Pradeep Eshwar demands apology: ತಮ್ಮ ಸ್ವರ್ಗಸ್ಥ ತಾಯಿಯ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದರು.. ಸಿಂಹ ಅವರು ಚಾಮುಂಡೇಶ್ವರಿ, ಸೀತಾ ಮಾತೆಯ ಬಳಿ ಕ್ಷಮೆ ಕೇಳಲಿ ಇಲ್ಲದಿದ್ದರೆ ತನ್ನ ತಾಯಿ ಕ್ಷಮಿಸಿದರೂ ತಾನು ಕ್ಷಮಿಸಲ್ಲ
ಬೆಂಗಳೂರು (ಅ.26): ನನ್ನ ತಾಯಿ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದಕ್ಕಾಗಿ ಅವರು ತಾಯಿಯ ಕ್ಷಮೆ ಕೇಳಬೇಕು. ಅದಾಗದಿದ್ದರೆ ಚಾಮುಂಡೇಶ್ವರಿ ಅಥವಾ ಸೀತಾ ಮಾತೆ ಬಳಿ ಕ್ಷಮೆ ಕೇಳಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ತಾಯಿ ಸ್ವರ್ಗದಲ್ಲಿದ್ದಾರೆ. ಅವರ ಬಗ್ಗೆ ಪ್ರತಾಪ್ ಸಿಂಹ ಅವಹೇಳನಕಾರಿ ಮಾತನಾಡಿದ್ದಾರೆ. ಅವರು ಸ್ವರ್ಗಕ್ಕೆ ಹೋಗಿ ಕ್ಷಮೆ ಕೇಳುವುದು ಬೇಡ. ನನ್ನ ತಾಯಿಗೆ ಕ್ಷಮೆ ಕೇಳುವ ಬದಲು ಚಾಮುಂಡಿ ತಾಯಿ, ಸೀತಾ ಮಾತೆಗೆ ಕ್ಷಮೆ ಕೇಳಲಿ. ಸ್ತ್ರೀ ಕುಲದ ಬಗ್ಗೆ ಗೌರವವಿದ್ದರೆ ತನ್ನ ತಾಯಿ ಬಗ್ಗೆ ಆಡಿರುವ ಮಾತು ಹಿಂಪಡೆದು ಕ್ಷಮೆ ಕೇಳಲಿ ಎಂದರು.
ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸುಮ್ಮನಿರಬೇಕಾ?
ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡುತ್ತಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಅಹಿಂದ ನಾಯಕರು, ಮಲ್ಲಿಕಾರ್ಜುನ ಖರ್ಗೆ ಸೇರಿ ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಇಷ್ಟೆಲ್ಲಾ ಆದರೂ ನಾವು ಸುಮ್ಮನಿರಬೇಕೇ? ಎಂದು ಪ್ರಶ್ನಿಸಿದರು.
ನನ್ನ ತಾಯಿ ಕ್ಷಮಿಸಿದರೂ ನಾನು ಪ್ರತಾಪ್ ಸಿಂಹನ ಕ್ಷಮಿಸಲ್ಲ:
ತಾವು ಎಂದಿಗೂ ಪ್ರತಾಪ್ ಸಿಂಹ ಅವರ ಬಗ್ಗೆ ವೈಯಕ್ತಿಕ ವಿಚಾರಕ್ಕೆ ಹೋದವನಲ್ಲ. ಆದರೆ, ರಾಜಕೀಯವಾಗಿ ಆರೋಪಿಸಿದರೆ ನನ್ನ ತಂದೆ ವಿಚಾರವಾಗಿ ಹೇಳಿಕೆ ನೀಡಿದರು. ಆಗಲೂ ನಾನು ನನ್ನ ಮಿತಿ ದಾಟಲಿಲ್ಲ. ನನ್ನ ತಾಯಿ ಕ್ಷಮಿಸಿದರೂ ನಾನು ಮಾತ್ರ ಪ್ರತಾಪ್ ಸಿಂಹನನ್ನು ಕ್ಷಮಿಸುವುದಿಲ್ಲ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
