ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದ್ದಾರೆ. ಗಣೇಶ ಮೆರವಣಿಗೆಗೆ ಅನುಮತಿ ಕಷ್ಟವಾಗಿದ್ದು, ಹಿಂದೂ ಹಬ್ಬಗಳಿಗೆ ಅಡೆತಡೆಗಳನ್ನು ಉಂಟುಮಾಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಚಿಕ್ಕಬಳ್ಳಾಪುರ (ಸೆ.10) : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದೂಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು.
ಮದ್ದೂರನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ವಿಚಾರವಾಗಿ ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ವಸಾಹತುಶಾಹಿ ರೀತಿ ಆಡಳಿತ ನಡೆಸುತ್ತಿದ್ದು, ಗಣೇಶ ವಿರ್ಸಜನೆಗೆ ಅನುಮತಿ ಕಷ್ಟವಾಗಿದೆ. ಒಂದು ಕೋಮಿಗೆ ಮಾತ್ರ ಎಲ್ಲದಕ್ಕೂ ಪರವಾನಿಗೆ ನೀಡಿದ್ದು,
ಬಹುಸಂಖ್ಯಾತ ಹಿಂದೂಗಳನ್ನು ಟಾರ್ಗೇಟ್ ಮಾಡಿದೆ. ಬ್ರಿಟಿಷರ ಆಳ್ವಿಕೆಯಲ್ಲಿಯೂ ಹಿಂದೂಗಳು ಹೋರಾಟ ಮಾಡಿ ಅಂತಿಮವಾಗಿ ಗಣೇಶ ಮೆರವಣಿಗೆಗಳನ್ನು ನಡೆಸುವ ಮೂಲಕ ತಮ್ಮ ಹಕ್ಕನ್ನು ಪಡೆದುಕೊಂಡರು. ಆಘಾತಕಾರಿಯಾಗಿ, ಸ್ವತಂತ್ರ ಭಾರತದಲ್ಲಿ, ಕಾಂಗ್ರೆಸ್ ಸರ್ಕಾರವು ಸಹ ಹಿಂದೂಗಳ ಧಾರ್ಮಿಕ ಹಬ್ಬಗಳ ಆಚರಣೆಯ ಸ್ವಾತಂತ್ರ್ಯಗಳನ್ನು ಕಿತ್ತುಕೊಂಡಿದೆ. ಇದು ತುಷ್ಟೀಕರಣ ರಾಜಕೀಯವಲ್ಲದೆ ಬೇರೇನೂ ಅಲ್ಲ ಎಂದು ಟೀಕಿಸಿದರು.
ಹಿಂದುಗಳಲ್ಲಿ ಭಯ ಹುಟ್ಟಿಸಲು ಕಾಂಗ್ರೆಸ್ ಯತ್ನ:
ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರವು ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಹಿಂದೂಗಳಲ್ಲಿ ಭಯ ಹುಟ್ಟಿಸುತ್ತಿದೆ. ಮಂಡ್ಯದಿಂದ ಸೇರಿ ಇತರ ಜಿಲ್ಲೆಗಳವರೆಗೆ, ಹಿಂದೂ ಹಬ್ಬಗಳು ಅಡೆತಡೆಗಳನ್ನು ಎದುರಿಸುತ್ತಿದ್ದರೆ. ಅದೇ ಸರ್ಕಾರ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಲು ಮುಂದಾಗಿದೆ. ಈ ಅಪಾಯಕಾರಿ ದ್ವಂದ್ವ ನೀತಿ ಕರ್ನಾಟಕವನ್ನು ಅಶಾಂತಿಯತ್ತ ತಳ್ಳುತ್ತಿದೆ ಎಂದು ಸುಧಾಕರ್ ಎಚ್ಚರಿಸಿದರು.
ಕರ್ನಾಟಕದ ಪರಿಸ್ಥಿತಿ ತೀವ್ರ ದುರದೃಷ್ಟಕರ ಮತ್ತು ಆತಂಕಕಾರಿ ಎಂದು ಕರೆದಿರುವ ಡಾ.ಸುಧಾಕರ್ ಅವರು, ಕಾಂಗ್ರೆಸ್‌ನ ವಿಭಜಕ ರಾಜಕೀಯವನ್ನು ಜನರು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಕರ್ನಾಟಕವನ್ನು ಭಯ ಮತ್ತು ತಾರತಮ್ಯದ ಯುಗಕ್ಕೆ ಮತ್ತೆ ಎಳೆಯುತ್ತಿದೆ. ಹಿಂದೂಗಳನ್ನು ಅನ್ಯಾಯವಾಗಿ ಗುರಿಯಾಗಿಸಲಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯ ಏಕತೆಯನ್ನು ಕಾಪಾಡಲು ಇದನ್ನು ವಿರೋಧಿಸಬೇಕು ಎಂದು ಒತ್ತಾಯಿಸಿದರು.
ಸ್ಪೀಕರ್ ಹಾಕಲು ಎಸ್ಪಿ ಅನುಮತಿ ಬೇಕು:
ನನ್ನ ಕ್ಷೇತ್ರದಲ್ಲೂ ಒಂದು ಸ್ಪೀಕರ್ ಹಾಕಿಕೊಳ್ಳಲು ಎಸ್ಪಿ ಅನುಮತಿ ಬೇಕು. ಕಾಂಗ್ರೆಸ್‌ಗೆ ಹಿಂದೂಗಳ ಮತ ಹಾಕಿಲ್ವ ಇಂತಹ ಪರಿಸ್ಥಿತಿ ಯಾವ ಕಾಲದಲ್ಲೂ ನೋಡಿಲ್ಲ. ವರ್ಷಕ್ಕೊಂದು ಆಗುವ ಹಬ್ಬಕ್ಕೆ ಅನುಮತಿ ಬೇಕಾ? ಕೋಮು ಗಲಭೆ ಹುಟ್ಟು ಹಾಕಿದ್ದು ಕಾಂಗ್ರೆಸ್ ಸರ್ಕಾರ, ಮುಸ್ಲಿಮರನ್ನನು ಶೇ.100ರಷ್ಟು ಓಲೈಕೆ ಮಾಡಿದ್ದು, ಇನ್ನೇಷ್ಟು ಮಾಡುತ್ತೀರಿ ಎಂದು ಕಿಡಿಕಾರಿದ್ದಾರೆ.
