ಹೊಸ ಜಿಎಸ್‌ಟಿ ದರ ಘೋಷಣೆಯಿಂದ ಕಾಗದ ಮತ್ತು ಕಾಗದ ಉತ್ಪನ್ನಗಳ ಮೇಲಿನ ತೆರಿಗೆ ಗೊಂದಲ ಹೆಚ್ಚಾಗಿದ್ದು, ವರ್ತಕರು ಮತ್ತು ಗ್ರಾಹಕರಿಗೆ ಹೊರೆಯಾಗಲಿದೆ. ಕಾಗದ ಮತ್ತು ಕಾಗದ ಉತ್ಪನ್ನಗಳನ್ನು ಶೇ.5 ಜಿಎಸ್ಟಿ ದರದಡಿ ತರಬೇಕೆಂದು ಕರ್ನಾಟಕ ಕಾಗದ ಮತ್ತು ಲೇಖನ ಸಾಮಗ್ರಿಗಳ ಸಂಘ ಒತ್ತಾಯಿಸಿದೆ.

ಬೆಂಗಳೂರು (ಸೆ.12): ಕಾಗದಗಳ ಮೇಲಿನ ಹೊಸ ಜಿಎಸ್‌ಟಿ ದರ ಘೋಷಣೆ ಗೊಂದಲಕಾರಿಯಾಗಿದ್ದು, ವರ್ತಕರು ಹಾಗೂ ಗ್ರಾಹಕರಿಗೆ ಹೊರೆಯಾಗಲಿದೆ. ಸರ್ಕಾರ ಇದನ್ನು ಪರಿಷ್ಕರಿಸಿ ಕಾಗದ ಮತ್ತು ಕಾಗದ ಉತ್ಪನ್ನಗಳನ್ನು ಶೇ.5 ಜಿಎಸ್ಟಿ ದರದಡಿ ತರಬೇಕು ಎಂದು ಕರ್ನಾಟಕ ಕಾಗದ ಮತ್ತು ಲೇಖನ ಸಾಮಗ್ರಿಗಳ ಸಂಘ ಒತ್ತಾಯಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರವೀಣ್, ವಿದ್ಯಾರ್ಥಿಗಳ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಹೊಸ ಜಿಎಸ್‌ಟಿ ದರ ತೀರ್ಮಾನ ಕೈಗೊಳ್ಳಲಾಗಿದ್ದರೂ ಜಾರಿಗೆ ಬಂದ ನಿಯಮಗಳು ಆಶಯಕ್ಕೆ ವಿರುದ್ಧವಾಗಿ ಪರಿಣಾಮ ಬೀರುತ್ತಿವೆ ಎಂದರು.

ಪ್ರಸ್ತುತ ಕಾಗದ ಮತ್ತು ಕಾಗದದ ಫಲಕಗಳು (ಪೇಪರ್‌ಬೋರ್ಡ್‌) ಶೇ.18 ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ. ಕೆಲ ಕಾಗದದ ಉತ್ಪನ್ನಗಳು ಶೇ.18 ಜಿಎಸ್‌ಟಿಗೆ ಬಂದರೆ, ಪ್ಯಾಕೇಜಿಂಗ್ ಕಾಗದ ಸಾಮಗ್ರಿ ಶೇ.5 ಜಿಎಸ್‌ಟಿ ವ್ಯಾಪ್ತಿಗೆ, ನೋಟ್‌ಬುಕ್ ಹಾಗೂ ಪಠ್ಯಪುಸ್ತಕಗಳು ಶೂನ್ಯ ದರದಲ್ಲಿ ಬರುತ್ತಿವೆ.

ನೋಟ್‌ಬುಕ್ ತಯಾರಕರು ಕಾಗದವನ್ನು ಶೇ.18 ತೆರಿಗೆ ಪಾವತಿಸಿ ಖರೀದಿಸಬೇಕಾಗಿದೆ. ಆದರೆ ಅಂತಿಮ ಉತ್ಪನ್ನ (ನೋಟ್‌ಬುಕ್/ಪಠ್ಯಪುಸ್ತಕ) ಶೂನ್ಯ ದರದಡಿಯಲ್ಲಿ ಬರುತ್ತಿರುವುದರಿಂದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್ ಮಾಡಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ತಯಾರಕರು ಖರೀದಿಯಲ್ಲಿ ಪಾವತಿಸಿದ ತೆರಿಗೆ ನೇರವಾಗಿ ಅಂತಿಮ ಉತ್ಪನ್ನದ ಬೆಲೆಯಲ್ಲಿ ಸೇರುತ್ತದೆ ಎಂದರು.

ಈ ಸ್ಥಿತಿ ಮುಂದುವರಿದರೆ ಸೆ.21ರ ನಂತರದ ಸ್ಟಾಕ್ ಮೇಲೂ ಇನ್ಪುಟ್ ಕ್ರೆಡಿಟ್ ಸಿಗದ ಕಾರಣ, ತಯಾರಕರು ಬೆಲೆ ಹೆಚ್ಚಿಸಲು ಮುಂದಾಗುತ್ತಾರೆ. ಕೊನೆಗೆ ಇದರ ಹೊರೆ ಗ್ರಾಹಕರ ಮೇಲೆ ನೇರವಾಗಿ ಬೀಳುತ್ತದೆ ಎಂದರು.

ಕಾಗದ ಕಾರ್ಖಾನೆಗಳು ಕಾಗದದ ಅಂತಿಮ ಉತ್ಪನ್ನಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅಂದರೆ, ಉತ್ಪಾದನೆಯಾದ ಕಾಗದ ಜಾಹೀರಾತಿಗೆ ಹೋಗುತ್ತದೋ, ಪಠ್ಯಕ್ಕೆ ಹೋಗುತ್ತದೋ ಎಂದು ಹೇಳುವುದು ಕಷ್ಟ ಎನ್ನುತ್ತಾರೆ. ಹೀಗಾಗಿ ಅವರು ಶೂನ್ಯ ದರದ ಪೂರೈಕೆ ನೀಡುವುದಿಲ್ಲ. ಇದರಿಂದ ತಯಾರಕರು ಮೊದಲು ಶೇ.18 ತೆರಿಗೆ ಪಾವತಿಸಿ, ಬಳಿಕ ರಿಫಂಡ್‌ಗೆ ಅರ್ಜಿ ಹಾಕಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ರಿಫಂಡ್‌ಗೆ 6-8 ತಿಂಗಳು ಕಾಲಾವಧಿ ಹಿಡಿಯುತ್ತದೆ. ಇದರಿಂದ ಕಾಗದ ಉತ್ಪನ್ನ ತಯಾರಕರು ಹಾಗು ಮಾರಾಟಗಾರಿಗೆ ತೊಂದರೆ ಉಂಟಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಪ್ರವೀಣ್, ಉಪಾಧ್ಯಕ್ಷರಾದ ಪ್ರದೀಪ್, ಕಾರ್ಯದರ್ಶಿ ಶಿವಾರಾಮು ಸೇರಿ ಇತರರಿದ್ದರು.