Pawan Kalyan Chikkaballapur visit: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರ ಹುಟ್ಟುಹಬ್ಬದ ಕಾರ್ಯಕ್ರಮಕ್ಕಾಗಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ,  ಅಹಿತಕರ ಘಟನೆ ತಡೆಯಲು ಜಿಲ್ಲಾ ಪೊಲೀಸರು 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿ ಭಾರೀ ಭದ್ರತೆ

ಚಿಂತಾಮಣಿ (ಅ.5): ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಾಳೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ಕಾಲ್ತುಳಿತ ದುರಂತ ತಪ್ಪಿಸಲು ಭಾರೀ ಭದ್ರತಾ ಕ್ರಮ:

ಇತ್ತೀಚೆಗೆ ಕರೂರು ಮತ್ತು ಆರ್‌ಸಿಬಿ ಕಾಲ್ತುಳಿತದಂತಹ ದುರಂತಗಳು ನಡೆದಿರುವ ಹಿನ್ನೆಲೆ ನಮ್ಮ ಜಿಲ್ಲೆಯಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಾರ್ಯಕ್ರಮದ ಸುರಕ್ಷತೆಗಾಗಿ ಬಿಗಿ ಭದ್ರತಾ ಕ್ರಮಗಳ ಕುರಿತು ಎಚ್ಚರಿಕೆ ವಹಿಸಲಾಗಿದೆ ಎಂದರು. ಕಾರ್ಯಕ್ರಮ ಕುರಿತಂತೆ ಈಗಾಗಲೇ ಆಯೋಜಕರೊಂದಿಗೆ ಮೂರು ಬಾರಿ ಸಭೆ ನಡೆಸಲಾಗಿದ್ದು, ಸತತ 17 ದಿನಗಳಿಂದ ಸಂಪರ್ಕದಲ್ಲಿದ್ದೇವೆ. ಅಧಿಕಾರಿಗಳೊಂದಿಗೂ ಹಲವು ಸಭೆಗಳನ್ನು ನಡೆಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದರು.

ಸ್ಫೋಟಕ, ಮಾದಕ ವಸ್ತುಗಳ ಸಂಪೂರ್ಣ ನಿಷೇಧ:

ಕಾರ್ಯಕ್ರಮ ನಡೆಯುವ ವೇಳೆ ಸ್ಪೋಟಕ ವಸ್ತುಗಳು ಮತ್ತು ಮಾದಕ ದ್ರವ್ಯಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ 500 ಪೊಲೀಸ್ ಪೇದೆಗಳು, 6 ಡಿವೈಎಸ್ಪಿಗಳು, 30 ಇನ್ಸ್‌ಪೆಕ್ಟರ್‌ಗಳು, 50 ಪಿಎಸ್‌ಐಗಳು, 4 ಕೆಎಸ್‌ಆರ್‌ಪಿ ತುಕಡಿಗಳು, 6 ಡಿಎಆರ್ ತುಕಡಿಗಳು ಮತ್ತು 3 ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.