ಕಾಂಗ್ರೆಸ್‌ನ ಮತಗಳ್ಳತನ ಆರೋಪವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಳ್ಳಿಹಾಕಿದ್ದಾರೆ. ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೇರಳದಲ್ಲಿ ಮೃತಪಟ್ಟ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡಿರುವುದನ್ನು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ (ಆ.10): ದೇಶದಲ್ಲಿ ತನ್ನದೇ ಆದ ಕಾನೂನು ಇದೆ. ಚುನಾವಣೆ ಜರುಗಿದ 14 ತಿಂಗಳ ಬಳಿಕ ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್‌ನವರು ಮತಗಳ್ಳತನ ಆರೋಪ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು. ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡುತ್ತಿರುವುದು ಬೋಗಸ್ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಕುರಿತ ಕಾಂಗ್ರೆಸ್ ಆರೋಪ ನಿರಾಧಾರ. ರಾಹುಲ್ ಗಾಂಧಿ ಅಪ್ರಬುದ್ಧ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಭೂಕುಸಿತ ಮತ್ತು ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿ, ಅದು ಪ್ರಿಯಾಂಕಾ ಗಾಂಧಿ ಲೋಕಸಭಾ ಕ್ಷೇತ್ರ. ಈ ಹಿಂದೆ ರಾಹುಲ್ ಗಾಂಧಿ ಕ್ಷೇತ್ರವಾಗಿತ್ತು. ಇದೀಗ ಅವರನ್ನು ಮೆಚ್ಚಿಸಲು ಕುರ್ಚಿ ಉಳಿಸಿಕೊಳ್ಳಲು ಸಿಎಂ-ಡಿಸಿಎಂ ಇಲ್ಲಿನ ಅನುದಾನವನ್ನು ಅಲ್ಲಿಗೆ ಕೊಡುತ್ತಿದ್ದಾರೆ. ಇಲ್ಲಿನ ಬಡವರಿಗೆ ಸಲ್ಲಬೇಕಾದ ಅನುದಾನವನ್ನು ಅಲ್ಲಿಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಆನೆ ದಾಳಿಯಾದರೆ ₹5 ಲಕ್ಷ ಪರಿಹಾರ ನೀಡುವ ರಾಜ್ಯ ಸರ್ಕಾರ, ಕೇರಳ ರಾಜ್ಯದಲ್ಲಿ ಕುಟುಂಬದ ಮೇಲೆ ದಾಳಿ ಮಾಡಿದ ಆನೆ ಕರ್ನಾಟಕದ್ದು ಎಂದು ಹೇಳಿ ₹15 ಲಕ್ಷ ಪರಿಹಾರ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ದಾಳಿ ಮಾಡಿದ ಆನೆ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು.
