ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ಅವರು, ಡಿಸೆಂಬರ್ 8ಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಉತ್ತರ ಕರ್ನಾಟಕದ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಗಂಭೀರವಾಗಿಲ್ಲ ರಾಜಕೀಯ ನಾಯಕರ ವೈಯಕ್ತಿಕ ನಿಂದನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರವಾಡ (ಅ.25): ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಡಿಸೆಂಬರ್ 8ರ ದಿನಾಂಕ ನಿಗದಿಪಡಿಸಲಾಗಿದೆ ಎಂದು ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಬೆಳಗಾವಿಯಲ್ಲಿ ನಡೆಯಲಿರುವ ಈ ಅಧಿವೇಶನದ ತಯಾರಿಗಾಗಿ ಮುಂದಿನ ವಾರ ಬೆಳಗಾವಿ ಡಿಸಿ ಜೊತೆ ಸಭೆ ನಡೆಸುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಜೊತೆ ಚರ್ಚಿಸಿ ಅವರ ಸಮ್ಮತಿ ಪಡೆದಿದ್ದೇನೆ ಎಂದರು.

ಉತ್ತರ ಕರ್ನಾಟಕ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಸೀರಿಯೆಸ್ ಇಲ್ಲ:

ಉತ್ತರ ಕರ್ನಾಟಕದ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಸೀರಿಯಸ್ ಆಗಿಲ್ಲ. ದಕ್ಷಿಣ ಕರ್ನಾಟಕದ ಶಾಸಕರು ಮಾತ್ರ ಅಭಿವೃದ್ಧಿ ಕುರಿತು ಮಾತನಾಡುತ್ತಾರೆ. ಪ್ರತಿ ಬುಧವಾರ, ಗುರುವಾರ ಉತ್ತರ ಕರ್ನಾಟಕದ ಸಮ್ಯಸ್ಯೆಗಳ ಬಗ್ಗೆ ಮಾತನಾಡಲು ಪಿಕ್ಸ್ ಮಾಡಲಾಗಿದೆ. ಆದರೆ ಯಾವೊಬ್ಬ ಶಾಸಕರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ದಿನಗಳಲ್ಲಿ ಶಾಸಕರಿಗೆ ಸರ್ಕ್ಯೂಲರ್ ಕಳುಹಿಸುತ್ತೇನೆ. ಈ ಬಾರಿ ಉತ್ತರ ಕರ್ನಾಟಕದ ಚರ್ಚೆಯಲ್ಲಿ ನಿರ್ಲಕ್ಷ್ಯ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಸಭಾಪತಿ, ಶಾಸಕರಿಗೆ ಬರಹದಲ್ಲಿ ಸೂಚನೆ ನೀಡಿ ನಂತರ ಮಾಧ್ಯಮಗಳಿಗೆ ಬಿಡುಗದೆ ಮಾಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯರಿಗೂ ಬರಹದಲ್ಲಿ ಸೂಚನೆ ನೀಡುವುದಾಗಿ ತಿಳಿಸಿದರು.

ಎಲ್ಲಿಯವರೆಗೆ ದುಡ್ಡು ಕೊಟ್ಟು ಮತ ಹಾಕಿಸಿಕ್ಕೊಳ್ಳೋರು, ದುಡ್ಡು ತಗೊಂಡು ಮತ ಹಾಕೋರು ಇರೋವರೆಗೂ ಪ್ರಜಾಪ್ರಭುತ್ವ ದಲ್ಲಿ ಕೆಳೋದು ತಪ್ಪು ಅನಿಸುತ್ತೆ. ಕಾಲ ಸುಧಾರಣೆ ಮಾಡಬೇಕಿದೆ. ನಮ್ಮಿಂದ ಸುಧಾರಣೆ ಆಗಲ್ಲ. ಪ್ರಶ್ನೆ ಕೇಳಿದ ಶಾಸಕರೆ ಒಂದು ನಿಮಿಷದಲ್ಲಿ ಓಡಿ ಹೋಗ್ತಾರೆ, ಸದ್ಯ ಅಭಿವೃದ್ಧಿಯಲ್ಲಿ ಬಹಳ ಕಷ್ಟದ ಕೆಲಸ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಭಾಪತಿ ಹೇಳಿದ್ದೇನು?

ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಭಾಪತಿ ಅವರು, ನವೆಂಬರ್ ಕ್ರಾಂತಿಯೋ, ಡಿಸೆಂಬರ್ ಕ್ರಾಂತಿಯೋ ಆಗಲಿ ಕ್ರಾಂತಿ ಮಾಡುವವರೂ ಮಾಡಿಸಿಕೊಳ್ಳುವವರೂ ಇದ್ದಾರೆ. ಕಣ್ಣಾರೆ ನೋಡಿಕೊಂಡು ಹೋಗುವುದು ಮಾತ್ರ ನಮ್ಮ ಕೆಲಸ. ಯಾಕೋ ಈ ನಡವಳಿಕೆಗಳು ಸರಿ ಅನಿಸ್ತಾ ಇಲ್ಲ ದಿನನಿತ್ಯ ಮಾಧ್ಯಮಗಳಲ್ಲಿ ಗುರುತರ ಸಮಸ್ಯೆಗಳನ್ನು ಬಿಟ್ಟು ಕೇವಲ ವೈಯಕ್ತಿಕ ಚರ್ಚೆಗಳೇ ನಡೆಯುತ್ತಿವೆ ಎಂದು ಆರೋಪಿಸಿದ ಸಭಾಪತಿ, ಯಾರೇ ಆಗಲಿ ವಿನಾಕಾರಣ ಚರ್ಚೆ ಮಾಡಬಾರದು. ರಾಜ್ಯದ ಜನರ ಪರವಾಗ ಬೇಕಾದಷ್ಟು ಕೆಲಸಗಳಿವೆ, ಅದರ ಬಗ್ಗೆ ಮಾತನಾಡಬೇಕು. ಸಭಾಪತಿಯಾಗಿ ಹೇಳುವುದು ನನ್ನ ಕರ್ತವ್ಯ ಎಂದರು.

ಮನುಷ್ಯತ್ವ ಇದ್ದವರು ಇಂತಹ ಮಾತುಗಳನ್ನಾಡ್ತಾರಾ?

ಇನ್ನು ಪ್ರತಾಪ್ ಸಿಂಹ, ಪ್ರದೀಪ್ ಈಶ್ವರ ಪರಸ್ಪರ ನಿಂದನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಅವರು, ಮನುಷ್ಯತ್ವ ಇದ್ದವರು ಇಂತ ಮಾತಗಳನ್ನ ಮಾತಾಡ್ತಾರಾ? ತಿಳಕೋಬೇಕು ಶಾಸಕರಾದವರು ಮಾದರಿಯಾಗಬೇಕು. ಶಾಸಕರಾದವರು ಎನ್ ಮಾತನಾಡಬೇಕು ಅನ್ನೋದನ್ನ ಕಲಿಯಬೇಕು. ಸಮಾಜದಲ್ಲಿ ಒಳ್ಳೆಯದನ್ನ ಮಾಡುವ ಒಂದು ಸೌಜನ್ಯ ಶಾಸಕರುಗಳಿಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.