ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ, ಮೂಲ ಜಾತಿಯ ಆಧಾರದಲ್ಲಿ ದೊರೆಯುತ್ತಿದ್ದ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಧರ್ಮ ಬದಲಾಯಿಸಿದವರು ತಮ್ಮ ಹೊಸ ಧರ್ಮದಲ್ಲಿಯೇ ಗುರುತಿಸಿಕೊಳ್ಳಬೇಕಾಗುತ್ತದೆ, ಹಳೆಯ ಜಾತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದರು.

ಕೊಪ್ಪಳ (ಸೆ.18) : ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ, ನಂತರ ಆತನಿಗೆ ಮೂಲ ಜಾತಿಯ ಆಧಾರದಲ್ಲಿ ದೊರೆಯುತ್ತಿದ್ದ ಸರ್ಕಾರಿ ಸೌವಲತ್ತುಗಳು ದೊರೆಯಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಬೇರೆ ಧರ್ಮದಲ್ಲಿದ್ದುಕೊಂಡು ತಮ್ಮ ಜಾತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ:

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಡಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಅವರು ತಮ್ಮ ಧರ್ಮವನ್ನೇ ಬದಲಾಯಿಸಿಕೊಂಡಿರುವುದರಿಂದ ಅದೇ ಧರ್ಮದಲ್ಲಿ ಗುರುತಿಸಿಕೊಳ್ಳಬೇಕಾಗುತ್ತದೆ. ಆ ಧರ್ಮದಲ್ಲಿದ್ದುಕೊಂಡು ಹಿಂದಿನ ತಮ್ಮ ಜಾತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದರು.

ಜಾತಿಗಳ ಮುಂದೆ ಕ್ರಿಶ್ಚಿಯನ್ ಧರ್ಮ ಸೇರಿಸಿರುವುದು ಆಯೋಗ ಚರ್ಚಿಸಿ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಇದಕ್ಕೆ ಬೇಡಿಕೆ ಬಂದಿರುವುದರಿಂದ ಹಾಗೆ ಮಾಡಲಾಗಿದೆಯೇ ಹೊರತು ಸರ್ಕಾರದಿಂದಲ್ಲ. ಎಲ್ಲ ರೀತಿಯಿಂದಲೂ ಬರೆದುಕೊಳ್ಳುವುದಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಎಲ್ಲದಕ್ಕೂ ಅವಕಾಶವಿದೆ. ಯಾರಿಗೆ ಯಾವುದು ಬೇಕು ಅದರಲ್ಲಿ ತಮ್ಮ ಜಾತಿ ಮತ್ತು ಧರ್ಮ ಭರ್ತಿ ಮಾಡುತ್ತಾರೆ. ಇದೆಲ್ಲವನ್ನು ನಂತರ ಆಯೋಗ ಪರಿಶೀಲಿಸುತ್ತದೆ ಎಂದು ತಿಳಿಸಿದರು.

ಬಿಜೆಪಿ ನಾಯಕರಿಗೆ ಹುಚ್ಚು ಹಿಡಿದಿದೆ: ತಂಗಡಗಿ 

ಬಿಜೆಪಿ ನಾಯಕರಿಗೆ ಹುಚ್ಚು ಹಿಡಿದಿದ್ದರಿಂದ ಧರ್ಮ-ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆತುರದ ನಿರ್ಧಾರ ಕೈಗೊಳ್ಳುತ್ತಾರೆ. ಪರಾಮರ್ಶೆ ಮಾಡುವುದಿಲ್ಲ. ಜನರು ಬೆಳಗ್ಗೆ-ರಾತ್ರಿ ಏನು ತಿನ್ನಬೇಕೆಂದು ಇವರು ನಿರ್ಧರಿಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಯಾರು ಏನೇ ಹೇಳಲಿ, ತಮ್ಮ ಜಾತಿ ಮತ್ತು ಧರ್ಮವನ್ನೇ ಜನರು ಬರೆಯಿಸಲಿ ಎಂದರು.