ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಕೆಲವೆಡೆ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಪ್ರವೇಶಾತಿ ವೇಳೆಯೇ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಲು ನಿರ್ಧರಿಸಲಾಗಿದೆ. ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ನೀಡಲಾಗುವುದು.
ವಿಧಾನ ಪರಿಷತ್: ಶಾಲೆಗಳಲ್ಲಿ ಮೊಟ್ಟೆ ವಿತರಣೆ ಬಗ್ಗೆ ಕೆಲವು ಕಡೆ ಆಕ್ಷೇಪಣೆ, ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಪ್ರವೇಶಾತಿ ವೇಳೆಯೇ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬಿಜೆಪಿಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಜೀಂ ಪ್ರೇಮ್‌ಜಿ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಫೌಂಡೇಶನ್ ವರದಿ ನೀಡಿತ್ತು. ಪ್ರಮುಖವಾಗಿ ಮೊಟ್ಟೆ ತಿನ್ನದೇ ಇರಲು ವಾಡಿಕೆ/ ವೈಯಕ್ತಿಕ ಆಚರಣೆ, ಕೆಲವು ಪೋಷಕರು ಮೊಟ್ಟೆ ಪಡೆಯಲು ಒಪ್ಪಿಗೆ ನೀಡದೇ ಇರುವುದು ಗೊತ್ತಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳ ಪ್ರವೇಶಾತಿಯ ವೇಳೆಯೇ ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಮೊಟ್ಟೆ ಸೇವಿಸುವವರಿಗೆ ಮೊಟ್ಟೆ, ಸೇವಿಸದವರಿಗೆ ಬಾಳೆ ಹಣ್ಣು ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಒಂಬತ್ತು ಸಾವಿರ ಶಾಲೆಗಳ ಪೈಕಿ 568 ಶಾಲೆಗಳಲ್ಲಿ ಮೊಟ್ಟೆ ಸರಿಯಾಗಿ ವಿತರಿಸುತ್ತಿಲ್ಲ ಎಂದು ತಿಳಿಸಲಾಗಿತ್ತು.
ಕೆಲವು ವಿದ್ಯಾರ್ಥಿಗಳು ವಾರದಲ್ಲಿ ಕೆಲವು ದಿನ ಮೊಟ್ಟೆ ಸೇವಿಸಲು ನಿರಾಕರಿಸಿರುವುದು ಹಾಗೂ ಕೆಲವು ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ವಾರದ ಕೆಲವು ದಿನ ಮೊಟ್ಟೆ ನೀಡದಂತೆ ಸಭಾ ನಡವಳಿಕೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮೊಟ್ಟೆಯ ಬದಲು ಬಾಳೆಹಣ್ಣು ನೀಡಿರುವುದಾಗಿ ವರದಿ ಮಾಡಲಾಗಿದೆ.
ಮೊಟ್ಟೆ, ಬಾಳೆ ಹಣ್ಣು ಖರೀದಿಗೆ ಶಾಲಾಭಿವೃದ್ಧಿ ಸಮಿತಿಗಳಿಗೆ ನೇರವಾಗಿ ಹಣ ನೀಡಲಾಗುತ್ತದೆ. ಒಂದು ವೇಳೆ ನೀಡಿದ ಹಣದಲ್ಲಿ ಉಳಿತಾಯವಾದರೆ ಆ ಮೊತ್ತವನ್ನು ಮಕ್ಕಳಿಗೆ ಬಳಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
