ಮತಗಳ್ಳತನದ ಆರೋಪದ ಬಗ್ಗೆ ಪ್ರಿಯಾಂಕ್ ಖರ್ಗೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಯೋಗವು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸದಾಶಿವನಗರ (ಆ.8): ಮತಗಳ್ಳತನ ನಡೆದಿರುವುದು ಸತ್ಯ. ನಾವು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇವೆ. ಚುನಾವಣಾ ಆಯೋಗ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅಫಿಡವಿಟ್‌ಗೆ ಸಹಿ ಮಾಡಿ ಎಂದರೆ ಏನರ್ಥ? ಎಂದು ಚುನಾವಣಾ ಆಯೋಗದ ಕಾರ್ಯವೈಖರಿಯ ವಿರುದ್ಧ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತ ಕಳ್ಳತನದ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಇಂದಿನ ರ್ಯಾಲಿಯಲ್ಲಿ ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಆಯೋಗವು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಮತಗಳ್ಳತನ ನಡೆದಿದೆ ಎಂಬುದಕ್ಕೆ ಸಾವಿರಾರು ಪುರಾವೆಗಳನ್ನು ಒದಗಿಸಿದ್ದೇವೆ. ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿಯೇ ಇಲ್ಲ. ಹಿಂದಿನ ಚಿಲುವೆ ಪ್ರಕರಣದ ಬಗ್ಗೆ ಆಯೋಗ ಗಮನ ಹರಿಸಿತೇ? ಜನರ ಮುಂದೆ ನಾವೇ ಉತ್ತರ ಕೊಡಬೇಕು. ಎಲ್ಲಾ ಆರೋಪಗಳಿಗೂ ದಾಖಲೆಗಳನ್ನು ನೀಡುತ್ತೇವೆ. ಒಂದೊಂದೇ ಸತ್ಯ ಹೊರಬರಲಿದೆ ಎಂದರು.
ಬಿಜೆಪಿ ನಾಯಕರ 'ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಟುಸ್ ಪಟಾಕಿಯಾಯಿತು' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, 'ಧಮ್ ತಾಕತ್ ಇದ್ದರೆ ಬಿಜೆಪಿಗರು ಟುಸ್ ಪಟಾಕಿಯನ್ನು ಕೈಯಲ್ಲಿ ಹಿಡಿಯಲಿ' ಎಂದು ಸವಾಲು ಹಾಕಿದರು. ಇನ್ನೆರಡು ದಿನ ಕಳೆಯಲಿ, ಪ್ರತಿಯೊಂದು ಆರೋಪಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ. ನಾವು ಹಿಟ್ ಆಂಡ್ ರನ್ ಮಾಡುವವರಲ್ಲ ಎಂದು ತಿರುಗೇಟು ನೀಡಿದರು.
ಈ ಆರೋಪ-ಪ್ರತ್ಯಾರೋಪಗಳು ರಾಜ್ಯ ರಾಜಕೀಯ ಕೋಲಾಹಲ ಎಬ್ಬಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿವೆ. ಚುನಾವಣಾ ಆಯೋಗದ ಮುಂದಿನ ಕ್ರಮವನ್ನು ಎಲ್ಲರೂ ಎದುರುನೋಡುತ್ತಿದ್ದಾರೆ.
