ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಬಸ್ ಹಿಂದಕ್ಕೆ ಚಲಿಸುವಾಗ ಡ್ರೈವರ್ ಇರಲಿಲ್ಲ ಎಂಬುದು ತಿಳಿದುಬಂದಿದೆ. ಚಾಲಕನ ಅತಿಯಾದ ವೇಗ ಮತ್ತು ಇಳಿಜಾರಿನಲ್ಲಿ ಬಸ್ ನಿಲ್ಲಿಸಿ ಕೆಳಗೆ ಇಳಿದು ಹೋಗಿದ್ದೇ ಅಪಘಾತಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ/ಬೆಂಗಳೂರು (ಆ.28): ಮಂಗಳೂರಿನ ಡಿಪೋದ ಕೆಎಸ್‌ಆರ್‌ಟಿಸಿ ಬಸ್ ತಲಪಾಡಿ ಬಸ್ ನಿಲ್ದಾಣದಲ್ಲಿ ಆಟೋಗೆ ಗುದ್ದಿ 5 ಜನರ ಸಾವಿಗೆ ಕಾರಣವಾಗಿದೆ. ಇದೀಗ ಮಾಧ್ಯಮಗಳಿಗೆ ಸಿಕ್ಕಿರುವ ಸಿಸಿಟಿವಿ ಕ್ಯಾಮೆರಾದ ವಿಡಿಯೋ ದೃಶ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಇಳಿಜಾರಿನಲ್ಲಿ ಹಿಂದಕ್ಕೆ ಬಂದು ನಿಂತಿದ್ದ ಹಿಂಬದಿಯಿಂದಲೇ ಜೋರಾಗಿ ಗುದ್ದಿರುವುದು ಕಾಣುತ್ತದೆ. ಆದರೆ, ಹೀಗೆ ಹಿಂದಕ್ಕೆ ಬರುತ್ತಿರುವ ಬಸ್ಸಿನಲ್ಲಿ ಡ್ರೈವರ್ರೇ ಇರಲಿಲ್ಲ ಎಂಬುದನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಮಂಗಳೂರು-1ನೇ ಘಟಕದ ವಾಹನ ಸಂಖ್ಯೆ:KA19 F3407 ಮಾರ್ಗಸಂಖ್ಯೆ 129/130 ಕಾಸರಗೋಡು - ಮಂಗಳೂರು ಮಾರ್ಗದಲ್ಲಿ ಚಾಲಕ ನಿಜಲಿಂಗಪ್ಪ ಚಲವಾದಿ ಅವರು ಇಂದು ಮಧ್ಯಾಹ್ನ 12.30ರ ಸಮಯದಲ್ಲಿ ಕಾಸರಗೋಡುನಿಂದ ನಿರ್ಗಮಿಸಿದ್ದಾರೆ. ಮಧ್ಯಾಹ್ನ 13.45ಕ್ಕೆ ತಲಪಾಡಿ ಟೋಲ್‌ಗಿಂತ 150 ಮೀಟರ್ ಹಿಂದಯೇ ಅತಿ ವೇಗವಾಗಿ ಹೋಗುವಾಗ ರಸ್ತೆಗೆ ಅಡ್ಡ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದಾರೆ. ಆದರೆ, ಅಷ್ಟರಲ್ಲಿ ಬಸ್-ಆಟೋಗೆ ಗುದ್ದಿದ್ದು, ಸ್ಕಿಡ್ ಆಗಿ ತಿರುಗಿ ನಿಂತಿದೆ. ಆಗ ಬಸ್ಸಿನ ಡ್ರೈವರ್ ಸೀಟಿನಿಂದ ಇಳಿದು ಓಡಿ ಹೋಗಿದ್ದಾನೆ. ಆದರೆ, ಬಸ್ ಇಳಿಜಾರು ರಸ್ತೆಯಲ್ಲಿ ನಿಂತಿದ್ದರಿಂದ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಮತ್ತೊಂದು ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಇತರ ಪ್ರಯಾಣಿಕರಿಗೂ ಡಿಕ್ಕಿ ಹೊಡೆದು ನಿಂತಿದೆ. ಅಂದರೆ, ಎರಡನೇ ಅಪಘಾತ ನಡೆದಾಗ ಬಸ್ಸಿನಲ್ಲಿ ಡ್ರೈವರ್ರೇ ಇರಲಿಲ್ಲ ಎಂದು ನಿಗಮದಿಂದ ತಿಳಿಸಲಾಗಿದೆ.
ಮುಂದುವರೆದು, ಈ ಅಪಘಾತದಲ್ಲಿ ಮುಂದಿನಿಂದ ಡಿಕ್ಕಿಹೊಡೆದ ಅಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದಂತೆ, ಬಸ್ ಹಿಂದಕ್ಕೆ ಬಂದು ಗುದ್ದಿದ ಸ್ಥಳದಲ್ಲಿ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಒಟ್ಟು 6 ಜನರು ಮೃತಪಟ್ಟಿದ್ದು, ಹಿಂಬದಿಯಿಂದ ಡಿಕ್ಕಿಯಾಗಿದ್ದ ವೇಳೆ 2 ಜನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊನ್ನೆ ಎಫ್‌ಸಿ ರಿನೀವಲ್, ನಿನ್ನೆ ಸಂಚಾರ ಆರಂಭ, ಇಂದು ಆಕ್ಸಿಡೆಂಟ್!
ಇನ್ನು ಈ ವಾಹನವನ್ನು ನಿನ್ನೆ (ಆ.27ರಂದು) ಸೇವೆಗೆ ನಿಯೋಜಿಸಿದ್ದು ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540 ಕಿ.ಮೀ. ಕ್ರಮಿಸಿರುತ್ತದೆ. ಅಲ್ಲದೇ ಈ ವಾಹನವು ಆ.26 ರಂದು ಫಿಟ್ನೆಸ್ ಸರ್ಟಿಫಿಕೇಟ್ (FC) ರಿನೀವಲ್ ಮಾಡಿಸಲಾಗಿತ್ತು. ಆದ್ದರಿಂದ ಯಾವುದೇ ತಾಂತ್ರಿಕ ದೋಷದಿಂದ ಸಂಭವಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ ಡ್ರೈವರ್ 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಮಾರ್ಗದಲ್ಲಿಯೇ 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ.
ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ಈ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕಲ್ಪಿಸಲಿ ಎಂದು ಕೋರುತ್ತೇವೆ. ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ತಿಳಿಸಿದ್ದಾರೆ.
ಮೃತರ ಹೆಸರು, ವಿಳಾಸ ಇಲ್ಲಿದೆ:
ಕರ್ನಾಟಕ-ಕೇರಳ ಗಡಿ ತಲಪಾಡಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಅಜ್ಜಿನಡ್ಕ ನಿವಾಸಿ ಖತೀಜ(60), ಅವರ ತಂಗಿ ನಫೀಸಾ (52), ಖತೀಜ ಅವರ ಅಣ್ಣನ ಮಗಳು ಹಸೀನ (13), ತಂಗಿಯ ಮಗಳು ಆಯಿಷ ಫಿದಾ(19) ಖತೀಜ ಅವರ ಮನೆಗೆ ಬಂದಿದ್ದ ಸಂಬಂಧಿ ಮಹಿಳೆ ಹವ್ವಮ್ಮ (70) ಹಾಗೂ ಅಜ್ಜಿನಡ್ಕದ ರಿಕ್ಷಾ ಚಾಲಕ ಹೈದರ್ ಆಲಿ (47) ಮೃತರಾಗಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಶಾಲೆಗೆ ರಜೆ ಇದ್ದುದರಿಂದ ಖತೀಜಾ ಆಟೋ ರಿಕ್ಷಾದಲ್ಲಿ ಮಂಜೇಶ್ವರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಕಾಸರಗೋಡು ಕಡೆಯಿಂದ ಬಂದ ಬಸ್ ಆಟೋದಲ್ಲಿದ್ದ 6 ಮಂದಿಯನ್ನೂ ಬಲಿ ಪಡೆದಿದೆ. ಸ್ಥಳದಲ್ಲಿ ಬಸ್ಸಿಗೆ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರು ಕೂಡ ಗಂಭೀರ ಗಾಯಗೊಂಡಿದ್ದಾರೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಬಂದು ಕೇಸು ದಾಖಲಿಸಿದ್ದಾರೆ.
