Quran Recitation at Karnataka Govt Event Sparks Row ಹುಬ್ಬಳ್ಳಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಕುರಾನ್‌ ಪಠಣೆಗೆ ಅವಕಾಶ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಚಿವ ಸಂತೋಷ್ ಲಾಡ್ ನೇತೃತ್ವದ ಈ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಹುಬ್ಬಳ್ಳಿ (ಅ.9): ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್‌ ಪಠಣೆಗೆ ಅವಕಾಶ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಇದೇ ಕಾರ್ಯಕ್ರಮದಲ್ಲಿ ಅಜಾನ್‌ ಕೂಗುತ್ತಿದ್ದಂತೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಮ್ಮ ಭಾಷಣ ಕೂಡ ನಿಲ್ಲಿಸಿದ್ದರು. ಹುಬ್ಬಳ್ಳಿಯ (Hubballi) ವಿಶಾಲ್ ನಗರದಲ್ಲಿ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಹೆಸ್ಕಾಂ ಇಲಾಖೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಂತೋಷ್ ಲಾಡ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುರಾನ್ಅನ್ನು ಪಠಣೆ ಮಾಡಲಾಗಿದೆ.

ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಕುರಾನ್‌ ಪಠಣ ಮಾಡಲು ಅವಕಾಶ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ವಿರೋಧ ಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ ಪತ್ರ ಬರೆದಿದ್ದಾರೆ.

ಸರ್ಕಾರಿ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ನೆರವೇರಿಸಲಾಗಿದೆ. ಅಲ್ಲದೆ, ವೇದಿಕೆ ಮೇಲೆಯೇ ಕುರಾನ್‍ ಪಠಣೆಗೂ ಅವಕಾಶ ನೀಡಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಲಾಗಿದೆ. ಇದೇ ವೇದಿಕೆಯ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ‌ ಕಮಿಷನರ್ ಡಾ.‌ರುದ್ರೇಶ್ ಘಾಳಿ. ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಕೂಡ ಇದ್ದರು ಎಂದು ತಿಳಿಸಲಾಗಿದ.

ಇಬ್ಬರು ಅಧಿಕಾರಿಗಳ‌ ಮೇಲೆ‌‌‌‌ ಕ್ರಮ ಕೈಗೊಳ್ಳುವಂತೆ ಅರವಿಂದ್‌ ಬೆಲ್ಲದ್‌ ಒತ್ತಾಯಿಸಿ ಪತ್ರದಲ್ಲಿ ಬರೆದಿದ್ದಾರೆ. ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ದೇವರ ಗುಡಿಹಾಳ ರಸ್ತೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. 10 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಇಲಾಖೆ ವತಿಯಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಾಗಿತ್ತು.

ಅದರೊಂದಿಗೆ ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಸಮಾರಂಭ ಕೂಡ ಏರ್ಪಡಿಸಲಾಗಿತ್ತು. ಆದರೆ ಇಡೀ ಕಾರ್ಯಕ್ರಮ ಕಾಂಗ್ರೆಸ್‍ ಪಕ್ಷದ ಸಮಾರಂಭ ಎನ್ನುವಂತೆ ಮಾಡಲಾಗಿತ್ತು. ವೇದಿಕೆಯಲ್ಲಿ ಅಳವಡಿಸಿದ್ದ ಬ್ಯಾನರ್‍ ಹಾಗೂ ಅಧಿಕಾರಿಗಳು ನಡೆದುಕೊಂಡ ರೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Scroll to load tweet…

ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡ ಅರವಿಂದ್ ಬೆಲ್ಲದ್‌

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅರವಿಂದ್‌ ಬೆಲ್ಲದ್‌, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ಆಡಳಿತವನ್ನು ಮತಬ್ಯಾಂಕ್ ತುಷ್ಟೀಕರಣದ ವೇದಿಕೆಯನ್ನಾಗಿ ಪರಿವರ್ತಿಸಿದೆ. ಹುಬ್ಬಳ್ಳಿಯಲ್ಲಿ, ಸರ್ಕಾರಿ ಕಾರ್ಯಕ್ರಮ ನಾಗರಿಕ ಮತ್ತು ಸಾರ್ವಜನಿಕ ಕಾರ್ಯಗಳ ಶಿಲಾನ್ಯಾಸ ಕುರಾನ್ ಪಠಣದೊಂದಿಗೆ ಪ್ರಾರಂಭವಾಗಿದೆ. ಇದು ರಾಜ್ಯ ಕಾರ್ಯಕ್ರಮಗಳ ಪಾವಿತ್ರ್ಯ ಮತ್ತು ತಟಸ್ಥತೆಯನ್ನು ಬಹಿರಂಗವಾಗಿ ಉಲ್ಲಂಘಿಸಿದೆ.

ಎಲ್ಲಾ ನಾಗರಿಕರಿಗೆ ಉದ್ದೇಶಿಸಲಾದ ಅಧಿಕೃತ ವೇದಿಕೆಗಳನ್ನು ಒಂದು ವರ್ಗವನ್ನು ಮೆಚ್ಚಿಸಲು ಕೋಮುವಾದೀಕರಿಸಿದಾಗ, ಅದು ಕಾಂಗ್ರೆಸ್‌ನ ನಿಜವಾದ ಆದ್ಯತೆಗಳನ್ನು ಬಹಿರಂಗಪಡಿಸುತ್ತದೆ. ಇವರಿಗೆ ಆಡಳಿತ, ಅಭಿವೃದ್ಧಿ ಯಾವುದೂ ಬೇಕಾಗಿಲ್ಲ. ಯಾವುದೇ ಬೆಲೆ ತೆತ್ತಾದರೂ ತುಷ್ಟೀಕರಣ ರಾಜಕೀಯ ಮಾಡುತ್ತಿದ್ದಾರೆ. ಇದು ಜಾತ್ಯತೀತತೆಯಲ್ಲ. ಇದು ಆಯ್ಕೆ ಜಾತ್ಯಾತೀತತೆ. ಇದನ್ನು ಜನರನ್ನು ವಿಭಜಿಸಲು ಮತ್ತು ಗಮನವನ್ನು ಬೇರೆಡೆಗೆ ಸೆಳೆಯಲು ವಿನ್ಯಾಸಗೊಳಿಸಲಾಗಿದೆ.

ತನ್ನ ಮತಬ್ಯಾಂಕ್ ಅನ್ನು ತೃಪ್ತಿಪಡಿಸಲು ನಿಯಮಗಳನ್ನು ಬಗ್ಗಿಸುವ ಸರ್ಕಾರವು ಎಲ್ಲಾ ಕನ್ನಡಿಗರನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಸಾಮರಸ್ಯದ ಹೆಸರಿನಲ್ಲಿ ಕರ್ನಾಟಕವು ಈ ಬೂಟಾಟಿಕೆಗಿಂತ ಹೆಚ್ಚಿನದನ್ನು ನೋಡಬೇಕಿದೆ.