ರಾಯಚೂರಿನ ಶಕ್ತಿನಗರದಲ್ಲಿ ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಂತಿಗೆ ಗಣೇಶ ಮೂರ್ತಿ ಸಿಲುಕಿ ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ತಂತಿ ತೆರವುಗೊಳಿಸಿ ಮೆರವಣಿಗೆ ಮುಂದುವರೆಸಲಾಯಿತು.

ರಾಯಚೂರು (ಸೆ.7): ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿದ್ದು, ರಾಯಚೂರು-ಹೈದರಾಬಾದ್ ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಕೃಷ್ಣಾ ನದಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆಗಾಗಿ ತೆಗೆದುಕೊಂಡು ಹೋಗುವ ವೇಳೆ, ಮೂರ್ತಿಯ ಕೈಗೆ ರಸ್ತೆ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಸಿಲುಕಿಕೊಂಡಿದ್ದರಿಂದ ಬೃಹತ್ ಗಣಪತಿಯ ಮೆರವಣಿಗೆ ರಸ್ತೆಯ ಮಧ್ಯದಲ್ಲೇ ನಿಂತುಹೋಗಿದೆ.

ಈ ಘಟನೆಯಿಂದಾಗಿ ಶಕ್ತಿನಗರದ ಬಳಿ ವಾಹನಗಳು ಸಂಚರಿಸಲಾಗದೆ ಸಾಲಾಗಿ ನಿಂತ ನೂರಾರು ವಾಹನಗಳಿಂದ ರಸ್ತೆ ಸಂಪೂರ್ಣ ಸ್ಥಗಿತಗೊಂಡಿತು. ಗಣೇಶ ಚತುರ್ಥಿಯ ಐದನೇ ದಿನದಂದು ನಡೆದ ಈ ಘಟನೆಯಿಂದ ಸ್ಥಳೀಯ ಭಕ್ತರು ಮತ್ತು ಪ್ರಯಾಣಿಕರು ತೀವ್ರ ತೊಂದರೆಗೊಳಗಾದರು. ಮಾಹಿತಿ ತಿಳಿದ ಕೂಡಲೇ ಶಕ್ತಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ಸ್ಥಳೀಯರ ಸಹಕಾರದಿಂದ ಟಿಪ್ಪರ್ ವಾಹನವನ್ನು ಬಳಸಿ, ಗಣೇಶ ಮೂರ್ತಿಗೆ ಸಿಲುಕಿದ ವಿದ್ಯುತ್ ತಂತಿಯನ್ನು ಎಚ್ಚರಿಕೆಯಿಂದ ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆಯಿಂದಾಗಿ ಗಣೇಶ ಮೂರ್ತಿಯ ಮೆರವಣಿಗೆ ಮುಂದುವರಿಯಲು ಸಾಧ್ಯವಾಯಿತಾದರೂ, ಟ್ರಾಫಿಕ್ ಜಾಮ್‌ನಿಂದಾಗಿ ಗಂಟೆಗಟ್ಟಲೇ ಪ್ರಯಾಣಿಕರು ರಸ್ತೆಯಲ್ಲೇ ಕಾಯುವಂತಾಯಿತು.

ಶಕ್ತಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಘಟನೆಯಿಂದಾಗಿ ಭಕ್ತರಲ್ಲಿ ಕ್ಷಣಿಕ ಆತಂಕ ಉಂಟಾದರೂ, ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮಗಳಿಂದ ಅನಾಹುತ ಸಂಭವಿಸಲಿಲ್ಲ. ಈ ಘಟನೆಯಿಂದಾಗಿ ಭವಿಷ್ಯದಲ್ಲಿ ಇಂತಹ ಮೆರವಣಿಗೆಗಳಿಗೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳ ಅಗತ್ಯವಿದೆ ಎಂಬುದು ತೋರಿಸಿದೆ.