ರಾಷ್ಟ್ರೀಯ ಸ್ವಯಂ ಸೇವಕರ ಸಂಘವು (RSS) ದೇಶದ ಸಂಪತ್ತು ಮತ್ತು ಬೆನ್ನೆಲುಬು ಎಂದು ಸಂಸದ ವಿ. ಸೋಮಣ್ಣ ಬಣ್ಣಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರಲ್ಲದೇ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂಥ ನಿರ್ಧಾರ ಎಂದು ಆರೋಪಿಸಿದರು.

ತುಮಕೂರು (ಅ.16): ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಈ ರಾಷ್ಟ್ರದ ಸಂಪತ್ತು, ದೇಶದ ಬೆನ್ನೆಲುಬು. ರಾಷ್ಟ್ರದ ಹಿತವನ್ನು ಕಾಪಾಡುವಲ್ಲಿ, ರಾಷ್ಟ್ರೀಯ ಭಾವನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರಲ್ಲಿ ಆರೆಸ್ಸೆಸ್ ತನ್ನದೇ ಆದ ಸಂದೇಶವನ್ನು, ಶ್ರಮ ಪಡುತ್ತಿದೆ ಎಂದು ಸಂಸದ ವಿ ಸೋಮಣ್ಣ ತಿಳಿಸಿದರು.

ನಾನೂ ಒಬ್ಬ ಸ್ವಯಂ ಸೇವಕ ಎಂದ ವಿ ಸೋಮಣ್ಣ

ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ಕಾರ್ಯಚಟುವಟಿಕೆಗೆ ರಾಜ್ಯ ಸರ್ಕಾರ ನಿರ್ಬಂಧ ತೆಗೆದುಕೊಂಡಿರುವ ವಿಚಾರ ಸಂಬಂಧ ಇಂದು ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್‌ನ ಪಥಸಂಚಲನಗಳು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುತ್ತವೆ. ಈ ಸಂಸ್ಥೆಯನ್ನು ಜಾಗೃತರಾಗಿ ನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯ. ನಾನೂ ಒಬ್ಬ ಸ್ವಯಂಸೇವಕ. ನಾನು ಭಾಗವಹಿಸುವುದಕ್ಕಿಂತ ಹೆಚ್ಚು ಸುತ್ತುತ್ತೇನೆ, ಎಲ್ಲೆಡೆ ಹೊಗುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರಿ ನೌಕರರು RSS ಚಟುವಟಿಕೆಯಲ್ಲಿ ಭಾಗವಹಿಸೋದನ್ನ ನಿಷೇಧಿಸಿ: ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಪತ್ರ

ಕಾಂಗ್ರೆಸ್ ಸರ್ಕಾರದ ವಿರುದ್ಧ ಸೋಮಣ್ಣ ಕಿಡಿ

ಆರೆಸ್ಸೆಸ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವವರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತೀರಾ? ಅವರದ್ದು ಡ್ರಾಮಾ; ಏನಿದ್ದರೂ ಜನರ ಗಮನ ಬೇರೆಡೆ ಸೆಳೆದು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹೀಗೆಲ್ಲ ಮಾಡ್ತಾರೆ. ಕಾಂಗ್ರೆಸ್‌ನವರು ಮಾಡ್ತಿರೋದೇನು ಹೊಸದಾ? ಅಥವಾ ಆರೆಸ್ಸೆಸ್ ಇವತ್ತಿಂದ ಶುರುವಾಗಿದೆಯಾ? ನೂರು ವರ್ಷಗಳಿಂದ ಹೀಗೆ ನಡೆಯುತ್ತಿದೆ. ಪುಣ್ಯತ್ಮರು ಯಾರೋ ಮಾಡೊಗಿದ್ದಾರೆ. ಅದನ್ನು ನಡೆಸುತಿದ್ದೇವೆ. ಅವರಿಗೆ(ಕಾಂಗ್ರೆಸ್) ಬೇರೆ ಏನೂ ಹೇಳೊಕೆ ಆಗೊದಿಲ್ಲ ಎಂದರು.

ಒಂದು ವರ್ಷ ಮೂರು ತಿಂಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಎಷ್ಟೆಲ್ಲ ಕೆಲಸ ಆಗಿದೆ. ನಿಮಗೇನು ದಾಡಿಯಾಗಿದೆ. ರಾಜ್ಯ ಸರ್ಕಾರ ಅಭಿವೃದ್ಧಿ ಮಾಡಿದ್ದರೆ ಇಂಥದೊಂದು ತೋರಿಸಲಿ. ಅಭಿವೃದ್ಧಿ ಕೆಲಸ ಬಿಟ್ಟು ಬರೀ ಗೂಬೆ ಕೂರಿಸೋ ಕೆಲಸ ಮಾಡ್ತಾರೆ. ಅಧಿಕಾರಕ್ಕೆ ಮೂರು ವರ್ಷ ಆಯ್ತು ಏನಾದರೂ ಅಭಿವೃದ್ಧಿ ಮಾಡಿದ್ದಾರಾ? ಭ್ರಷ್ಟಾಚಾರ, ಓಲೈಕೆ ಬಿಟ್ಟರೆ ಏನೂ ಮಾಡಿಲ್ಲ ಎಂದು ತಿರುಗೇಟು ನೀಡಿದರು.