ತಲಪಾಡಿಯಲ್ಲಿ ಬ್ರೇಕ್ ವೈಫಲ್ಯದಿಂದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದೆ.

ದಕ್ಷಿಣ ಕನ್ನಡ (ಆ.28): ಬ್ರೇಕ್ ವೈಫಲ್ಯದಿಂದ ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮಗು ಸೇರಿ ಐವರು ಸಾವನ್ನಪ್ಪಿದ್ದಾರೆ. ಜೊತೆಗೆ, ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅಪಘಾತ ಗುರುವಾರ ಮಧ್ಯಾಹ್ನ ತಲಪಾಡಿಯಲ್ಲಿ ಸಂಭವಿಸಿದೆ.

ಘಟನೆಯ ವಿವರ:

ಗುರುವಾರ ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ತಲಪಾಡಿ ಬಸ್ ನಿಲ್ದಾಣಕ್ಕೆ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್, ಬ್ರೇಕ್ ವೈಫಲ್ಯದಿಂದ ನಿಯಂತ್ರಣ ಕಳೆದುಕೊಂಡು ನಿಲ್ದಾಣದಲ್ಲಿ ಕಾಯುತ್ತಿದ್ದ ಜನರ ಮೇಲೆ ನುಗ್ಗಿದೆ. ಬಸ್‌ನ ಭೀಕರ ಡಿಕ್ಕಿಗೆ ನಿಲ್ದಾಣದಲ್ಲಿದ್ದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಇದಲ್ಲದೆ, ಈ ದುರ್ಘಟನೆಯಲ್ಲಿ ಒಂದು ಮಗು ಕೂಡ ಪ್ರಾಣ ಕಳೆದುಕೊಂಡಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ, ಕೆಲವರು ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಆಟೋರಿಕ್ಷಾದೊಳಗೆ ಕುಳಿತಿದ್ದು, ಅವರಿಗೂ ಗಾಯಗಳಾಗಿವೆ.

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ನೀಟ್ ಪರೀಕ್ಷೆ ಪಾಸ್ ಮಾಡಿದ ಒಡಿಶಾದ ಶುಭಂ

ಗಾಯಾಳುಗಳ ಸ್ಥಿತಿ:

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಏಳು ಮಂದಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ಮುಂದುವರೆದಿದೆ. ಬಸ್ ಚಾಲಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೇ ಅಥವಾ ಬಸ್‌ನ ತಾಂತ್ರಿಕ ದೋಷವೇ ಕಾರಣವೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕರು ಸಾರಿಗೆ ಇಲಾಖೆಯ ನಿರ್ವಹಣಾ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಮಾಹಿತಿ, 2024ರಿಂದ ಬಿಎಂಟಿಸಿಗೆ ಬಲಿಯಾಗಿದ್ದಾರೆ 80 ಜನ!

ಕೆಸಿ ರೋಡ್‌ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಅಪಘಾತ ನಡೆದಿದ್ದು, ರಿಕ್ಷಾದಲ್ಲಿದ್ದ ಕೆಸಿ ರೋಡ್ ಮೂಲದವರೆನ್ನಲಾದ ಐವರು ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದೆ ಎನ್ನಲಾಗುತ್ತಿದೆ. ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.