Advocate Rakesh Kishore Slams CJI Gavai on Constitutional Dignity ದೇಶದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್, ಸಿಜೆಐ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕಾಪಾಡಬೇಕು ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿ (ಅ.7): ದೇಶದ ಮುಖ್ಯ ನ್ಯಾಯಮೂರ್ತಿ ಆಗಿರುವ ವ್ಯಕ್ತಿ ಸಾಂವಿಧಾನಿಕ ಉದ್ದೆಯ ಘನತೆಯನ್ನು ಕಾಪಾಡಬೇಕು ಎಂದು ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್ ಹೇಳಿದ್ದಾರೆ. ಮಂಗಳವಾರ ಎಎನ್‌ಐ ಜೊತೆ ಮಾತನಾಡಿದ ರಾಕೇಶ್ ಕಶೋರ್, ಸಿಜೆಐ ಬಿಆರ್ ಗವಾಯಿ ಅವರ ಕೆಲ ತೀರ್ಪುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದ ಮುಖ್ಯ ನ್ಯಾಯಾಧೀಶರು ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು. ರಾಜ್ಯ ಸರ್ಕಾರಗಳು ಬುಲ್ಡೋಜರ್ ಬಳಸುವ ಬಗ್ಗೆ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಕೂಡ ಅವರು ಟೀಕಿಸಿದ್ದಾರೆ.
"ಸಿಜೆಐ ಸಂವಿಧಾನದ ಹುದ್ದೆಯಲ್ಲಿ ಕುಳಿತಿದ್ದಾರೆ ಮತ್ತು ಅವರನ್ನು "ಮೈ ಲಾರ್ಡ್" ಎಂದು ಕರೆಯಲಾಗುತ್ತದೆ, ಆದ್ದರಿಂದ ಅವರು ಅದರ ಅರ್ಥವನ್ನು ತಿಳಿದುಕೊಳ್ಳಬೇಕು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು. ಬರೇಲಿಯಲ್ಲಿ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವ ಜನರ ವಿರುದ್ಧ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಕ್ರಮ ತಪ್ಪೇ ಎಂದು ನಾನು ಸಿಜೆಐ ಮತ್ತು ನನ್ನನ್ನು ವಿರೋಧಿಸುವ ಜನರನ್ನು ಕೇಳುತ್ತೇನೆ?" ಎಂದು ಕಿಶೋರ್ ಹೇಳಿದರು.
ಸಣ್ಣ ಸಮುದಾಯಗಳ ಗುಲಾಮರಾಗಿದ್ದೇವೆ ಎಂದ ರಾಕೇಶ್ ಕಿಶೋರ್
ವಿಷಯವೇನೆಂದರೆ, ನಾವು ಸಾವಿರ ವರ್ಷಗಳಿಂದ ಸಣ್ಣ ಸಮುದಾಯಗಳ ಗುಲಾಮರಾಗಿದ್ದೇವೆ. ನಾವು ಸಹಿಷ್ಣುರಾಗಿದ್ದೇವೆ, ಆದರೆ ನಮ್ಮ ಗುರುತಿಗೆ ಅಪಾಯ ಬಂದಾಗ ಯಾವುದೇ ಸನಾತನಿಗಳು ತಮ್ಮ ಮನೆಯಲ್ಲಿ ಮೌನವಾಗಿ ಕೂತಿರಬಾರದು ಎಂದು ನಾನು ಬಯಸುತ್ತೇನೆ. ಅವರು ತಮ್ಮ ಕೈಲಾದಷ್ಟು ಮಾಡಬೇಕು. ನಾನು ಪ್ರಚೋದಿಸುತ್ತಿಲ್ಲ, ಆದರೆ ಜನರು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಗಮನಿಸಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದರು.
ಬಾರ್ ಕೌನ್ಸಿಲ್ ತನ್ನನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿದ ಅವರು, ಕೌನ್ಸಿಲ್ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿದರು."ನನ್ನನ್ನು ಅಮಾನತುಗೊಳಿಸಲಾಗಿರುವ ವಕೀಲರ ಕಾಯ್ದೆಯ ಸೆಕ್ಷನ್ 35 ರ ಅಡಿಯಲ್ಲಿ ಶಿಸ್ತು ಸಮಿತಿಯನ್ನು ರಚಿಸಬೇಕು, ಅದು ನೋಟಿಸ್ ಕಳುಹಿಸುತ್ತದೆ ಮತ್ತು ನಾನು ಉತ್ತರಿಸುತ್ತೇನೆ. ಆದರೆ ಬಾರ್ ಕೌನ್ಸಿಲ್ ನನ್ನ ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದೆ. ಈಗ, ನಾನು ನನ್ನ ಕಕ್ಷಿದಾರರ ಶುಲ್ಕವನ್ನು ಹಿಂದಿರುಗಿಸಬೇಕು" ಎಂದು ಅವರು ಹೇಳಿದರು.
"ಸೆಪ್ಟೆಂಬರ್ 16ರಂದು ಸುಪ್ರೀಂ ಕೋರ್ಟ್ ಸಿಜೆಐ ಆ ಮಾತು ಹೇಳಿದ ನಂತರ ನನಗೆ ನಿದ್ರೆ ಬರಲಿಲ್ಲ, ಆದ್ದರಿಂದ ನಾನು ನಿರ್ಧರಿಸಿದ್ದೆ. ಯಾವುದೋ ದೈವಿಕ ಶಕ್ತಿ ನನ್ನನ್ನು ಎಚ್ಚರಗೊಳಿಸಿತ್ತು. 'ರಾಷ್ಟ್ರ ಉರಿಯುತ್ತಿದೆ ಮತ್ತು ನೀವು ನಿದ್ರಿಸುತ್ತಿದ್ದೀರಾ?' ಎಂದು ಕೇಳಿತು. ಮುಖ್ಯ ನ್ಯಾಯಾಧೀಶರು ನನ್ನನ್ನು ಹೋಗಲು ಬಿಟ್ಟಿದ್ದು ನನಗೆ ಆಶ್ಚರ್ಯ ತಂದಿದೆ. ಪೊಲೀಸರು ನನ್ನನ್ನು 3-4 ಗಂಟೆಗಳ ಕಾಲ ವಿಚಾರಣೆ ನಡೆಸಿದರು" ಎಂದು ವಕೀಲರು ಹೇಳಿದ್ದಾರೆ.
