Mysuru dasara 2025: ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿದರು. ನಾಳೆ ನಡೆಯಲಿರುವ ವಿಶ್ವವಿಖ್ಯಾತ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಕಲ ರೀತಿ ಸಜ್ಜಾಗಿದ್ದು, 6ನೇ ಬಾರಿಗೆ ಅಂಬಾರಿ ಹೊರಲಿರುವ ಅಭಿಮನ್ಯು

ಮೈಸೂರು (ಅ.1): ಮೈಸೂರು ಅರಮನೆಯಲ್ಲಿ ಸಾಂಪ್ರದಾಯಬದ್ಧ ಆಯುಧ ಪೂಜೆ ಬಹಳ ಸಡಗರದಿಂದ ಜರುಗಿತು. ಅರಸರ ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು. ಮತ್ತೊಂದೆಡೆ ನಾಳಿನ ವಿಜಯದಶಮಿ ಆಚರಣೆಗೆ ಸಾಂಸ್ಕೃತಿಕ ನಗರಿ ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 10ನೇ ಬಾರಿ ನವರಾತ್ರಿ ಪೂಜಾ ಕೈಂಕರ್ಯಗಳನ್ನು ಅರಮನೆಯಲ್ಲಿ ನೆರವೇರಿಸಿದರು. ಬೆಳಿಗ್ಗೆ 6 ಗಂಟೆಗೆ ಅರಮನೆಯಲ್ಲಿ ಚಂಡಿ ಹೋಮ ಶುರುವಾಗುವುದರೊಂದಿಗೆ ಆಯುಧ ಪೂಜೆ ಕಾರ್ಯಕ್ರಮಗಳು ಶರುವಾದವು.

ಇದನ್ನೂ ಓದಿ: ವಿಶ್ವ ವಿಸ್ಮಯವೀ ಮೈಸೂರಿನ ದಸರಾ ಹಬ್ಬ: ಚಾಮುಂಡೇಶ್ವರಿಯ ಅಂಬಾರಿ, ವೈಭವದ ದೃಶ್ಯಗಳು

ಬೆಳಿಗ್ಗೆ 7: 30 ರಿಂದ 7: 42 ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಅರಸರ ಖಾಸ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆ‌ ಸೇರಿದಂತೆ ರಾಜ ವಂಸಸ್ಥರು ಭಾಗಿಯಾದರು. ಬೆಳಿಗ್ಗೆ 10:35 ಕ್ಕೆ ಕಲ್ಯಾಣ ಮಂಟಪದಲ್ಲಿ ಅರಸರ ಪಟ್ಟದ ಕತ್ತಿ ಸೇರಿದಂತೆ ಖಾಸಾ ಆಯುಧಗಳಿಗೆ ಪೂಜೆ ನೆರವೇರಿಸಿದ ಯದುವೀರ್ ಅವರು ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ ಶ್ರೀಕಂಠ, ನಿಶಾನೆ ಆನೆ ಧನಂಜಯ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆ ಹಾಗೂ ರಾಜವಂಶಸ್ಥರು ಬಳಸುವ ವಾಹನಗಳಿಗೆ ಪುಷ್ಪಾರ್ಚನೆ ಮಾಡಿ ಪೂಜೆ ನೆರವೇರಿಸಲಾಯಿತು. ಈ ವೇಳೆ ಚಿನ್ನದ ಬಣ್ಣದ ರಾಜ ಪೋಷಾಕಿನಲ್ಲಿ ಯದುವೀರ್ ಕಂಗೊಳಿಸಿದರು.

ಮತ್ತೊಂದೆಡೆ ದಸರಾ ಗಜಪಡೆಗೆ ಮಾವುತ ಕಾವಾಡಿ ಪಡೆಗೆ ಕೇಂದ್ರ ಸರಚಿವ ಶೋಭಾಕರಂದ್ಲಾಜೆ ಉಪಹಾರ ನೀಡಿ ಸತ್ಕರಿಸಿದರು. ಪ್ರತಿವರ್ಷ ಇಂತಹ ಪದ್ದತಿ ನಡೆಸಿಕೊಂಡು ಬಂದಿರುವ ಅವರು, ಮಾವುತ ಕಾವಾಡಿಗಳಿಗೆ ತಾವೇ ಸ್ವತಃ ಹೋಳಿಗೆ ಬಡಿಸಿ ಖುಷಿಪಟ್ಟರು.

ಜಂಬೂ ಸವಾರಿಗೆ ಕ್ಷಣಗಣನೆ:

ಇನ್ನು ನಾಳಿನ ವಿಜಯ ದಶಮಿ ಆಚರಣೆಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, 6 ನೇ ಬಾರಿಗೆ ಅಂಬಾರಿ ಹೊರಲು ಅಭಿಮನ್ಯು ಆನೆ ತಯಾರಾಗಿದೆ. ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಜಿಲ್ಲಾಡಳಿತ ಕೂಡ ಸುಲಲಿತ ದಸರಾ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ. ಅರಮನೆ ಅಂಗಳದಲ್ಲಿ‌ 48 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು,, ಭದ್ರತೆಗಾಗಿ 6,184 ಪೊಲೀಸರನ್ನ ನಿಯೋಜಿಸಲಾಗಿದೆ. ಜನರ ಚಲನವಲನ ತಿಳಿಯಲು 30,614 ಸಿಸಿ ಕ್ಯಾಮರಾಗಳ ಬಳಕೆ ಮಾಡಲಾಗಿದೆ.

ಇದನ್ನೂ ಓದಿ: ಮೈಸೂರು ದಸರಾ: ಬಾನಂಗಳದಲ್ಲಿ ಡ್ರೋನ್‌ಗಳ ಚಿತ್ತಾರ, ಹುಲಿ ಕಲಾಕೃತಿಯಿಂದ ವಿಶ್ವದಾಖಲೆ

ಜಂಬೂ ಸವಾರಿ ವೀಕ್ಷಣೆಗೆ ಆಗಮಿಸುವ ನಾಡಿನ ಜನರಿಗೆ ಜಂಬೂ ಸವಾರಿ ರಸ ದೌತಣ ನೀಡಲು 58 ಸ್ಥಬ್ದ ಚಿತ್ರಗಳು ಹಾಗೂ 100ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ.

ಶರತ್ ಹಾಗೂ ಸ್ವಸ್ತಿಕ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು