ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುತ್ತಿದೆ, ಚಾಮುಂಡೇಶ್ವರಿ ದೇವಾಲಯವನ್ನು ಟೂಲ್‌ಕಿಟ್ ಆಗಿ ಬಳಸುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ದಸರಾ ಉದ್ಘಾಟಕರಾಗಿ ಭಾನು ಮುಸ್ತಾಕ್ ಆಯ್ಕೆ ವಿಚಾರವಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು (ಆ.31): ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆ ಬುದ್ಧಿ ಕೊಡಲಿ, ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವ ಮನಸ್ಥಿತಿ ತೊಲಗಿಸಲಿ, ಹಿಂದೂಗಳ ಭಾವನೆಗೆ ಧಕ್ಕೆ ತರದಂತೆ ಬುದ್ಧಿ ಕೊಡಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಇಂದು ಮೈಸೂರಿಗೆ ಆಗಮಿಸಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ದೇವಾಲಯ ಹಿಂದೂಗಳದ್ದಲ್ಲ ಎಂದರೆ ಮತ್ಯಾರದ್ದು?
ಕಾಂಗ್ರೆಸ್ ಸರ್ಕಾರವು ಪದೇ ಪದೇ ಹಿಂದೂ ದೇವಾಲಯಗಳನ್ನು ಗುರಿಯಾಗಿಸುತ್ತಿದೆ. ನಿಮಗೆ ಧೈರ್ಯ ಇದ್ದರೆ ಮಸೀದಿ ಮುಂದೆ ನಿಂತು ಇದು ಮುಸ್ಲಿಮರದ್ದಲ್ಲ ಎಂದು ಹೇಳಿ. ಚುನಾವಣೆಗಾಗಿ ಓಟ್ ರಾಜಕಾರಣ ಮಾಡಿ, ಚುನಾವಣೆ ವೇಳೆ ಮುಸಲ್ಮಾನರ ಮೂಗಿಗೆ ತುಪ್ಪ ಸುರಿಯಿರಿ. ಆದರೆ ಈಗ ಯಾಕೆ ಓಟಿನ ಓಲೈಕೆ ರಾಜಕಾರಣ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅವನತಿ ಚಾಮುಂಡೇಶ್ವರಿಯಿಂದಲೇ ಆಗುತ್ತೆ: ಆರ್ ಅಶೋಕ್ ಎಚ್ಚರಿಕೆ:
ನಾಳೆ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎಲ್ಲ ಹಿಂದೂಗಳು ಒಗ್ಗಟ್ಟಾಗಿ ಬರಬೇಕು. ಚಾಮುಂಡೇಶ್ವರಿ ದೇವಾಲಯವನ್ನು ಟೂಲ್‌ಕಿಟ್ ಆಗಿ ಬಳಸಿದರೆ ಹಿಂದೂಗಳು ಸಹಿಸುವುದಿಲ್ಲ. ಕಾಂಗ್ರೆಸ್‌ನ ಅವನತಿ ಚಾಮುಂಡೇಶ್ವರಿಯಿಂದಲೇ ಶುರುವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮೈಸೂರು ದಸರಾ ಉದ್ಘಾಟಕರಾಗಿ ಭಾನು ಮುಸ್ತಾಕ್ ಆಯ್ಕೆಯಾದ ವಿಚಾರ ಸಂಬಂಧ ಗರಂ ಆದ ಆರ್ ಅಶೋಕ್ ಅವರು, ಮುಷ್ತಾಕ್ ಇಲ್ಲ, ಯಾವಕ್ಕಾನೂ ಗೊತ್ತಿಲ್ಲ.ದಸರಾ ಸಾವಿರಾರು ವರ್ಷಗಳ ಸಂಪ್ರದಾಯ. ಇಲ್ಲಿ ಬರುವವರು ಚಾಮುಂಡೇಶ್ವರಿ ತಾಯಿ ಪೂಜಿಸುತ್ತಾರೆ. ಮೊದಲು ತಾಯಿಗೆ ಭಕ್ತಿ ಇದೆ ಎಂದು ಒಪ್ಪಿಕೊಳ್ಳಬೇಕು. ಕನ್ನಡವನ್ನ ಭುವನೇಶ್ವರಿ ಮಾಡಿದ್ದೀರಾ ಎಂದು ಭಾನು ಮಸ್ತಾಕ್ ಹೇಳಿದ್ದು. ಅರಿಶಿನ ಕುಂಕುಮ ಬಣ್ಣದ ಧ್ವಜ ಮಾಡಿದ್ದೀರಾ. ನಾವು ಭುವನೇಶ್ವರಿ ಒಪ್ಪಿಕೊಳ್ಳಲ್ಲ ಎಂದಿದ್ರು. ತಾಯಿ ಭುವನೇಶ್ವರಿ ಒಪ್ಪದಿದ್ದ ಮೇಲೆ ಚಾಮುಂಡೇಶ್ವರಿ ಹೇಗೆ ಒಪ್ಪುತ್ತೀರ? ಬಾನು ಮುಸ್ತಾಕ್ ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಮೊದಲು ಕನ್ನಡಿಗರ ಕ್ಷಮೆ ಕೇಳಬೇಕು. ಅನಂತರ ದಸರಾ ಉದ್ಘಾಟನೆ ಬಗ್ಗೆ ನೋಡುವ. 6 ಕೋಟಿ ಹಿಂದೂಗಳಲ್ಲಿ ಒಬ್ಬ ಸಾಧಕ ಸಿಗಲಿಲ್ಲವೇ? ಕನ್ನಡಕ್ಕೆ ಅಗೌರವ ತೋರಿದವರನ್ನೇ ಕರೆಯಬೇಕಿತ್ತಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ನಿಸಾರ್ ಉದ್ಘಾಟನೆ ಮಾಡಿದ್ರಲ್ಲ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ತಿರುಗೇಟು ನೀಡಿದ ಆರ್ ಅಶೋಕ್. ನಿಸಾರ್ ಎಲ್ಲರನ್ನೂ ಗೌರವಿಸುತ್ತಿದ್ದರು. ತಾಯಿಗೆ ನಿತ್ಯೋತ್ಸವ ಎಂದು ಬರೆದಿದ್ದಾರೆ. ಆದರೆ ಭಾನು ಮುಸ್ತಾಕ್ ಧ್ವಜದ ಬಗ್ಗೆ ಮಾತನಾಡಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದಿಂದಲೇ ಗಲಭೆ ಸೃಷ್ಟಿ: ಆರ್ ಅಶೋಕ್:
ನಾಗಮಂಗಲದಲ್ಲಿ ಮಸೀದಿ ಮುಂದೆ ಗಣೇಶ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ FIR ದಾಖಲಾಗಿರುವ ವಿಚಾರವನ್ನೂ ಆರ್ ಅಶೋಕ್ ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಗಣೇಶನನ್ನೇ ಪೊಲೀಸ್ ಠಾಣೆಯಲ್ಲಿ ಇಟ್ಟಂತಿದೆ. ಮಸೀದಿ ಮುಂದಿನ ರಸ್ತೆಯನ್ನು ಸರ್ಕಾರವೇ ಮಾಡಿದೆ, ಆದರೆ ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸುತ್ತಿದೆ. ಮಾತನಾಡಿದ ಕಾರಣಕ್ಕೆ FIR ಹಾಕಿ, ಗಲಭೆಗೆ ಸರ್ಕಾರವೇ ದಾರಿ ಮಾಡುತ್ತಿದೆ. ಇಂತಹ ಕೃತ್ಯ ಮುಂದುವರಿದರೆ ದೇವರೇ ಶಿಕ್ಷೆ ಕೊಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್‌ನ ಟೂಲ್‌ಕಿಟ್ ಆರೋಪ
ಅಯ್ಯಪ್ಪ, ತಿರುಪತಿ, ಧರ್ಮಸ್ಥಳ, ಈಗ ಚಾಮುಂಡೇಶ್ವರಿ ದೇವಾಲಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಟೂಲ್‌ಕಿಟ್ ಮುಂದುವರಿದ ಭಾಗ ಇದು. ಒಂದು ಕೋಮುವನ್ನು ಸಂತೃಪ್ತಿಗೊಳಿಸಲು ಈ ರೀತಿ ಮಾಡುತ್ತಿದ್ದಾರೆ ಇದು ಬಹಳ ದಿನ ನಡೆಯೋಲ್ಲ ಎಂದು ಎಚ್ಚರಿಕೆ ನೀಡಿದರು.
ಆರ್ ಅಶೋಕ್, ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎಲ್ಲ ಹಿಂದೂಗಳನ್ನು ಒಗ್ಗೂಡಿಸುವ ಕರೆ ನೀಡಿದ್ದಾರೆ. ಚಾಮುಂಡೇಶ್ವರಿ ಬೆಟ್ಟದ ಬಗ್ಗೆ ಪದೇ ಪದೇ ಅಗೌರವ ತೋರಿದರೆ, ಚಾಮುಂಡೇಶ್ವರಿ ಚಲೋ ಕಾರ್ಯಕ್ರಮವನ್ನೂ ಆಯೋಜಿಸುತ್ತೇವೆ ಎಂದು ಘೋಷಿಸಿದ್ದಾರೆ. ಈ ವಿವಾದದಿಂದ ಮೈಸೂರಿನ ರಾಜಕೀಯ ವಾತಾವರಣ ತೀವ್ರ ಉದ್ವಿಗ್ನವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ರಾಜ್ಯದಾದ್ಯಂತ ಚರ್ಚೆಗೆ ಗುರಿಯಾಗುವ ಸಾಧ್ಯತೆ ಇದೆ.
