ರಾಯಚೂರಿನ ದಂಪತಿ ಆನ್‌ಲೈನ್‌ನಲ್ಲಿ ₹100ಕ್ಕೆ 3 ಸೀರೆಗಳ ಆಫರ್ ನೋಡಿ 70 ಸೀರೆಗಳಿಗೆ ₹10,000 ಪಾವತಿಸಿದ್ದಾರೆ. ಆದರೆ, ಅವರಿಗೆ ಹರಿದ, ಬಳಕೆಗೆ ಯೋಗ್ಯವಲ್ಲದ ಸೀರೆಗಳು ಬಂದಿವೆ. ಮಾರಾಟಗಾರರು ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.

ರಾಯಚೂರು: ಆನ್‌ಲೈನ್ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ನಡೆಯುತ್ತಿರುವ ಸೀರೆ ವ್ಯವಹಾರದಲ್ಲಿ ವಂಚಕರು ಸಾಮಾನ್ಯ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿರುವ ಘಟನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮನೆಯಲ್ಲೇ ಕುಳಿತು ಸೀರೆ ವ್ಯಾಪಾರ ಮಾಡುವ ಕನಸು ಕಂಡಿದ್ದ ದಂಪತಿಗೆ, ಆನ್‌ಲೈನ್ ವಂಚಕರು ಭಾರೀ ವಂಚನೆ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಮನೋಹರ ಹಾಗೂ ಅವರ ಪತ್ನಿ ಕಾಳಮ್ಮ, ಸೋಶಿಯಲ್ ಮೀಡಿಯಾದಲ್ಲಿ “₹100ಕ್ಕೆ 3 ಸೀರೆ” ಎಂಬ ಆಕರ್ಷಕ ಆಫರ್ ಜಾಹೀರಾತನ್ನು ಕಂಡು ಆಕರ್ಷಿತರಾದರು. ಬಣ್ಣ ಬಣ್ಣದ, ವೈವಿಧ್ಯಮಯ ವಿನ್ಯಾಸದ ಸೀರೆಗಳನ್ನು ನೋಡಿ ಅವರು ಫಿದಾ ಆಗಿ ತಕ್ಷಣವೇ ವ್ಯವಹಾರ ಮಾಡಲು ನಿರ್ಧರಿಸಿದರು.

10 ಸಾವಿರ ರೂಪಾಯಿಗೆ 70 ಸೀರೆಗಳ ಆರ್ಡರ್

ಸೀರೆ ವ್ಯಾಪಾರ ಆರಂಭಿಸುವ ಉದ್ದೇಶದಿಂದ, ಜಾಹೀರಾತಿನಲ್ಲಿ ಕೊಟ್ಟಿದ್ದ ನಂಬರಿಗೆ ಕರೆ ಮಾಡಿ, 10 ಸಾವಿರ ರೂಪಾಯಿಗೆ 70 ಸೀರೆಗಳನ್ನು ಆರ್ಡರ್ ಮಾಡಿದರು. ಆರ್ಡರ್ ಕಳಿಸಿದ ಕೆಲವೇ ದಿನಗಳಲ್ಲಿ ಅವರ ಮನೆಗೆ ಪಾರ್ಸಲ್ ತಲುಪಿತು. ಆದರೆ ಪಾರ್ಸಲ್ ತೆರೆದ ಕ್ಷಣದಲ್ಲೇ ದಂಪತಿಗೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಬಂದಿದ್ದ ಎಲ್ಲಾ 70 ಸೀರೆಗಳೂ ಹರಿದು ಹೋಗಿದ್ದು, ಬಳಕೆ ಮಾಡಲು ಅಸಾಧ್ಯವಾಗಿತ್ತು. ಕೆಲ ಸೀರೆಗಳಿಂದ ದುರ್ವಾಸನೆಯೂ ಹೊಡೆಯುತ್ತಿತ್ತು. ಹೊಸ ಡಿಸೈನ್ ಸೀರೆಗಳ ಬದಲಾಗಿ, ಹರಿದ ಮತ್ತು ಡ್ಯಾಮೇಜ್ ಆದ ಸೀರೆಗಳನ್ನು ಕಳುಹಿಸಿದ್ದನ್ನು ನೋಡಿ ಅವರು ದಿಗ್ಭ್ರಮೆಗೊಂಡರು.

ವಂಚಕರ ಬೇಕಾಬಿಟ್ಟಿ ವರ್ತನೆ

ಹರಿದ ಸೀರೆಗಳ ಬಗ್ಗೆ ವಿಚಾರಿಸಲು ಮಾರಾಟಗಾರರ ಫೋನ್ ನಂಬರ್‌ಗೆ ಸಂಪರ್ಕಿಸಲು ಯತ್ನಿಸಿದಾಗ, ಪ್ರತಿಕ್ರಿಯೆ ದೊರಕಲಿಲ್ಲ. ಕೆಲ ಸಮಯದ ನಂತರ ಆ ನಂಬರ್ ಅವರನ್ನು ಬ್ಲಾಕ್ ಮಾಡಲಾಯಿತು. ಬೇರೆ ನಂಬರ್ ಮೂಲಕ ಸಂಪರ್ಕಿಸಿದಾಗ, ನಾನಾ ನೆಪಗಳನ್ನು ಹೇಳಿ ತಕ್ಷಣವೇ ಕಾಲ್ ಕಟ್ ಮಾಡುವ ರೀತಿಯಲ್ಲಿ ಗ್ಯಾಂಗ್ ವರ್ತಿಸಿತು. ಇದರಿಂದ ದಂಪತಿ ಸಂಪೂರ್ಣವಾಗಿ ವಂಚಿತರಾದರು.

ಪೊಲೀಸರ ಹಿಂದೇಟು ಆರೋಪ

ಈ ಬಗ್ಗೆ ದೂರು ದಾಖಲಿಸಲು ಮಾನ್ವಿ ಪೊಲೀಸರನ್ನು ಸಂಪರ್ಕಿಸಿದಾಗ, ಸೂಕ್ತ ಪ್ರತಿಕ್ರಿಯೆ ಸಿಗದೆ ಹಿಂದೇಟು ತೋರಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. “ನಾವು ವಂಚಕರ ಬಲಿಯಾಗಿದ್ದೇವೆ. ನಮಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ಮನೋಹರ-ಕಾಳಮ್ಮ ದಂಪತಿ ಮನವಿ ಮಾಡಿದ್ದಾರೆ.

ದಂಪತಿಯ ಎಚ್ಚರಿಕೆ “ಯೋಚಿಸಿ ಖರೀದಿ ಮಾಡಿ”

ಈ ಘಟನೆಯ ನಂತರ ತಮ್ಮ ಅನುಭವವನ್ನು ಹಂಚಿಕೊಂಡ ದಂಪತಿ, “ಆನ್‌ಲೈನ್ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಬರುವ ಆಕರ್ಷಕ ಆಫರ್‌ಗಳನ್ನು ನಂಬಿ ತಕ್ಷಣವೇ ಹಣ ವರ್ಗಾವಣೆ ಮಾಡಬೇಡಿ. ಯೋಚಿಸಿ, ಪರಿಶೀಲಿಸಿ ಖರೀದಿ ಮಾಡಿ. ಇಲ್ಲವಾದರೆ ನಮ್ಮಂಥವರ ಪರಿಸ್ಥಿತಿ ಯಾರಿಗೂ ಬಾರದಿರಲಿ” ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಆನ್‌ಲೈನ್ ವಂಚನೆ ಗ್ಯಾಂಗ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಲಾಗಿದೆ. ಇಂತಹ ಮೋಸ ಮಾಡುವ ಗ್ಯಾಂಗ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನೋಹರ ದಂಪತಿ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.