ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಿಂದಾಗಿ ರಾಜ್ಯದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಹಾವೇರಿಯಲ್ಲಿ ನಡೆದ ಘಟನೆಯೊಂದರಲ್ಲಿ, ಬಸ್‌ ಕಂಡಕ್ಟರ್‌ಗೂ ಒಳಗೆ ಹತ್ತಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಸಾರಿಗೆ ಇಲಾಖೆಯ ಮೇಲೆ ಒತ್ತಡ ಹೆಚ್ಚಿಸಿದೆ.

ಹಾವೇರಿ (ಆ.7): ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದ ಸಾರಿಗೆ ಬಸ್‌ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಒಳಗೆ ನಿಲ್ಲಲು ಜಾಗವಿಲ್ಲದಷ್ಟು ಜನದಟ್ಟಣೆಯಿಂದ ಮಕ್ಕಳು, ವೃದ್ಧರು ಬಸ್‌ ಹತ್ತಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸನ್ನಿವೇಶಕ್ಕೆ ತಾಜಾ ಉದಾಹರಣೆಯಾಗಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಘಟನೆಯೊಂದು ನಡೆದಿದೆ.

ರಾಣೇಬೆನ್ನೂರು ಬಸ್‌ ನಿಲ್ದಾಣದಿಂದ ಸಂಜೆ ಹಾವೇರಿಗೆ ತೆರಳುವ ಬಸ್‌ಗೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ, ನೂರಾರು ಪ್ರಯಾಣಿಕರು ಒಂದೇ ಬಸ್‌ಗೆ ಮುಗಿಬಿದ್ದರು. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಪರಿಣಾಮ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ, ಬಸ್‌ನಲ್ಲಿ ಕಾಲಿಡಲು ಜಾಗವಿಲ್ಲದ ಸ್ಥಿತಿ ಉಂಟಾಯಿತು. ಆಶ್ಚರ್ಯಕರವಾಗಿ, ಬಸ್‌ ಕಂಡಕ್ಟರ್‌ಗೂ ಒಳಗೆ ಹತ್ತಲು ಸಾಧ್ಯವಾಗದೇ, ಹೊರಗೆ ನಿಂತು ನೂಕುನುಗ್ಗಲಿನಲ್ಲಿ ಪರಿತಪಿಸುವಂತಾಯಿತು. ಘಟನೆಯ ದೃಶ್ಯ ಸಾರ್ವಜನಿಕರ ಮೊಬೈಲ್‌ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಪ್ರಯಾಣಿಕರ ಜನದಟ್ಟಣೆಯಿಂದ ಕಂಗಾಲಾದ ಕಂಡಕ್ಟರ್:

ಬಸ್‌ನ ಒಳಗೆ ಜಾಗವಿಲ್ಲದೇ ಬಾಗಿಲ ಬಳಿಯೇ ನಿಂತು ಟಿಕೆಟ್‌ ಕೊಡಲು ಪರದಾಡಿದ ದೃಶ್ಯ ಸಾರ್ವಜನಿಕರ ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿದೆ. ಈ ಘಟನೆಯಿಂದ ಸಾರಿಗೆ ಇಲಾಖೆಯ ಮೇಲೆ ಒತ್ತಡ ಹೆಚ್ಚಿದ್ದು, ಹೆಚ್ಚಿನ ಬಸ್‌ಗಳನ್ನು ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆತರೂ, ಬಸ್‌ಗಳ ಕೊರತೆಯಿಂದ ಉಂಟಾಗಿರುವ ಈ ಗೊಂದಲಕ್ಕೆ ಶೀಘ್ರ ಪರಿಹಾರಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ