಟಿದ್ದಾನೆ. ಧರ್ಮಸ್ಥಳ ಟಾರ್ಗೆಟ್ ಮಾಡಿ ನಡೆಸಿದ ಷಡ್ಯಂತ್ರದಲ್ಲಿ ತಾನು ಸಿಲುಕಿ ಈಗ ಒದ್ದಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.