ಡಿಸಿಎಂ ಡಿಕೆ ಶಿವಕುಮಾರ್ ಅವರ 'ಕರಿ ಟೋಪಿ' ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಶ್ರೀವತ್ಸ, ಮುಂದಿನ ವಿಧಾನಸಭಾ ಅಧಿವೇಶನಕ್ಕೆ ಆರ್‌ಎಸ್‌ಎಸ್‌ ಗಣವೇಷದಲ್ಲೇ ಬರುವುದಾಗಿ ಸವಾಲು ಹಾಕಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್‌ ನಿಷೇಧದ ಕುರಿತು ಪತ್ರ ಬರೆದ ಪ್ರಿಯಾಂಕ್ ಖರ್ಗೆಯವರನ್ನೂ ತೀವ್ರವಾಗಿ ಟೀಕಿಸಿದ್ದಾರೆ.

ಮೈಸೂರು (ಅ.13): ಮುಂದಿನ ವಿಧಾನಸಭಾ ಅಧಿವೇಶನಕ್ಕೆ ಗಣವೇಷದಲ್ಲೇ ಬರ್ತೀವಿ, ಏನ್ ಮಾಡ್ತೀರಿ? ನಮ್ಮನ್ನ ತಡೆಯಲು ಆಗುತ್ತಾ? ಎಂದು ಶಾಸಕ ಶ್ರೀವತ್ಸ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸವಾಲು ಹಾಕಿದರು.

ನಿನ್ನೆ ಬಿಜೆಪಿ ಶಾಸಕ ಮುನಿರತ್ನ ಅವರನ್ನ ಉದ್ದೇಶಿಸಿ 'ಏಯ್ ಕರಿ ಟೋಪಿ ಬಾ ಇಲ್ಲಿ' ಎಂಬ ಡಿಕೆ ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಶ್ರೀವತ್ಸ ಅವರು, ನೀವು ಅಧಿಕಾರದಲ್ಲಿ ಇರೋದು ಕೇವಲ ಎರಡೂವರೆ ವರ್ಷ. ಆ ನಂತರ ನಾವೇ ಅಧಿಕಾರಕ್ಕೆ ಬರ್ತೀವಿ. ಆರ್‌ಎಸ್‌ಎಸ್ ಚಟುವಟಿಕೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ರೀವತ್ಸ ಕಿಡಿಕಾರಿದರು.

ನಮಸ್ತೆ ಸದಾ ವತ್ಸಲೇ ಎಂದ ಬಾಯಲ್ಲಿ 'ಕರಿ ಟೋಪಿ'

ಸದನದಲ್ಲಿ 'ನಮಸ್ತೆ ಸದಾ ವತ್ಸಲೇ..' ಎಂದ ಹೇಳಿದ ಬಾಯಲ್ಲಿ 'ಕರಿ ಟೋಪಿ' ಎಂದು ಕರೆದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಶ್ರೀವತ್ಸ ಅವರು, ಕರಿ ಟೋಪಿ ಎಂದಂತೆ ಶುಕ್ರವಾರದವರನ್ನು 'ಬಿಳಿ ಟೋಪಿ' ಎಂದು ಕರೆಯುವ ಧೈರ್ಯ ತಾಕತ್ತು ನಿಮಗೆ ಇದೆಯೇ? ಈ ರೀತಿ ಕರೆಯುವ ಧೈರ್ಯ ನಿಮಗೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ ಅವರು, ಮೊದಲಿನ ತಮ್ಮ ಹೇಳಿಕೆಯನ್ನು ಮುಚ್ಚಿಕೊಳ್ಳಲು ಈಗ ಈ ರೀತಿ ಮಾತನಾಡುತ್ತಿದ್ದೀರ? ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆ ಪತ್ರ ಮೂರ್ಖತನದ ಪರಮಾವಧಿ:

ಅರೆಸ್ಸೆಸ್ ನಿಷೇಧ ಕುರಿತಂತೆ ಪ್ರಿಯಾಂಕ ಖರ್ಗೆಯವರು ಸಿಎಂ ಸಿದ್ದರಾಮಯ್ಯಗೆ ಬರೆದಿರುವ ಪತ್ರ 'ಮೂರ್ಖತನದ ಪರಮಾವಧಿ' ಎಂದು ಕರೆದಿರುವ ಶ್ರೀವತ್ಸ ಅವರು, ಈ ಪತ್ರಕ್ಕೆ ಸಿಎಂ ರಿಪ್ಲೇ ಇನ್ನೂ ಮೂರ್ಖತನದ್ದು ಎಂದು ಟೀಕಿಸಿದರು. ಪ್ರಿಯಾಂಕ ಖರ್ಗೆ ಒಂದು ಗಂಟೆ ಶಾಖೆಯಲ್ಲಿ ಕುಳಿತರೆ, ಆರ್‌ಎಸ್‌ಎಸ್ ಚಟುವಟಿಕೆ ಎಂದರೆ ಏನೆಂದು ತಿಳಿಯುತ್ತದೆ. ಆರೆಸ್ಸೆಸ್ ಎಂದರೆ ಖರ್ಗೆ ಅವರಿಗೆ ಯಾಕೆ ಅಲರ್ಜಿ? ಎಂದು ಪ್ರಶ್ನಿಸಿದರು.

ನಾವು ಅಧಿಕಾರಕ್ಕೆ ಬಂದ್ರೆ ನಿಮ್ಮಪ್ಪನಂಗೆ ಮಾಡ್ತೀವಿ ನೋಡ್ತೀರಿ!

ನೀವು ಅಧಿಕಾರದಲ್ಲಿರೋದೇ ಎರಡು ವರ್ಷ. ಅನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ. ಈಗ ನೀವು ಏನು ಮಾಡ್ತಿದ್ದೀರೋ ನಾವು ಅಧಿಕಾರಕ್ಕೆ ಬಂದಾಗ ನಿಮ್ಮ ಅಪ್ಪನಂಗೆ ಮಾಡ್ತೀವಿ ನೋಡ್ತೀರಿ. ಸಂಘದ ಗಣ ವೇಷದಲ್ಲೇ ವಿಧಾನಸಭೆಗೆ ಬರುತ್ತೇವೆ ಏನು ಮಾಡುತ್ತೀರ? ಮನೆಮನೆಯಲ್ಲಿ ಶಾಖೆ ಮಾಡುತ್ತೇವೆ, ಹಿಂದುತ್ವದ ಬಗ್ಗೆ ಮಾತಾಡಿದ್ರೆ ಬ್ರೇನ್ ವಾಶ್? ಸಂವಿಧಾನದ ಬಗ್ಗೆ ಹೇಳೋದು ಬೇಡ್ವಾ? ಅಂಬೇಡ್ಕರ್ ಬಗ್ಗೆ ಹೇಳೋದು, ಅರ್ಥೈಸೋದು ಬ್ರೇನ್ ವಾಶ್ ಆಗಿದ್ದರೆ ನಿಮ್ಮ ಬಾಯಿಂದ 'ನಮಸ್ತೇ ಸದಾ ವತ್ಸಲೇ..' ಹೇಳಿದ್ದು ಏನು? ಮುಂದಿನ ಅಧಿವೇಶನಕ್ಕೆ ಗಣವೇಶದಲ್ಲೇ ಬರ್ತಿವಿ ಏನ್ ಮಾಡ್ತೀರೋ ನೋಡೋಣ ಎಂದು ಸವಾಲು ಹಾಕಿದರು.